ಶನಿವಾರ, ಜನವರಿ 28, 2023
24 °C
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

ನಾರಾಯಣ ಗುರು ನಿಗಮದ ಹಿಂದೆ ಚುನಾವಣಾ ಗಿಮಿಕ್ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನಾರಾಯಣ ಗುರುಗಳ ಕೋಶವನ್ನು ನಿಗಮವನ್ನಾಗಿ ಪರಿವರ್ತಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ ಎಂದರು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ನಾರಾಯಣ ಗುರುಗಳ ಕೋಶವನ್ನು ನಿಗಮವನ್ನಾಗಿ ಮಾಡಬೇಕು ಎಂಬ ಜನಾಭಿಪ್ರಾಯ ಹಾಗೂ ಸಮಾಜದ ಮುಖಂಡರ ಒತ್ತಾಯಕ್ಕೆ ಸರ್ಕಾರ ಸ್ಪಂದಿಸಿದೆ. ಕೋಶವನ್ನು ತೆಗೆದು ನಿಗಮವನ್ನಾಗಿ ಪರಿವರ್ತಿಸಿದೆ ಎಂದರು.

ನಾರಾಯಣ ಗುರು ನಿಗಮ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಮುದಾಯದ ಸ್ವಾಮೀಜಿ ಪಾದಯಾತ್ರೆಗೆ ನಿರ್ಧರಿಸಿರುವುದು ಗಮನಕ್ಕೆ ಬಂದಿದೆ. ಪಾದಯಾತ್ರೆ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕಿದೆ. ಸರ್ಕಾರ ಸಮುದಾಯದ ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದು ಶೀಘ್ರ ನಿಗಮಕ್ಕೆ ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಲಿದೆ ಎಂದರು.

ನಾರಾಯಣ ಗುರುಗಳ ನಿಗಮ ಸ್ಥಾಪನೆ ಹಿಂದೆ ಚುನಾವಣಾ ಗಿಮಿಕ್ ಇಲ್ಲ. ಸಮುದಾಯದ ಬಹುಕಾಲದ ಬೇಡಿಕೆಯನ್ನು ಸರ್ಕಾರ ಈಡೇರಿದೆಯಷ್ಟೆ. ರಾಜ್ಯದಲ್ಲಿ 208 ಜಾತಿಗಳು ಹಿಂದುಳಿದ ವರ್ಗಗಳಡಿ ಬರಲಿದ್ದು, ಹೆಚ್ಚಿನ ಜಾತಿಗಳು ನಿಗಮ ಮಂಡಳಿ ಬೇಡಿಕೆ ಇರಿಸಿದ್ದು ಸರ್ಕಾರ ಪರಿಶೀಲಿಸುತ್ತಿದೆ ಎಂದರು.

‘ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲವಿಲ್ಲ. ಆಕಾಂಕ್ಷಿಗಳು ಸ್ಪರ್ಧೆ ಬಯಸಿ ರಾಜ್ಯದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದ ನಾಯಕರು ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಿದ್ದಾರೆ ಎಂದು ಕೋಟ ಹೇಳಿದರು.

2007ರಿಂದ ಇಲ್ಲಿಯವರೆಗೂ ಬೈಂದೂರು ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದಾನೆ. ಹಾಗಾಗಿ, ಕ್ಷೇತ್ರಕ್ಕೆ ಭೇಟಿನೀಡುವುದು ಸಹಜ. ಇದೇ ಕಾರಣಕ್ಕೆ ಬೈಂದೂರಿನಿಂದ ಸ್ಪರ್ಧಿಸುತ್ತೇನೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮೇಲ್ಮನೆ (ವಿಧಾನ ಪರಿಷತ್) ಚಿಂತಕರ ಚಾವಡಿಯಾಗಿದ್ದು, ಹಿರಿಯರು, ಮೇಧಾವಿಗಳು ಇದ್ದಾರೆ. ಇಂತಹ ಸಧನದಲ್ಲಿ ಪ್ರತಿಪಕ್ಷ ನಾಯಕನಾಗಿ, ಮೂರು ಬಾರಿ ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಮುಂದೆಯೂ ವಿಧಾನ ಪರಿಷತ್‌ನಲ್ಲಿಯೇ ಮುಂದುವರಿಯಬೇಕು ಎಂಬುದು ವೈಯಕ್ತಿಕ ಅಪೇಕ್ಷೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.