ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ ಸಿ.ಎ ಬ್ಯಾಂಕ್ ಯಶಸ್ಸಿನ ಪಥ

64 ವರ್ಷಗಳ ಸುದೀರ್ಘ ಪಯಣ, ನೂತನ ಸೇವಾ ಕೇಂದ್ರದ ಉದ್ಘಾಟನೆ
Last Updated 11 ಡಿಸೆಂಬರ್ 2022, 6:48 IST
ಅಕ್ಷರ ಗಾತ್ರ

ಕೋಟ(ಬ್ರಹ್ಮಾವರ): ಕೋಟದ ಗ್ರಾಮೀಣ ಭಾಗದಲ್ಲಿ ಸುದೀರ್ಘ ಆರೂವರೆ ದಶಕಗಳ ಸಾರ್ಥಕ ಸಹಕಾರ ಸೇವೆ ಸಲ್ಲಿಸಿ ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿರುವ ಕೋಟ ಸಹಕಾರಿ ವ್ಯವಸಾಯಿಕ ಸಂಘದ ನೂತನ ಸಭಾಭವನ, ಗೋದಾಮು ಮತ್ತು ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಲಿದೆ.

ಸಂಘದ ಬೆಳವಣಿಗೆ: ಕೋಟ, ಹಂದಟ್ಟು, ಕಾರ್ಕಡ ಮತ್ತು ಬನ್ನಾಡಿ ಎನ್ನುವ ನಾಲ್ಕು ಕೃಷಿಪತ್ತಿನ ಸಹಕಾರ ಸಂಘಗಳನ್ನು ವಿಲೀನಗೊಳಿಸಿ ‘ಕೋಟ ಸಹಕಾರಿ ವ್ಯವಸಾಯಿಕ ಬೇಂಕು’ ಎಂದು 1958ರ ಸೆಪ್ಟೆಂಬರ್‌ 9ರಂದು ನೋಂದಣಿಗೊಂಡ ಇಂದಿನ ಕೋಟ ಸಹಕಾರಿ ವ್ಯವಸಾಯಿಕ ಬ್ಯಾಂಕ್‌ 1958ರ ನವೆಂಬರ್‌ನಲ್ಲಿ ಕಾರ್ಯಾರಂಭಗೊಂಡಿತು. ಸಂಘದ ಸ್ಥಾಪನೆಯಲ್ಲಿ ಆ ಕಾಲದ ಸಹಕಾರಿಗಳಾದ ಗಿಳಿಯಾರಿನ ಕೃಷ್ಣದೇವ ಐತಾಳ, ಡಾ.ಆನಂದ ಶೆಟ್ಟಿ, ಮಣೂರು ನಾಗಪ್ಪ ಹೊಳ್ಳ, ಕೋಟತಟ್ಟಿನ ಶಂಕರನಾರಾಯಣ ಹಂದೆ, ಬನ್ನಾಡಿ ಸುಬ್ಬಣ್ಣ ಹೆಗ್ಡೆ, ಮಹಾಬಲ ಶೆಟ್ಟಿ, ರಾಮ ಅಲ್ಸೆ, ಪಾರಂಪಳ್ಳಿ ಕೃಷ್ಣ ಉಪಾದ್ಯ, ಶಂಕರ ಮಧ್ಯಸ್ಥ, ಕಾರ್ಕಡ ಲಕ್ಷ್ಮೀನಾರಾಯಣ ಹೊಳ್ಳ ಪ್ರಮುಖರಾಗಿದ್ದರು. ನಂತರ ಸಹಕಾರಿ ಪಿತಾಮಹರೆನಿಸಿಕೊಂಡ ಮೊಳಹಳ್ಳಿ ಶಿವರಾಯರೊಂದಿಗೆ ಪಳಗಿದ ಬೈಂದೂರು ಚಂದ್ರಶೇಖರ ಹೊಳ್ಳ ಅವರ ಸೇವೆಯನ್ನು ಎರವಲು ನೀಡಿ ಕೃಷಿ ಸಾಲಕ್ಕೆ ಸೀಮಿತವಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ರಂಗದಲ್ಲಿ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ವಿಸ್ತರಿಸಲಾಯಿತು.

ದಾನಿಗಳ ಸಹಕಾರದಿಂದ ಕೋಟ, ಸಾಲಿಗ್ರಾಮ, ಬನ್ನಾಡಿಯಲ್ಲಿ ಗೋದಾಮು ನಿರ್ಮಾಣ ಮಾಡಲಾಯಿತು. ಆಗಿನ ಅಧ್ಯಕ್ಷರಾಗಿದ್ದ ದಿ.ಎಚ್‌.ನರಸಿಂಹ ಐತಾಳ ಅವರು ಧಾರ್ಮಿಕ ದತ್ತಿ ಇಲಾಖೆ ಅನುಮತಿ ಪಡೆದು,ಕೋಟ ಹೃದಯ ಭಾಗದಲ್ಲಿದ್ದ ದೇವಳದಿಂದ 0.25 ಎಕರೆ ಸ್ಥಿರಾಸ್ತಿಯನ್ನು ಸಾಂಕೇತಿಕಪ್ರತಿಫಲಕ್ಕೆ ಖರೀದಿ ಮಾಡಿ, ಕಟ್ಟಡ ನಿರ್ಮಾಣಕ್ಕೆ ಹಣಕಾಸಿನ ಸಮಸ್ಯೆಯಾದಾಗ ಸದಸ್ಯರ ಡಿವಿಡೆಂಡ್ ಬಳಿಸಿಕೊಂಡು, ₹ 38 ಸಾವಿರ ವಿನಿಯೋಗದಲ್ಲಿ ಸಹಕಾರ ಸೌಧ ಎನ್ನುವ ಸ್ವಂತ ಕಟ್ಟಡ ರೂಪುಗೊಂಡಿತು.

1969ರಲ್ಲಿ ಸಾಲಿಗ್ರಾಮ, 1973ರಲ್ಲಿ ಬನ್ನಾಡಿ, 1975ರಲ್ಲಿ ಕೋಟ ಪಡುಕೆರೆಯಲ್ಲಿ, 1980ರಲ್ಲಿ ಸಹಕಾರ ಸೌಧ ಎಂಬ 4ನೇ ಶಾಖೆಯನ್ನು ಆರಂಭಿಸಲಾಯಿತು. 1970ರ ದಶಕದಲ್ಲಿ ಯಾಂತ್ರೀಕೃತ ಉಳುಮೆ ಯಂತ್ರವನ್ನು ಖರೀದಿಸಿ ರೈತರಿಗೆ ಬಾಡಿಗೆಗೆ ನೀಡಿ ದಾಖಲೆ ನಿರ್ಮಿಸಲಾಯಿತು. 1968-69ರಲ್ಲಿ ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ್‌ ಎಂದು ಸಹಕಾರ ಅಪೆಕ್ಸ್ ಬ್ಯಾಂಕ್‌ ಪ್ರಶಂಸಿಸಿ, ನಗದು ಬಹುಮಾನ ನೀಡಿತ್ತು.

ಪ್ರಸ್ತುತ 13 ಶಾಖೆಗಳನ್ನು ಹೊಂದಿ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುತ್ತಿದೆ. ಸಂಘದ ಸಾಧನೆಗೆ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳು ಬಂದಿವೆ. ನಬಾರ್ಡ್‌ ಅಧಿಕಾರಿಗಳು, ರಾಜ್ಯದ ಅಧಿಕಾರಿಗಳು ಇಲ್ಲಿಯ ಕಾರ್ಯವೈಖರಿಯನ್ನು ನೋಡಿ, ಶ್ಲಾಘಿಸಿದ್ದಾರೆ.

ಪ್ರಸ್ತುತ ಕೋಟ ತಿಮ್ಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ದೂರದರ್ಶಿತ್ವದ ಯೋಜನೆಗಳ ಮೂಲಕ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಘದ ಉಪಾಧ್ಯಕ್ಷರಾಗಿ ರಾಜೀವ ದೇವಾಡಿಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ಆಗಿ ಶರತ್‌ ಕುಮಾರ್ ಶೆಟ್ಟಿ, ನಿರ್ದೇಶಕರಾಗಿ ಟಿ.ಮಂಜುನಾಥ ಗಿಳಿಯಾರು, ಡಾ.ಕೃಷ್ಣ ಕಾಂಚನ್, ಕೆ.ಉದಯ ಕುಮಾರ್ ಶೆಟ್ಟಿ, ಮಹೇಶ ಶೆಟ್ಟಿ ಎಂ. ರವೀಂದ್ರ ಕಾಮತ್, ರಾಜೇಶ ಉಪಾಧ್ಯ. ಎಚ್‌.ನಾಗರಾಜ ಹಂದೆ, ರಂಜಿತ್ ಕುಮಾರ್, ಗೀತಾ ಶಂಭು ಪೂಜಾರಿ, ಪ್ರೇಮಾ ಎಸ್, ರಶ್ಮಿತಾ ಕೆ, ಶ್ರೀಕಾಂತ ಶೆಣೈ, ಭಾಸ್ಕರ ಶೆಟ್ಟಿ, ಅಚ್ಚುತ ಪೂಜಾರಿ, ರಾಜಾರಾಮ ಶೆಟ್ಟಿ (ವಲಯ ಮೇಲ್ವಿಚಾರಕರು) ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT