ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಡವಿಗೊಡೆಯನ ನಾಡಲ್ಲಿ ಅಷ್ಟಮಿ ಸಂಭ್ರಮ

ಕಂಗೊಳಿಸುತ್ತಿದೆ ಕೃಷ್ಣಮಠದ ರಥಬೀದಿ, ಇಂದು ಕೃಷ್ಣ ಜನ್ಮಾಷ್ಟಮಿ, ನಾಳೆ ವಿಟ್ಲಪಿಂಡಿ ಉತ್ಸವ
Last Updated 18 ಆಗಸ್ಟ್ 2022, 14:05 IST
ಅಕ್ಷರ ಗಾತ್ರ

ಉಡುಪಿ: ಪೊಡವಿಗೊಡೆಯ ಕೃಷ್ಣನ ನಾಡು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಕೃಷ್ಣಮಠದ ರಥಬೀದಿ ಪರಿಸರ ಸಿಂಗಾರಗೊಂಡಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ನೆರೆಯ ಜಿಲ್ಲೆಗಳಿಂದ ನೂರಾರು ಹೂವಿನ ವ್ಯಾಪಾರಿಗಳು ಉಡುಪಿಗೆ ಬಂದಿದ್ದು ರಥಬೀದಿ ಪರಿಸರದಲ್ಲಿ ವ್ಯಾಪಾರ ಶುರು ಮಾಡಿದ್ದಾರೆ. ಕೃಷ್ಣಮಠ ಸಂಪರ್ಕಿಸುವ ರಸ್ತೆಗಳಲ್ಲೂ ವ್ಯಾಪಾರ ಜೋರಾಗಿದೆ. ಮಕ್ಕಳ ಆಟಿಕೆಗಳನ್ನು ಮಾರುವವರ ಸಂಖ್ಯೆ ಹೆಚ್ಚಾಗಿದೆ.

ಪ್ರತಿವರ್ಷದಂತೆ ಈ ಬಾರಿಯೂ ಮೂಡೆ ಮಾರಾಟ ಜೋರಾಗಿದೆ. ಸ್ಥಳದಲ್ಲಿಯೇ ಮೂಡೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿರುವ ದೃಶ್ಯಗಳು ರಥಬೀದಿ ಪರಿಸರದಲ್ಲಿ ಕಂಡುಬಂತು.

ಪೇಟ್ಲ ಮಾರಾಟ ಜೋರು:

ವಿಭಿನ್ನ ಶಬ್ದ ಹೊರಹೊಮ್ಮಿಸುವ ಸೀಮೆಕೋಲು, ತಗಡು, ನಟ್ ಬೋಲ್ಟ್‌ಗಳನ್ನು ಬಳಸಿ ತಯಾರಿಸಿರುವ ಪೇಟ್ಲಗಳ ಮಾರಾಟ ಕಂಡುಬಂತು. ಹಿಂದೆ ಕೃಷ್ಣನಿಗೆ ಪೂಜೆ ನಡೆಯುವಾಗ ಪೇಟ್ಲ ಹೊಡೆಯುವುದು ರೂಢಿಯಲ್ಲಿತ್ತು. ಇಂದಿಗೂ ಅಷ್ಟಮಿಯ ಪ್ರಮುಖ ಆಕರ್ಷಣೆಯಾಗಿ ಪೇಟ್ಲ ಗುರುತಿಸಿಕೊಂಡಿದೆ ಎನ್ನುತ್ತಾರೆ ವ್ಯಾಪಾರಿಗಳು.

ಚಕ್ಕುಲಿ ಉಂಡೆಗಳ ತಯಾರಿ:

ವಿಟ್ಲಪಿಂಡಿ ಉತ್ಸವದ ದಿನ ಭಕ್ತರಿಗೆ ಪ್ರಸಾದವಾಗಿ ಹಂಚಲು ಮಠದಲ್ಲಿ ಚಕ್ಕುಲಿ ಹಾಗೂ ಬಗೆ ಬಗೆಯ ಉಂಡೆಗಳನ್ನು ತಯಾರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮಠದ ಬಾಣಸಿಗರೆಲ್ಲರೂ ಒಟ್ಟಾಗಿ ರಾಶಿ ಚಕ್ಕುಲಿ ಹಾಗೂ ಉಂಡೆಗಳನ್ನು ತಯಾರಿಸಿದ್ದಾರೆ.

ವಿಟ್ಲಪಿಂಡಿಯ ದಿನ ಕೃಷ್ಣನ ಸ್ವರ್ಣ ರಥೋತ್ಸವ ನಡೆಯುವ ಸಂದರ್ಭ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳು ಹಾಗೂ ಅಷ್ಟಮಠದ ಯತಿಗಳು ಚಕ್ಕುಲಿ ಹಾಗೂ ಉಂಡೆ ಪ್ರಸಾದವನ್ನು ಭಕ್ತರನ್ನು ತೂರುತ್ತಾರೆ. ಪ್ರಸಾದವನ್ನು ಪಡೆಯಲು ಭಕ್ತರು ಮುಗಿಬೀಳುತ್ತಾರೆ.

ಸಿದ್ಧಗೊಂಡ ಮೃಣ್ಮಯ ಮೂರ್ತಿ:

ವಿಟ್ಲಪಿಂಡಿ ಉತ್ಸವದ ದಿನ ಚಿನ್ನದ ರಥದಲ್ಲಿ ಕಂಗೊಳಿಸುವ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಕಲಾವಿದ ಸೋಮನಾಥ ಚಿಟ್ಪಾಡಿ ಅವರು ತಯಾರಿಸಿದ್ದಾರೆ. 2 ದಶಕಗಳಿಂದಲೂ ಸೋಮನಾಥರೇ ಮೃಣ್ಮಯ ಮೂರ್ತಿ ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಚಾತುರ್ಮಾಸ್ಯವಾಗಿರುವ ಕಾರಣ ಕೃಷ್ಣಮಠದಲ್ಲಿರುವ ಉತ್ಸವ ಮೂರ್ತಿಯನ್ನು ಹೊರಗೆ ತರುವಂತಿಲ್ಲ. ಹಾಗಾಗಿ, ವಿಟ್ಲಪಿಂಡಿಯ ದಿನ ನಡೆಯುವ ರಥೋತ್ಸವದಲ್ಲಿ ಮಣ್ಣಿನ ಕೃಷ್ಣನಿಗೆ ಪ್ರಾಣ ಪ್ರತಿಷ್ಠೆಮಾಡಿ ಚಿನ್ನದ ರಥದಲ್ಲಿಟ್ಟು ಪೂಜಿಸಿ ರಥೋತ್ಸವದ ಬಳಿಕ ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

ಅಷ್ಟಮಿಗೆ ವೇಷದ ರಂಗು:

ಅಷ್ಟಮಿಯ ದಿನ ವೇಷ ಕಲಾವಿದರನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಈ ಬಾರಿಯೂ ಕಲಾವಿದರು ವಿಭಿನ್ನ ವೇಷ ಧರಿಸುತ್ತಿದ್ದು ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಖ್ಯಾತ ವೇಷ ಕಲಾವಿದ ರವಿ ಕಟಪಾಡಿ ವೇಷ ವಿಶೇಷವಾಗಿದ್ದು, ನೋಡಲು ಜನರು ಕಾತರರಾಗಿದ್ದಾರೆ.

ಕೋವಿಡ್‌ನಿಂದ ಕಳೆದ ಎರಡು ವರ್ಷ ಮರೆಯಾಗಿದ್ದ ಅಷ್ಟಮಿಯ ಪ್ರಮುಖ ಆಕರ್ಷಣೆ ಹುಲಿವೇಷ ಕುಣಿತವನ್ನು ಈ ಬಾರಿ ನೋಡಬಹುದು. ಇದಲ್ಲದೆ ಮಕ್ಕಳು ಪೇಪರ್‌ ವೇಷ, ಹನುಮಂತನ ವೇಷಧಾರಿಗಳಾಗಿ ಕಂಗೊಳಿಸಲಿದ್ದಾರೆ.

ಇಂದು ಮುದ್ದುಕೃಷ್ಣ ಸ್ಫರ್ಧೆ:

ಕೃಷ್ಣಮಠದಲ್ಲಿ ಆ.19ರಂದು ಬೆಳಿಗ್ಗೆ ಕೃಷ್ಣ ವೇಷ ಸ್ಪರ್ಧೆಗಳು ನಡೆಯಲಿದ್ದು ಮುದ್ದು ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ ಸ್ಪರ್ಧೆಗಳು ನಡೆಯಲಿವೆ. ಕೃಷ್ಣಮಠದ ಪರಿಸರ ಶುಕ್ರವಾರ ಬಾಲಕೃಷ್ಣರಿಂದ ಕಂಗೊಳಿಸಲಿದೆ.

ಇಂದು ಕೃಷ್ಣ ಜಯಂತಿ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೃಷ್ಣಾಪುರ ಮಠದ ಸಹಯೋಗದಲ್ಲಿ ಆ.19ರಂದು ರಾಜಾಂಗಣದಲ್ಲಿ ಶ್ರೀಕೃಷ್ಣ ಜಯಂತಿ ನಡೆಯಲಿದೆ. ನೃತ್ಯ, ಹುಲಿವೇಷ ಕುಣಿತ, ನೃತ್ಯ ಸ್ಪರ್ಧೆ, ಸುಗಮ ಸಂಗೀತ, ಉಪನ್ಯಾಸ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎರಡು ಪಂಚಾಗ ಅನುಸರಣೆ

ಉಡುಪಿಯ ಅಷ್ಟಮಠಗಳ ದ್ವಂದ್ವ ವ್ಯವಸ್ಥೆಯಿಂದ ಈ ವರ್ಷ ಎರಡು ದಿನ ಕೃಷ್ಣ ಜನ್ಮಾಷ್ಟಮಿ ಆಚರಣೆಗಳು ನಡೆಯುತ್ತಿವೆ. ಪೇಜಾವರ, ಫಲಿಮಾರು, ಅದಮಾರು ಮಠವು ಆ.18ರಂದು ಅಷ್ಟಮಿ ಆಚರಿಸಿದರೆ, ಪರ್ಯಾಯ ಕೃಷ್ಣಾಪುರ ಮಠ, ಕಾಣಿಯೂರು, ಶಿರೂರು, ಸೋದೆ, ಪುತ್ತಿಗೆ ಮಠಕ್ಕೆ ಆ.19ರಂದು ಅಷ್ಟಮಿ ಆಚರಿಸುತ್ತಿವೆ.ಅಷ್ಟಮಠಗಳು ಎರಡು ಪಂಚಾಂಗವನ್ನು ಅನುಸರಿಸುತ್ತಿರುವುದು ಗೊಂದಲಕ್ಕೆ ಕಾರಣ. ಎಲ್ಲ ಮಠಗಳಿಗೂ ಸೂರ್ಯ ಸಿದ್ಧಾಂತವಾದರೂ ಆರ್ಯಭಟೀಯ ಹಾಗೂ ದೃಗಣಿತ ಪಂಚಾಂಗ ಅನುಸರಿಸುತ್ತಿರುವೆ. ಶ್ರಾವಣ ಮಾಸ, ಕೃಷ್ಣಪಕ್ಷ, ರಾತ್ರಿ ಚಂದ್ರೋದಯ ಕಾಲದಲ್ಲಿ ಅಷ್ಟಮಿ ತಿಥಿ ಪದ್ಧತಿ ಅನುಸಾರ ಆ.18ಕ್ಕೆ ಅಷ್ಟಮಿ ಆಚರಣೆ ಮಾಡಲಾಗುತ್ತದೆ. ಉದಯ ಕಾಲದಲ್ಲಿ ಅಷ್ಟಮಿ ತಿಥಿ ಅನುಸರಿಸುವವರು ಆ.19ಕ್ಕೆ ಆಚರಣೆ ಮಾಡುತ್ತಾರೆ. ಮಠಗಳು ಬೇರೆ ಬೇರೆ ಪಂಚಾಂಗ ಅನುಸರಿಸುತ್ತಿದ್ದರೂ ಭಕ್ತರಿಗೆ ಸಮಸ್ಯೆಯಾಗಿಲ್ಲ. ಪರ್ಯಾಯ ಕೃಷ್ಣಾಪುರ ಮಠ ಆ.19ರಂದು ಕೃಷ್ಣಾಜನ್ಮಾಷ್ಟಮಿ, 20ರಂದು ವಿಟ್ಲಪಿಂಡಿ ಉತ್ಸವ ಆಚರಿಸುತ್ತಿದ್ದು ಅದರಂತೆ ಭಕ್ತರು ಸಜ್ಜಾಗಿದ್ದಾರೆ.

ಪರ್ಯಾಯ ಯತಿಗಳ ಸಂದೇಶ

ಮನುಷ್ಯನಾದವ ಫಲಾಪೇಕ್ಷೆ ಇಟ್ಟುಕೊಳ್ಳದೆ ಕರ್ಮವನ್ನು ಮಾಡಬೇಕು.ಕರ್ಮವು ಕೃಷ್ಣಪ್ರೀತಿಯ ಉದ್ದೇಶ ಹೊಂದಿರಬೇಕು. ಆಗಮಾತ್ರ ಅದು ಬಂಧಕ ರೂಪವನ್ನು ತಾಳುವುದಿಲ್ಲ. ಫಲಾಪೇಕ್ಷೆಯ ಆಗ್ರಹ ಮತ್ತು ಅಭಿಮಾನ ಸೇರಿದರೆ ವಿಷ್ಣುಪ್ರೀತಿ ಎಂಬುದು ಮರೀಚಿಕೆಯಾಗುತ್ತದೆ. ಆದುದರಿಂದ ಕರ್ತೃತ್ವಾದಿ ಅಭಿಮಾನ ತ್ಯಾಗ ಪೂರ್ವಕ ಕರ್ಮವನ್ನು ಮಾಡಬೇಕು. ಆ ಕರ್ಮವು ವಿಷ್ಣುಪೂಜಾತ್ಪೇನ ಸತ್ಕರ್ಮವಾಗಿ ವಿಷ್ಣು ಪ್ರೀತಿ ಸಂಪಾದಿಸಲು ಕಾರಣವಾಗುತ್ತದೆ. ಫಲಾಫಲಗಳು ದೈವಾಧೀನ. ಕರ್ಮ ಮಾಡುವಲ್ಲಿ ಮಾತ್ರ ಮನುಷ್ಯರಿಗೆ ಅವಕಾಶ ಉಂಟು. ಅಂತಹ ಸದವಕಾಶವನ್ನು ಭಗವಂತ ಪ್ರೀತಿಗಾಗಿ ಯಥೋಚಿತ ಉಪಯೋಗಿಸಿ ಎಲ್ಲರೂ ಶ್ರೀಕೃಷ್ಣಾನುಗ್ರಹಕ್ಕೆ ಭಾಜನರಾಗಬೇಕು.

–ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪರ್ಯಾಯ ಕೃಷ್ಣಾಪುರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT