ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾಪುರ ಮಠದ ಪರ್ಯಾಯ: ಭತ್ತ ಮುಹೂರ್ತ ಡಿ.8ರಂದು

ಜ.18ರಂದು ಸರ್ವಜ್ಞ ಪೀಠಾರೋಹಣ ಮಾಡಲಿರುವ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Last Updated 29 ನವೆಂಬರ್ 2021, 13:00 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣಾಪುರ ಮಠದ ಭಾವಿ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಡಿ.8ರಂದು ಬೆಳಿಗ್ಗೆ 8.22ಕ್ಕೆ ಭತ್ತ ಮುಹೂರ್ತ ನೆರವೇರಲಿದೆ ಎಂದು ಪರ್ಯಾಯೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಸೂರ್ಯ ನಾರಾಯಣ ಉಪಾಧ್ಯಾಯ ತಿಳಿಸಿದರು.

ಸೋಮವಾರ ಕೃಷ್ಣಾಪುರ ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಮಾತನಾಡಿದ ಅವರು, ಕೃಷ್ಣಾಪುರ ಮಠದ ಭಾವಿ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಒಂದು ವರ್ಷದಿಂದ ಸಿದ್ಧತೆಗಳು ನಡೆಯುತ್ತಿವೆ. ನ.30, 2020ರಲ್ಲಿ ಬಾಳೆ ಮುಹೂರ್ತ ನೆರವೇರಿದ್ದು, ಫೆ.17, 2021ರಂದು ಅಕ್ಕಿ ಮುಹೂರ್ತ ನಡೆದಿದೆ. ಜುಲೈ 11ರಂದು ಕಟ್ಟಿಗೆ ಮುಹೂರ್ತ ನೆರವೇರಿದ್ದು, ಅಂತಿಮ ಮೂಹರ್ತವಾದ ಭತ್ತ ಮುಹೂರ್ತವು ಡಿ.8ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಂಪ್ರದಾಯದಂತೆ ಪರ್ಯಾಯ ಪೀಠಾರೋಹಣಕ್ಕೆ ತಿಂಗಳು ಮುಂಚಿತವಾಗಿ ನಡೆಯುವ ಭತ್ತ ಮುಹೂರ್ತದಲ್ಲಿ ಕಟ್ಟಿಗೆ ರಥಕ್ಕೆ ಶಿಖರವನ್ನಿಡಲಾಗುತ್ತದೆ. ಬೆಳಿಗ್ಗೆ 7ಕ್ಕೆ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಸಿಂಗರಿಸಿದ ಭತ್ತದ ಮುಡಿಯನ್ನು ಚಿನ್ನದ ಪಾಲಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ತರಲಾಗುವುದು. ಪರ್ಯಾಯ ಕೃಷ್ಣಮಠದ ಅಧಿಕೃತ ಕಾರ್ಯಾಲಯ ಹಾಗೂ ಭಂಡಾರ ಎಂದೆನಿಸುವ ಬಡಗು ಮಾಳಿಗೆಯಲ್ಲಿ ಭತ್ತದ ಮುಡಿಯನ್ನಿಟ್ಟು ಪೂಜೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶಾಸಕ ಹಾಗೂ ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷರೂ ಆದ ಕೆ.ರಘುಪತಿ ಭಟ್ ಮಾತನಾಡಿ, ಪರ್ಯಾಯ ಪೂರ್ವಭಾವಿಯಾಗಿ ಆರ್ಥಿಕ ಕ್ರೋಢೀಕರಣ ಸಮಿತಿ, ಮೆರವಣಿಗೆ ಸಮಿತಿ, ಅತಿಥಿ ಸತ್ಕಾರ ಸಮಿತಿ, ಹೊರೆ ಕಾಣಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ವಚ್ಛತಾ ಸಮಿತಿ, ನಗರಾಲಂಕಾರ ಸಮಿತಿ, ಆರೋಗ್ಯ ಸಮಿತಿ, ಸ್ವಯಂಸೇವಾ ಸಮಿತಿ, ಮಹಿಳಾ ವಿಭಾಗ ಸೇರಿದಂತೆ 30 ಉಪ ಸಮಿತಿಗಳನ್ನು ರಚಿಸಲಾಗಿದೆ.

ಆಯಾ ಸಮಿತಿಯ ಸಂಚಾಲಕರು ಹಾಗೂ ಸದಸ್ಯರು ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಜತೆಗೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆದೇಶದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘಗಳ ಪಾಲ್ಗೊಳ್ಳುವಿಕೆಯೂ ಇರಲಿದೆ ಎಂದು ಮಾಹಿತಿ ನೀಡಿದರು.

ಜ.10ರಂದು ಪರ್ಯಾಯ ಪೀಠಾಧಿಪತಿಗಳ ಪುರಪ್ರವೇಶ ನಡೆಯಲಿದೆ. ಈ ಬಾರಿಯ ಪರ್ಯಾಯ ಮಹೋತ್ಸವದ ಮೆರವಣಿಗೆ ಅದ್ಧೂರಿಯಾಗಿರಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟ್ಯಾಬ್ಲೋ ಹಾಗೂ ರಾಷ್ಟ್ರಿಯ ಹಾಗೂ ರಾಜ್ಯಮಟ್ಟದ ಕಲಾತಂಡಗಳು ಭಾಗವಹಿಸಲಿವೆ. ಡಿ.12 ರಿಂದ 16ರವರೆಗೆ ಹೊರೆ ಕಾಣಿಕೆ ಸಲ್ಲಿಕೆಯಾಗಲಿದೆ ಎಂದರು.

ಸರ್ಕಾರ ಕೂಡ ಪರ್ಯಾಯ ಮಹೋತ್ಸವಕ್ಕೆ ಅಗತ್ಯ ನೆರವು ಹಾಗೂ ಸಹಕಾರ ನೀಡಲಿದೆ. ನಗರಸಭೆ ₹ 7 ಕೋಟಿ ಮೀಸಲಿಟ್ಟಿದ್ದು, ₹ 3 ಕೋಟಿ ವೆಚ್ಚದಲ್ಲಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು, ₹ 4 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲಾಗುವುದು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ₹ 7 ಕೋಟಿ ವೆಚ್ಚದ ಕಾಮಗಾರಿಗೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು. ಗುತ್ತಿಗೆ ಆಧಾರಿತ 75 ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಸಕ ರಘುಪತಿ ಭಟ್‌ ವಿವರ ನೀಡಿದರು.

ವಿದೇಶಗಳಲ್ಲಿ ಕೋವಿಡ್‌ ರೂಪಾಂತರಿ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದೆ ಸರ್ಕಾರದ ಮಾರ್ಗಸೂಚಿಯಂತೆ ಪರ್ಯಾಯ ಮಹೋತ್ಸವ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯೋತ್ಸವ ಸಮಿತಿ ಕೋಶಾಧಿಕಾರಿ ರವಿಪ್ರಸಾದ್, ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಮಠದ ಪಿಆರ್‌ಒ ಲಕ್ಷ್ಮೀ ನಾರಾಯಣ, ಮಠದ ಕಾರ್ಯ ನಿರ್ವಾಹಕರಾದ ಶ್ರೀಶ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT