ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಕಾರ್ಯಕ್ರಮ ಮತ್ತೆ ಆರಂಭ

ಅಧಿಕಾರಿಗಳ ಸಭೆಯಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 2 ಏಪ್ರಿಲ್ 2022, 2:46 IST
ಅಕ್ಷರ ಗಾತ್ರ

ಕುಂದಾಪುರ: ‘ಕೋವಿಡ್-19 ಕಾರಣದಿಂದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಎಲ್ಲ ಜನಪರ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪುನರಾಂಭಿಸಲು ಮುಖ್ಯಮಂತ್ರಿ ಒಪ್ಪಿಗೆ ನೀಡಿರುವುದು ಸಮಾಧಾನ ತಂದಿದೆ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸಮಾಜ ಕಲ್ಯಾಣ, ಕಂದಾಯ ಹಾಗೂ ಇತರ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದುಳಿದ ವರ್ಗದ 32 ಸಮುದಾಯ ಭವನಗಳಿಗೆ ಏಕಕಾಲದಲ್ಲಿ ₹ 6.74 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ನಾರಾಯಣ ಗುರುಗಳ ಹೆಸರಿನಲ್ಲಿ ಅಂದಾಜು ₹ 29 ಕೋಟಿ ವೆಚ್ಚದಲ್ಲಿ ಶಿವಮೊಗ್ಗ, ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 4 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಸ್ತಾವದ ಮೇರೆಗೆ ಒಂದು ಶಾಲೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಬೇಕು ಎನ್ನುವ ಯೋಚನೆ ಇದೆ’ ಎಂದು ಹೇಳಿದರು.

‘ಸಿದ್ದಾಪುರದ ವಸತಿ ಶಾಲೆಯ ವಿಚಾರದಲ್ಲಿ ಒಂದಷ್ಟು ಗೊಂದಲ ಗಳಾಗಿದ್ದರಿಂದ, ಅನಿವಾರ್ಯವಾಗಿ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕಾಯಿತು. ಇದೀಗ ಬೇರೆಯವರಿಗೆ ಪರಭಾರೆಯನ್ನು ವಹಿಸಲಾಗಿದೆ. ಇದೀಗ ವಿವಾದ ಬಗೆಹರಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಅಡ್ವೋಕೇಟ್ ಜನರಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ವಾರದ ಒಳಗೆ ಶಾಸಕರ ಲಭ್ಯತೆಯನ್ನು ನೋಡಿಕೊಂಡು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದರು.

‘ರಾಮಕ್ಷತ್ರೀಯ ಹಾಗೂ ಹಿಂದೂ ಕ್ಷತ್ರೀಯ ಒಂದೇ ಆಗಿರುವುದರಿಂದ ನಮ್ಮನ್ನು ರಾಮಕ್ಷತ್ರೀಯ ಎಂದು ಘೋಷಣೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕೆಲವರ ಪ್ರಸ್ತಾಪ ಬಂದಿರುವುದರಿಂದ ಈ ಕುರಿತು ಅಧ್ಯಯನ ನಡೆಸಿ ಅಂತಿಮವಾಗಿ ಆಯೋಗ ಅಥವಾ ಇಲಾಖೆ ಘೋಷಣೆ ಮಾಡಲಿದೆ’ ಎಂದರು.

‘ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ 21 ಸೈನಿಕ ಶಾಲೆಯನ್ನು ತೆರೆಯಲು ಅನುಮೋದನೆ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಇಲಾಖೆಯ ಮೂಲಕ ₹ 180 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಕಟ್ಟಡದಲ್ಲಿ ಒಂದು ಸೈನಿಕ ಶಾಲೆ ಆರಂಭಿಸಲು ಅನುಮೋದನೆ ದೊರಕಿರುವುದು ನಮಗೆ ಸಂತೋಷವನ್ನು ಉಂಟು ಮಾಡಿದೆ. ಈ ತಿಂಗಳಲ್ಲೇ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶಾಲೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ, ತಹಶೀಲ್ದಾರ್ ಕಿರಣ್ ಗೋರಯ್ಯ, ಸಚಿವರ ಆಪ್ತ ಸಹಾಯಕ ಹರೀಶ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದೇವೇಂದ್ರ ಬಿರಾದಾರ್, ದೂದ್ ಪೀರ್, ರಾಘವೇಂದ್ರ ವರ್ಣೀಕರ್, ಗಣೇಶ್ ನಾಯಕ್ ಇದ್ದರು.

‘ಉತ್ತರ ಕೊಡಲಾಗದು’

‘ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಇತಿಹಾಸ ಗೊತ್ತಿಲ್ಲದವರು ನೀಡಿದ ಹೇಳಿಕೆಗೆ ಉತ್ತರ ಕೊಡಲಾಗದು’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇತಿಹಾಸ, ನಮಗೆ ಗೊತ್ತಿರುವ ಸತ್ಯಾಂಶಗಳ ಮೇಲೆ, ನಾವು ನಂಬಿರುವ ದಾಖಲೆಗಳ ಅಧಾರದಲ್ಲಿ ರಾಯಣ್ಣ ಹಾಗೂ ಚೆನ್ನಮ್ಮ ಬಗ್ಗೆ ಪರಿಪೂರ್ಣ ಗೌರವ ಹೊಂದಿದ್ದೇವೆ’ ಎಂದು ಹೇಳಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT