ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಪ್ರಜ್ಞೆ ಮರೆದ ಕೃಷ್ಣ ಪೂಜಾರಿ

ರೈಲ್ವೆ ಹಳಿಯಲ್ಲಿ ಕಾಣಿಸಿಕೊಂಡ ಬಿರುಕನ್ನು ಸಕಾಲಕ್ಕೆ ಅಧಿಕಾರಿಗಳಿಗೆ ತಿಳಿಸಿದರು
Last Updated 29 ಅಕ್ಟೋಬರ್ 2018, 14:16 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಕೊರಂಗರಪಾಡಿ ಸಮೀಪ ರೈಲ್ವೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡ ವಿಚಾರವನ್ನು ಸಕಾಲಕ್ಕೆ ಸ್ಟೇಷನ್‌ ಮಾಸ್ಟರ್‌ಗೆ ತಿಳಿಸಿ ವ್ಯಕ್ತಿಯೊಬ್ಬರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸ್ಥಳೀಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುವ ಕೃಷ್ಣ ಪೂಜಾರಿ ಎಂಬುವರೇ ಸಮಯ ಪ್ರಜ್ಞೆ ಮರೆದವರು. ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಸುಮಾರು 3 ಕಿ.ಮೀ ದೂರವಿರುವ ಕೊರಂಗರಪಾಡಿಯಲ್ಲಿ ಕೃಷ್ಣ ಅವರು ಬೆಳಿಗ್ಗೆ ವಾಕಿಂಗ್ ಹೊರಟ್ಟಿದ್ದರು.

ಈ ವೇಳೆ ರೈಲ್ವೆ ಹಳಿಯಲ್ಲಿ ಅಪಾಯಕಾರಿ ಬಿರುಕು ಕಾಣಿಸಿಕೊಂಡಿರುವುದು ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ಓಡುತ್ತಲೇ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಕರ್ತವ್ಯದಲ್ಲಿದ್ದ ಸ್ಟೇಷನ್‌ ಮಾಸ್ಟರ್‌ಗೆ ವಿಷಯ ಮುಟ್ಟಿಸಿದ್ದಾರೆ.

ತಕ್ಷಣ ರೈಲ್ವೆ ಹಳಿಯ ಸುರಕ್ಷತೆಯ ಹೊಣೆ ಹೊತ್ತಿರುವ ಆರ್‌ಎಂಇ ತಂಡದ ಸಿಬ್ಬಂದಿ ಕೃಷ್ಣ ಅವರನ್ನು ಕರೆದುಕೊಂಡುಸ್ಥಳಕ್ಕೆ ತೆರಳಿದಾಗ ರೈಲು ಹಳಿಯ ವೆಲ್ಡಿಂಗ್‌ ಜಾಯಿಂಟ್‌ ಭಾಗದಲ್ಲಿ ಸಣ್ಣ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂತು. ತಕ್ಷಣ ತಜ್ಞರು ದುರಸ್ತಿ ನಡೆಸಿದರು ಎಂದು ಎಂಜಿನಿಯರ್‌ ಗೋಪಾಲ ಕೃಷ್ಣ ಮಾಹಿತಿ ನೀಡಿದರು.

ಬಿರುಕನ್ನು ಸರಿಮಾಡಿದ ಬಳಿಕ ಪ್ರಾಯೋಗಿಕವಾಗಿ ಮೊದಲಿಗೆ 20 ಕಿ.ಮೀ ವೇಗದಲ್ಲಿ ರೈಲನ್ನು ಓಡಿಸಲಾಯಿತು. ಅದು ಯಶಸ್ವಿಯಾದ ಬಳಿಕ 100 ಕಿ.ಮೀ ವೇಗದಲ್ಲಿ ರೈಲನ್ನು ಓಡಿಸಲಾಯಿತು ಎಂದು ಅವರು ತಿಳಿಸಿದರು.

ರೈಲ್ವೆ ಹಳಿಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಯಾರ ಗಮನಕ್ಕೂ ಬಾರದಿದ್ದರೆ, ರೈಲುಗಳು ನಿರಂತರವಾಗಿ ಚಲಿಸಿ ಬಿರುಕು ದೊಡ್ಡದಾಗುವ ಅಪಾಯವಿತ್ತು. ಕೃಷ್ಣ ಪೂಜಾರಿ ಅವರ ಸಮಯಪ್ರಜ್ಞೆಯಿಂದ ಸಂಭಾವ್ಯ ಅವಘಡ ತಪ್ಪಿದಂತಾಗಿದೆ. ಇಲಾಖೆ ಅವರನ್ನು ಅಭಿನಂದಿಸುತ್ತದೆ ಎಂದು ತಿಳಿಸಿದರು.

ದುರಸ್ತಿ ಕಾರ್ಯಕ್ಕಾಗಿ ಸುಮಾರು ಅರ್ಧತಾಸು ರೈಲುಗಳ ಸಂಚಾರವನ್ನು ತಡೆಹಿಡಿಯಲಾಗಿತ್ತು. ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಇಲಾಖೆಯ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ. ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಜನರು ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

ಕೊಂಕಣ ರೈಲ್ವೆ ರಾಜ್ಯದಲ್ಲಿ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಕೊಂಕಣ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT