ಭಾನುವಾರ, ನವೆಂಬರ್ 17, 2019
23 °C
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌

ಮಾರ್ಚ್‌ ಅಂತ್ಯಕ್ಕೆ ಕುಂದಾಪುರ ಮೇಲ್ಸೇತುವೆ ಪೂರ್ಣ

Published:
Updated:
Prajavani

ಉಡುಪಿ: ಜನವರಿ ಅಂತ್ಯಕ್ಕೆ ಪಡುಬಿದ್ರಿ ಸೇತುವೆ, ಮಾರ್ಚ್‌ ಅಂತ್ಯಕ್ಕೆ ಕುಂದಾಪುರ ಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆ ಒಪ್ಪಂದವನ್ನು ರದ್ದುಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು.

ಮಂಗಳವಾರ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಸಿ ನಿಗಧಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸುವಂತೆ ಅಂತಿಮ ಸೂಚನೆ ನೀಡಲಾಗಿದೆ. ಸೂಚನೆ ಪಾಲಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. 

ಶೇ 75ರಷ್ಟು ಕಾಮಗಾರಿ ಮುಗಿದರೆ ಟೋಲ್ ಸಂಗ್ರಹಿಸಬಹುದು ಎಂಬ ನಿಯಮವಿದೆ. ಆದರೆ ಬಾಕಿ ಶೇ 25ರಷ್ಟು ಕಾಮಗಾರಿಯನ್ನು ನಿರ್ಧಿಷ್ಟ ಅವಧಿಯಲ್ಲಿ ಮುಕ್ತಾಯಗೊಳಿಸದಿದ್ದರೆ ಟೋಲ್‌ ಸಂಗ್ರಹಿಸುವ ಅರ್ಹತೆಯನ್ನು ಗುತ್ತಿಗೆ ಪಡೆದ ಕಂಪೆನಿ ಕಳೆದುಕೊಳ್ಳಲಿದೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.‌

ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ನಗರಸಭೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ಕೊಡುವಾಗ ಕಡ್ಡಾಯವಾಗಿ ಪಾರ್ಕಿಂಗ್‌ಗೆ ಜಾಗ ಮೀಸಲಿಟ್ಟರೆ ಮಾತ್ರ ಪರಿಗಣಿಸುವಂತೆ ಸೂಚಿಸಲಾಗಿದೆ. ಸೆಲ್ಲಾರ್ ಜಾಗವನ್ನು ಪಾರ್ಕಿಂಗ್‌ಗೆ ಬಿಟ್ಟು ಅನ್ಯ ಉದ್ದೇಶಗಳಿಗೆ ಬಳಸುತ್ತಿದ್ದರೆ ಅಂಥಹ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಡಿಸಿ ತಿಳಿಸಿದರು.

ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್‌: ನಗರದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಎಸ್‌ಪಿ ನಿಶಾ ಜೇಮ್ಸ್‌ ಸಮಗ್ರ ವರದಿ ಸಲ್ಲಿಸಿದ್ದಾರೆ. ನಗರದ ಟ್ರಾಫಿಕ್‌ ದೀಪಗಳನ್ನು ಬದಲಾಯಿಸಿ ಸ್ಮಾರ್ಟ್‌ ಸಿಗ್ನಲ್‌ಗಳನ್ನು ಅಳವಡಿಸಲಾಗುವುದು. ಚೆನ್ನೈ ಮೂಲದ ಕಂಪೆನಿ ಸ್ಮಾರ್ಟ್‌ ಸಿಗ್ನಲ್‌ ಅಳವಡಿಕೆಗೆ ಉತ್ಸುಕತೆ ತೋರಿದ್ದು, ಯೋಜನೆ ಟೆಂಡರ್ ಹಂತದಲ್ಲಿದೆ ಎಂದು ಡಿಸಿ ತಿಳಿಸಿದರು.

ವರಾಹಿ ಕುಡಿಯುವ ನೀರಿನ ಯೋಜನೆಯಡಿ ಹಾಲಾಡಿಯಲ್ಲಿ ವಾಟರ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ವಾರದೊಳಗೆ ಜಾಗವನ್ನು ಅಂತಿಮಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಬೀಡಿನಗುಡ್ಡೆ ಬಳಿಯ ಕಸ ಸಂಸ್ಕರಣಾ ಘಟಕ ಈಗ ಡಂಪಿಂಗ್ ಯಾರ್ಡ್‌ ಆಗಿ ಬದಲಾಗಿರುವುದು ಗಮನಕ್ಕೆ ಬಂದಿದೆ. ತಮಿಳುನಾಡಿನ ಸಂಸ್ಥೆ ಬಯೊ ಮೈನಿಂಗ್ ಮಾಡಲು ಮುಂದೆ ಬಂದಿದೆ. ಕಸ ವಿಲೇವಾರಿಗೆ ಅಂದಾಜುಪಟ್ಟಿ ಸಲ್ಲಿಸಿದ್ದು, ಶೀಘ್ರ ಕಸ ವಿಲೇವಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಜಮಾಡಿ ಬಂದರು ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದ್ದು, ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಜಮೀನು ಗುರುತಿಸಲಾಗಿದೆ. ಸರ್ವೆ ಮುಗಿದ ಬಳಿಕ ಖಾಸಗಿಯವರಿಂದ ನೇರವಾಗಿ ಭೂಮಿ ಖರೀದಿಸಿ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್‌ ಪ್ರಸಾದ್ ಪಾಂಡೇಲು, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಸರಳೆಬೆಟ್ಟು, ಖಜಾಂಚಿ ದಿವಾಕರ ಹಿಡಿಯಡ್ಕ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಇದ್ದರು.

ಪ್ರತಿಕ್ರಿಯಿಸಿ (+)