ಶನಿವಾರ, ಡಿಸೆಂಬರ್ 7, 2019
22 °C

ಉಸ್ತುವಾರಿ ಸಚಿವರ ನೇಮಕ ಸಿಎಂ ಪರಮಾಧಿಕಾರ: ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟ (ಬ್ರಹ್ಮಾವರ): ‘ಉಸ್ತುವಾರಿ ಸಚಿವರ ನೇಮಕ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ಪ್ರಶ್ನಿಸಲಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಾಲಿಗ್ರಾಮ ಚೇಂಪಿಯಲ್ಲಿ ಮಂಗಳವಾರ ನಡೆದ ವಿಶ್ವಕರ್ಮ ಯಜ್ಞದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜ್ಯದ 30 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಇರುವ 16 ಸಚಿವರಿಗೆ ಹಂಚಬೇಕಾಗಿರುವುದರಿಂದ ಒಂದಷ್ಟು ಸಚಿವರಿಗೆ ಅಕ್ಕ ಪಕ್ಕದ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಐದು ಮಂದಿ ಶಾಸಕರು ಅವರವರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರಬಹುದು. ನನಗೆ ಉಡುಪಿಯ ಉಸ್ತುವಾರಿ ಸ್ಥಾನ ತಪ್ಪಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ ಎಂದು ನಾನು ಭಾವಿಸಲಾರೆ. ಅವರೆಲ್ಲರಿಗೂ ನನ್ನ ಮೇಲೆ ಪ್ರೀತಿ, ವಿಶ್ವಾಸವಿದೆ’ ಎಂದರು.

‘ರಾಜ್ಯದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿರುವ ಜಿಲ್ಲೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ ದಕ್ಷಿಣ ಕನ್ನಡಕ್ಕೆ ಇದೆ. ಇಲ್ಲಿ 250 ಗ್ರಾಮ ಪಂಚಾಯಿತಿಗಳಿದ್ದು, ನಮ್ಮದೇ ಪಕ್ಷದ 7 ಮಂದಿ ಶಾಸಕರು, ಸಂಸದರಿದ್ದಾರೆ. ಜತೆಗೆ ನಮ್ಮ ಪಕ್ಷದ ರಾಜಾಧ್ಯಕ್ಷರು ಇಲ್ಲಿನವರೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ದೇಗುಲಗಳಿದ್ದು ನಾನು ಮುಜರಾಯಿ ಸಚಿವನಾಗಿರುವುದರಿಂದ ಇವುಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ಇಲ್ಲಿನ ಕಿರುಬಂದರು, ಬೃಹತ್ ಬಂದರುಗಳಿದ್ದು ಅವುಗಳನ್ನು ಅಭಿವೃದ್ಧಿ ಮಾಡುತ್ತೇನೆ. ಮೀನುಗಾರಿಕೆಯ ಅಭಿವೃದ್ಧಿಯ ಸಲುವಾಗಿ ಕೆಲಸ ಮಾಡುತ್ತೇನೆ. ಒಳನಾಡು ಜಲಸಾರಿಗೆ ಇಲಾಖೆಯ ಮೂಲಕ ಈ ಭಾಗದಲ್ಲಿ ಬೋಟ್‌ಹೌಸ್‌ಗಳ ನಿರ್ಮಾಣಕ್ಕೆ ಒತ್ತು ನೀಡುವುದರ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ’ ಎಂದರು.

 

ಪ್ರತಿಕ್ರಿಯಿಸಿ (+)