ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರದಲ್ಲಿ ಕೃಷಿ ಮೇಳ 19ರಿಂದ

ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ
Last Updated 17 ಅಕ್ಟೋಬರ್ 2019, 10:23 IST
ಅಕ್ಷರ ಗಾತ್ರ

ಉಡುಪಿ: ಅನ್ನದಾತನ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಅ.19 ಹಾಗೂ 20ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಕೃಷಿಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಹ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್‌.ಯು.ಪಾಟೀಲ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರೂ ಆದ ಲಕ್ಷ್ಮಣ ಸವದಿ ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಹ್ಯಾದ್ರಿ ಪಂಚಮುಖಿ ಭತ್ತದ ತಳಿಯನ್ನು ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಶಾಸಕ ರಘುಪತಿ ಭಟ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ.ಎಂ.ಕೆ.ನಾಯ್ಕ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.

19ರಂದು ಮಧ್ಯಾಹ್ನ 2ಕ್ಕೆ ಗೇರು ಮತ್ತು ಇತರ ತೋಟಗಾರಿಕಾ ಬೆಳೆಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. 20 ರಂದು ಬೆಳಿಗ್ಗೆ 10ಕ್ಕೆ ಲಾಭದಾಯಕ ಸಮಗ್ರ ಕೃಷಿ ಪದ್ಧತಿಗಳು ಕುರಿತು, ಮಧ್ಯಾಹ್ನ 12ಕ್ಕೆ ನೆಲ ಜಲ ಸಂರಕ್ಷಣೆ ಮತ್ತು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕುರಿತು, 2ಕ್ಕೆ ಹೈಟೆಕ್‌ ತೋಟಗಾರಿಕೆ ಕುರಿತು ವಿಚಾರ ಗೋಷ್ಠಿಗಳು ನಡೆಯಲಿವೆ.

ಸಂಜೆ 4ಕ್ಕೆ ರೈತ ವಿಜ್ಞಾನಿಗಳ ಜತೆ ಮುಕ್ತ ಚರ್ಚೆ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಮೇಳದಲ್ಲಿ 200ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಲಿವೆ. ಕೃಷಿ ಯಂತ್ರ, ಪರಿಕರ ಹಾಗೂ ಕೃಷಿ ತಂತ್ರಜ್ಞಾನ ಕುರಿತು ತಜ್ಞರಿಂದ ಮಾಹಿತಿ ಪಡೆಯಬಹುದು.

ಸುದ್ದಿಗೋಷ್ಠಿಯಲ್ಲಿ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ್‌, ಹಿರಿಯ ಕ್ಷೇತ್ರಾಧೀಕ್ಷಕ ಡಾ.ಶಂಕರ್, ಪ್ರಾಂಶುಪಾಲರಾದ ಡಾ.ಕೆ.ವಿ.ಸುಧೀರ್ ಕಾಮತ್ ಇದ್ದರು.

ಮೇಳದ ವಿಶೇಷ
ವಿವಿಧ ಭತ್ತದ ತಳಿಗಳು, ಬೀಜೋತ್ಪಾದನೆ, ಭತ್ತದಲ್ಲಿ ಚಾಪೆ ನೇಜಿ ತಯಾರಿ, ಶ್ರೀ ಪದ್ಧತಿ ಬೇಸಾಯ, ತೆಂಗಿನಲ್ಲಿ ಬಹುಬೆಳೆ ಯೋಜನೆ, ಪೋಷಕಾಂಶಗಳ ನಿರ್ವಹಣೆ, ತೋಟಗಾರಿಕಾ ಬೆಳೆಗಳಲ್ಲಿ ಕಸಿ ಕಟ್ಟುವಿಕೆ, ಛಾವಣಿ ಕೈತೋಟ, ಸಾವಯವ, ಕಾಂಪೋಸ್ಟ್‌, ಎರೆಹುಳ ಹಾಗೂ ಅಜೋಲಾ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಮೇವಿನ ಬೆಳೆ ಉತ್ಪಾದನೆ, ಜೈವಿಕ ಅನಿಲ ಉತ್ಪಾದನಾ ಘಟಕಗಳ ವೀಕ್ಷಣೆ, ಅಲಂಕಾರಿಕಾ ಗಿಡಗಳ ಪ್ರದರ್ಶನ, ಮಾರಾಟ ನಡೆಯಲಿದೆ ಎಂದು ಡಾ.ಎಸ್‌.ಯು.ಪಾಟೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT