ಶನಿವಾರ, ಜೂಲೈ 4, 2020
24 °C
ಕೋವಿಡ್‌ ಪ್ರೋಟಿನ್‌ ದ್ವಿಗುಣ ಕ್ರಿಯೆ ತಡೆಯುವಲ್ಲಿ ಯಶಸ್ಸು

ಕೋವಿಡ್‌ಗೆ ಔಷಧ ಕಂಡುಹಿಡಿಯುವ ತಂಡದಲ್ಲಿ ಉಡುಪಿಯ ವೈದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಟೈಪ್‌ 2 ಡಯಾಬಿಟಿಸ್‌ ರೋಗಿಗಳಿಗೆ ನೀಡುವ ಡಿಪಿಪಿ 4 ಎನಿಬಿಟರ್ಸ್‌ ಔಷಧಕ್ಕೆ ಕೋವಿಡ್ ಪ್ರೋಟಿನ್‌ ದ್ವಿಗುಣವಾಗುವ ಪ್ರಕ್ರಿಯೆ ತಡೆಯುವ ಸಾಮರ್ಥ್ಯವಿರುವುದು ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ಕೆನಡಾದ ಯುನಿವರ್ಸಿಟಿ ಆಫ್‌ ವಾಟರ್ ಲೂ ಸ್ಕೂಲ್ ಆಫ್‌ ಫಾರ್ಮಸಿಯಲ್ಲಿ ಪ್ರೊಫೆಸರ್ ಆಗಿರುವ ಪ್ರವೀಣ್‌ ರಾವ್ ತಿಳಿಸಿದ್ದಾರೆ.

ಕೋವಿಡ್‌ ಸೋಂಕಿಗೆ ಔಷಧ ಕಂಡುಹಿಡಿಯುತ್ತಿರುವ ವಿಚಾರವಾಗಿ ಕೆನಡಾದಿಂದ ವಿಡಿಯೊ ಮೂಲಕ ಮಾಹಿತಿ ನೀಡಿದ ಪ್ರವೀಣ್‌ ರಾವ್, ‘ಜಗತ್ತಿನಲ್ಲಿ ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು 5 ಸಾವಿರಕ್ಕೂ ಹೆಚ್ಚು ಔಷಧಗಳು ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ಕೋವಿಡ್‌ಗೆ ಮದ್ದು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಕೆನಡಾದ ಯುನಿವರ್ಸಿಟಿ ಆಫ್‌ ವಾಟರ್ ಲೂ ಸ್ಕೂಲ್ ಆಫ್‌ ಫಾರ್ಮಸಿಯ ಪ್ರಯೋಗಾಲಯದಲ್ಲೂ ಸಂಶೋಧನೆಗಳು ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ ಯಶಸ್ಸು ಸಿಕ್ಕಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಔಷಧಗಳಲ್ಲಿರುವ ರಾಸಾಯನಿಕಗಳು ಮನುಷ್ಯನ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಲಾಗುತ್ತಿದೆ. ಜಗತ್ತಿನಾದ್ಯಂತ ಕೋವಿಡ್‌–19 ಸೋಂಕು ವ್ಯಾಪಕವಾದ ಬಳಿಕ ಮಾರ್ಚ್‌ನಿಂದ ಲ್ಯಾಬ್‌ನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಈಚೆಗೆ ಜರ್ಮನಿಯ ವಿಜ್ಞಾನಿಗಳು ಕೋವಿಡ್‌ ವೈರಸ್‌ನೊಳಗಿರುವ ಮುಖ್ಯವಾದ ಪ್ರೊಟೀನ್ ರಚನೆಯನ್ನು ಕಂಡುಹಿಡಿದಿದ್ದು, ಈ ಪ್ರೊಟೀನ್‌ ಮನುಷ್ಯನ ದೇಹದೊಳಗೆ ಪ್ರವೇಶಿಸಿದರೆ ದ್ವಿಗುಣವಾಗುತ್ತಾ ಹೋಗುತ್ತದೆ. ದ್ವಿಗುಣ ಪ್ರಕ್ರಿಯೆಯನ್ನು ತಡೆದರೆ ಸೋಂಕು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಕೆನಡಾದಲ್ಲಿ ಸಂಶೋಧನೆ ನಡೆಯುತ್ತಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಪ್ರವೀಣ್ ರಾವ್ ತಿಳಿಸಿದ್ದಾರೆ.

ಟೈಪ್‌ 2 ಡಯಾಬಿಟಿಸ್‌ಗೆ ಕೊಡಲಾಗುವ ಔಷಧದ ಬಗ್ಗೆ ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡುವಾಗ ಡಿಪಿಪಿ4 ಎನಿಬಿಟರ್ಸ್‌ ಕೆಮಿಕಲ್‌ ಸ್ಟ್ರಕ್ಚರಲ್‌ ಅಂಶಕ್ಕೆ ಕೋವಿಡ್ ಪ್ರೊಟೀನ್‌ನ ತಡೆಹಿಡಿಯುವ ಸಾಮರ್ಥ್ಯವಿರುವ ಮಹತ್ವದ ವಿಚಾರ ತಿಳಿದುಬಂದಿದೆ. ಅಂದರೆ, ಡಿಪಿಪಿ 4 ಮದ್ದಿಗೆ ಮನುಷ್ಯನ ದೇಹದಲ್ಲಿ ಕೋವಿಡ್ ಸೋಂಕು ದ್ವಿಗುಣವಾಗುವುದನ್ನು ತಡೆಹಿಡಿಯುವ ಸಾಮರ್ಥ್ಯವಿದೆ ಎಂದರ್ಥ ಎಂದು ಮಾಹಿತಿ ನೀಡಿದರು.

ಇದು ಪ್ರಾಥಮಿಕ ಸಂಶೋಧನೆಯಾಗಿದ್ದು, ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಮುಂದೆ, ಯಶಸ್ಸು ಸಿಕ್ಕರೆ ಪ್ರಾಣಿಗಳ ಮೇಲೆ ಪ್ರಯೋಗ ನಡೆಯಲಿದೆ. ನಂತರ ಮನುಷ್ಯರಿಗೆ ಔಷಧ ಕೊಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

‘ಹೊಸ ಔಷಧಕ್ಕೆ ಕನಿಷ್ಠ 10 ವರ್ಷ ಬೇಕು’
‘ಮಾರುಕಟ್ಟೆಗೆ ಹೊಸ ಔಷಧ ತರಲು 10 ರಿಂದ 15 ವರ್ಷ ಬೇಕಾಗಬಹುದು. ಜತೆಗೆ, ತುಂಬಾ ವೆಚ್ಚದಾಯಕ ಕೂಡ. ಕೋವಿಡ್ ನಿಯಂತ್ರಣಕ್ಕೆ ತುರ್ತು ಔಷಧಿಗಳ ಅಗತ್ಯವಿದೆ. ಸದ್ಯ ಜಗತ್ತಿನಲ್ಲಿ ಲಭ್ಯವಿರುವ ಔಷಧಗಳನ್ನು ಬಳಸಿಕೊಂಡು ಮದ್ದು ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಡಾ.ಪ್ರವೀಣ್ ರಾವ್‌.

ಉಡುಪಿ ಮೂಲದವರು
ಪ್ರವೀಣ್ ರಾವ್‌ ಉಡುಪಿಯವರು. ಮಣಿಪಾಲದ ಫಾರ್ಮಸಿ ಕಾಲೇಜಿನಲ್ಲಿ ಎಂ.ಫಾರ್ಮಾ ಮುಗಿಸಿ, ಕೆನಡಾದಲ್ಲಿ ಪಿಎಚ್‌.ಡಿ ಮಾಡಿದ್ದಾರೆ. ಸದ್ಯ ಕೆನಡಾದ ಯುನಿವರ್ಸಿಟಿ ಆಫ್‌ ವಾಟರ್ ಲೂ ಸ್ಕೂಲ್ ಆಫ್‌ ಫಾರ್ಮಸಿಯಲ್ಲಿ ಪ್ರೊಫೆಸರ್ ಆಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು