ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ತೊಟ್ಟಿಲಲ್ಲಿ ಕಂಗೊಳಿಸಿದ ಯಶೋಧೆ ಕೃಷ್ಣ

ಕೃಷ್ಣನೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಹುಲಿವೇಷಧಾರಿಗಳ ಭರ್ಜರಿ ಕುಣಿತ
Last Updated 23 ಆಗಸ್ಟ್ 2019, 13:34 IST
ಅಕ್ಷರ ಗಾತ್ರ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಅಷ್ಟಮಿ ದಿನವಾದ ಶುಕ್ರವಾರ ಗೋವಿಂದನ ದರ್ಶನ ಪಡೆಯಲು ಸಾವಿರಾರು ಭಕ್ತರು ಕೃಷ್ಣಮಠಕ್ಕೆ ಭೇಟಿ ನೀಡಿದ್ದರು. ರಥಬೀದಿಯ ತುಂಬೆಲ್ಲ ಗೋವಿಂದನ ನಾಮ ಸ್ಮರಣೆ ಅನುರಣಿಸಿತು.

ಚಿನ್ನದ ತೊಟ್ಟಿಲಲ್ಲಿ ಕಂಗೊಳಿಸಿದ ಕೃಷ್ಣ

ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥರು ಕೃಷ್ಣನಿಗೆ ‘ಯಶೋಧೆ ಕೃಷ್ಣ’ನ ಅಲಂಕಾರ ಮಾಡಿದರು. ಸುವರ್ಣ ತೊಟ್ಟಿಲಲ್ಲಿ ಕಂಗೊಳಿಸುತ್ತಿದ್ದ ಕೃಷ್ಣನನ್ನು ಭಕ್ತರು ಕಣ್ತುಂಬಿಕೊಂಡರು.

ಬೆಳಿಗ್ಗೆ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆ ನೆರವೇರಿಸಿದರು. ಬಳಿಕ ಬೆಳಿಗ್ಗೆ 11ಕ್ಕೆ ಮೂವರು ಯತಿಗಳು ‘ಲಡ್ಡು ಮುಹೂರ್ತಕ್ಕೆ ಚಾಲನೆ ನೀಡಿದರು.

ಭಜನೆ, ಭಾಗವತ ಪ್ರವಚನ

ಮಠದ ತುಂಬೆಲ್ಲ ಕೃಷ್ಣನ ಸ್ಮರಣೆ ನಡೆಯಿತು. ಮಧ್ವಮಂಟಪದಲ್ಲಿ ನಿರಂತರವಾಗಿ ಭಜನೆ, ಭಾಗವತ ಪ್ರವಚನ, ಸಂಕೀರ್ತನೆಗಳು ನಡೆದವು.

ರಥಬೀದಿಯಲ್ಲಿ ಸಂಭ್ರಮ

ಅಷ್ಟಮಠಗಳು ನೆಲೆನಿಂತಿರುವ ರಥಬೀದಿಯ ತುಂಬಾ ಅಷ್ಟಮಿಯ ಸಂಭ್ರಮ ಮನೆಮಾಡಿತ್ತು. ರಸ್ತೆಯ ಇಕ್ಕೆಲಗಳು ವ್ಯಾಪಾರಿಗಳಿಂದ ತುಂಬಿಹೋದರೆ, ರಸ್ತೆ ಭಕ್ತರಿಂದ ಗಿಜಿಗುಡುತ್ತಿತ್ತು.

ಹೂಹಣ್ಣು ವ್ಯಾಪಾರ ಜೋರು

ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೂವಿನ ವ್ಯಾಪಾರಿಗಳು ಬಂದಿದ್ದರು. ಸೇವಂತಿಗೆ ಮಾರಿಗೆ ₹ 50ರಿಂದ 80ರವರೆಗೂ ಮಾರಾಟವಾಯಿತು. ಚೆಂಡು ಹೂ, ಕನಕಾಂಬರ, ತುಳಸಿ ಹಾರಕ್ಕೆ ಬೇಡಿಕೆ ಹೆಚ್ಚಿತ್ತು. ಸೇಬು, ಮೋಸಂಬಿ, ಬಾಳೆಹಣ್ಣಿನ ಖರೀದಿಯೂ ಜೋರಾಗಿತ್ತು. ಮಕ್ಕಳನ್ನು ಆಕರ್ಷಿಸಲು ಬಣ್ಣಬಣ್ಣದ ಬಳೆಗಳು, ಬಲೂನುಗಳು, ಆಟದ ಸಾಮಾಗ್ರಿಗಳ ಮಾರಾಟ ಕಂಡುಬಂತು.

ಕೊಟ್ಟೆಗೆ ಬೇಡಿಕೆ

ಅಷ್ಟಮಿಯಲ್ಲಿ ಮೂಡೆ ಕೊಟ್ಟೆಯಲ್ಲಿ ತಯಾರಿಸುವ ಖಾದ್ಯಗಳು ವಿಶೇಷ. ಹಾಗಾಗಿ, ಕೊಟ್ಟೆ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು. ₹ 100ಕ್ಕೆ 5ರಿಂದ 7ರವರೆಗೂ ಕೊಟ್ಟೆಯ ದರ ಇತ್ತು.

ಗಮನ ಸೆಳೆದ ವೇಷಧಾರಿಗಳು

ಮಕ್ಕಳು ಮುಖಕ್ಕೆ ಬಣ್ಣ ಬಳಿದುಕೊಂಡು, ವಿಚಿತ್ರವಾದ ವೇಷ ಧರಿಸಿ ರಥಬೀದಿಯಲ್ಲಿ ಗಮನ ಸೆಳೆದರು. ನೃತ್ಯ ಹಾಗೂ ವಿಭಿನ್ನ ಹಾವಭಾವಗಳನ್ನು ಪ್ರದರ್ಶಿಸಿ ಸಾರ್ವಜನಿರಿಂದ ಹಣ ಪಡೆದುಕೊಂಡರು.

ಏಕಾದಶಿ ಹಿನ್ನೆಲೆಯಲ್ಲಿ ಮಠದಲ್ಲಿ ಅನ್ನ ಪ್ರಸಾದದ ವ್ಯವಸ್ಥೆ ಇರಲಿಲ್ಲ.

ಹುಲಿವೇಷ ಕುಣಿತದ ಸೊಬಗು‌

ಅಷ್ಟಮಿಯ ವಿಶೇಷ ಹುಲಿಕುಣಿತ ಪ್ರಮುಖ ಆಕರ್ಷಣೆಯಾಗಿತ್ತು. ಮೈತುಂಬಾ ಬಣ್ಣಬಳಿದುಕೊಂಡು ಹುಲಿವೇಷ ಧರಿಸಿದ್ದ ತಂಡಗಳು ಚೆಂಡೆಯ ವಾದನಕ್ಕೆ ತಕ್ಕಂತೆ ಹೆಜ್ಜೆಹಾಕುತ್ತಾ ಜನರನ್ನು ರಂಜಿಸಿದವು. ಸಾರ್ವಜನಿಕರಿಂದ ದೇಣಿಗೆ ಪಡೆದವು. ಬ್ರಹ್ಮಗಿರಿ ವೃತ್ತದಲ್ಲಿ ಹಾಕಲಾಗಿದ್ದ ಬೃಹತ್ ವೇದಿಕೆಯಲ್ಲಿ ಹಲವು ತಂಡಗಳು ಪ್ರದರ್ಶನ ನೀಡಿದವು.

ರಕ್ಷಿತ್ ಶೆಟ್ಟಿ ಸ್ಟೆಪ್ಸ್‌

ನಟ ರಕ್ಷಿತ್ ಶೆಟ್ಟಿ ಕುಕ್ಕಿಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲಿ ಕುಣಿತ ಪ್ರದರ್ಶಿಸಿ ಗಮನ ಸೆಳೆದರು. ರಕ್ಷಿತ್ ಜತೆ, ಕಲಾವಿದರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಿಗಿ ಭದ್ರತೆ

ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗೆ ಒಬ್ಬರು ಡಿವೈಎಸ್‌ಪಿ, ನಾಲ್ವರು ಪಿಐ ಹಾಗೂ 12 ಪಿಎಸ್‌ಐ, 39 ಎಎಸ್‌ಐಗಳು, 236 ಕಾನ್‌ಸ್ಟೆಬಲ್ಸ್‌, 40 ಹೋಂಗಾರ್ಡ್ಸ್‌, ಒಂದು ತುರ್ತು ಸ್ಪಂದನಾ ತಂಡ, ಒಂದು ವಿಧ್ವಂಸಕ ಕೃತ್ಯ ತಪಾಸಣಾ ತಂಡ, 3 ಸಶಸ್ತ್ರ ಪಡೆಯ ತುಕಡಿ, 2 ಕೆಎಸ್‌ಆರ್‌ಪಿ ತುಕಡಿಯನ್ನು ಮಠದ ಸುತ್ತಲೂ ನಿಯೋಜಿಸಲಾಗಿತ್ತು. ಆಯಕಟ್ಟಿನ ಜಾಗಗಳಲ್ಲಿ ವಿಡಿಯೊ ಚಿತ್ರೀಕರಣ ಹಾಗೂ ಸಿಸಿಟಿವಿ ಕ್ಯಾಮೆರಾ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT