ಡಿಕೆಶಿ ಪಠ್ಯ ಪುಸ್ತಕ ಹರಿದಿದ್ದು ಆತಂಕಕಾರಿ: ಕೋಟ

ಉಡುಪಿ: ಪಠ್ಯ ಪರಿಷ್ಕರಣೆ ಸಂಬಂಧ ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ಸರ್ಕಾರ ಉತ್ತರಿಸುತ್ತಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಠ್ಯಪುಸ್ತಕ ಹರಿದು ಹಾಕಿರುವುದು ಆತಂಕಕಾರಿ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಡಿ.ಕೆ.ಶಿವಕುಮಾರ್ ತಮ್ಮ ವರ್ತನೆಯ ಬಗ್ಗೆ ಪುನರ್ ಆಲೋಚಿಸಿ ವಿಷಾದ ವ್ಯಕ್ತಪಡಿಸಬೇಕು. ಪ್ರತಿರೋಧಕ್ಕೆ ಸದನದೊಳಗೆ ಅವಕಾಶಗಳಿದ್ದರೂ ಸಾರ್ವಜನಿಕವಾಗಿ ಪುಸ್ತಕ ಹರಿದಿರುವುದು ಖಂಡನೀಯ ಎಂದರು.
ಶೇಂದಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡುವಂತೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವ ಬದಲು ಭಿನ್ನವಾಗಿ ಯೋಚಿಸಬೇಕು ಎಂದು ಸಚಿವರು ಮನವಿ ಮಾಡಿದರು.
30 ವರ್ಷಗಳ ಹಿಂದೆ ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಉಡುಪಿ ದಕ್ಷಿಣ ಕನ್ನಡ ಹೊರತುಪಡಿಸಿ ರಾಜ್ಯದಾದ್ಯಂತ ಶೇಂದಿ ನಿಷೇಧಿಸಲಾಗಿತ್ತು. ಈಗ ಎಲ್ಲ ಜಿಲ್ಲೆಗಳಲ್ಲಿ ಶೇಂದಿ ಆರಂಭಿಸುವಂತೆ ಶ್ರೀಗಳು ಬೇಡಿಕೆ ಇಟ್ಟಿದ್ದಾರೆ. ಶೇಂದಿ ಹೊರತುಪಡಿಸಿ ತೆಂಗಿನ ಮರದಿಂದ ತೆಗೆದ ನೀರಾ ಮಾರಾಟಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ.ನೀರಾವನ್ನೇ ಶೇಂದಿ ಮಾಡುವ ಸಾದ್ಯತೆಗಳಿದ್ದು ಚರ್ಚೆ ನಡೆಯಬೇಕಿದೆ ಎಂದರು.
ನಾರಾಯಣ ಗುರು ನಿಗಮ ರಚಿಸುವ ಬೇಡಿಕೆಯನ್ನು ಶ್ರೀಗಳು ಮುಂದಿಟ್ಟಿದ್ದಾರೆ. ಬಹಳಷ್ಟು ನಿಗಮ ಮಂಡಳಿಗಳ ರಚನೆಗೆ ಮುಖ್ಯಮಂತ್ರಿ ಚರ್ಚೆ ಮಾಡುವರಿದ್ದಾರೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿರುವ ₹ 400 ಕೋಟಿ ಅನುದಾನದಲ್ಲಿ ಈಡಿಗ ಬಿಲ್ಲವ ಸಮುದಾಯಕ್ಕೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಚನೆ ಇದೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.