ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಗೆ ಕ್ಯಾಬಿನೆಟ್‌ ಪಟ್ಟ

ಉಡುಪಿ ಜಿಲ್ಲೆಗೆ ಒಲಿದ ಏಕೈಕ ಸಚಿವ ಸ್ಥಾನ
Last Updated 20 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ಉಡುಪಿ ಜಿಲ್ಲೆಗೆ ಪ್ರಾತಿನಿಧ್ಯ ದೊರೆತಿದೆ. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕ್ಯಾಬಿನೆಟ್‌ ಸಚಿವರಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಕೀಯ ಹಾದಿ...

ಬ್ರಹ್ಮಾವರ ತಾಲ್ಲೂಕಿನ ಕೋಟ ಮೂಲದ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಪ್ರಬಲ ಹಾಗೂ ರಾಜ್ಯದ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದವರು. ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಕೋಟ, ರಾಜಕೀಯ ಕ್ಷೇತ್ರದಲ್ಲಿ ಹಂತ ಹಂತವಾಗಿ ಮೇಲೇರಿದವರು.‌

ಸಂಘ ಪರಿವಾರದ ನಂಟು:ಸಂಘ ಪರಿವಾರದ ಜತೆ ಉತ್ತಮ ಒಡನಾಟ ಹೊಂದಿರುವ ಕೋಟಆರ್‌ಎಸ್‌ಎಸ್‌ನ ಪ್ರಾಥಮಿಕ ಶಿಕ್ಷಾ ವರ್ಗ ಹಾಗೂ ಒಟಿಸಿ ತರಬೇತಿ ಪೂರೈಸಿದ್ದಾರೆ. ಸಂಘದ ಮೇಲಿನ ಅತೀವ ನಿಷ್ಠೆ, ವೈಯಕ್ತಿಕ ವರ್ಚಸ್ಸು ಸಚಿವ ಸ್ಥಾನ ಒಲಿಯಲು ನೆರವಾಯಿತು ಎನ್ನುತ್ತಾರೆ ಅವರ ಆಪ್ತರು.

ವಿಭಿನ್ನ ವ್ಯಕ್ತಿತ್ವ:

ಛಾಯಾಗ್ರಹಕರಾಗಿಯೂ ಗುರುತಿಸಿಕೊಂಡಿದ್ದ ಕೋಟ, ಅತ್ಯುತ್ತಮ ವಾಗ್ಮಿ ಕೂಡ. ಯಾವುದೇ ವಿಷಯದಲ್ಲಿ ನಿಖರ, ನಿರರ್ಗಳವಾಗಿ ಮಾತನಾಡಬಲ್ಲಷ್ಟು ಚಾಕಚಕ್ಯತೆ ಹೊಂದಿದ್ದಾರೆ ಎನ್ನುತ್ತಾರೆ ಹತ್ತಿರದಿಂದ ಬಲ್ಲವರು.

ಕೋಟ ಅವರಿಗೆ ಮಂತ್ರಿಗಿರಿ ದಿಢೀರ್ ಒಲಿದು ಬಂದಿಲ್ಲ. ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತಾ ಸಚಿವ ಸ್ಥಾನಕ್ಕೆ ಅರ್ಹತೆ ಪಡೆದವರು. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿ,ಗ್ರಾಮ ಪಂಚಾಯತ್ ಸದಸ್ಯ, ಉಪಾಧ್ಯಕ್ಷ, ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದವರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, ಹೀಗೆ ಸಿಕ್ಕ ಎಲ್ಲ ಹುದ್ದೆಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ.

ರಾಜಕೀಯ ಗರಡಿ:

ಎ.ಜಿ.ಕೊಡಗಿ, ವಿ.ಎಸ್‌.ಆಚಾರ್ಯ, ಸೋಮಶೇಖರ ಭಟ್ಟರಂತಹ ಘಟಾನುಘಟಿ ನಾಯಕರ ಗರಡಿಯಲ್ಲಿ ಪಳಗಿರುವ ಕೋಟ ಕಳಂಕ ರಹಿತ ರಾಜಕಾರಣಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಹೋರಾಟ:

ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳಿಸಲು ಹೋರಾಟ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಗೌರವಧನ ಹೆಚ್ಚಳವಾಗುವಲ್ಲಿ ಅವರ ಶ್ರಮವಿದೆ. 7ನೇ ತರಗತಿ ಓದಿದ್ದರೂ ಅಂಕಣ ಬರೆಯುವಷ್ಟು ಆಳವಾದ ಜ್ಞಾನ ಅವರಲ್ಲಿದೆ ಎನ್ನುತ್ತಾರೆ ಆಪ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT