ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆಗೆ ಇಲ್ಲ ಜಾಗ: ಸಂಚಾರ ದಟ್ಟಣೆ ಕಿರಿಕಿರಿ

ಬೆಳೆಯುತ್ತಿರುವ ಕುಂದಾಪುರ ನಗರಕ್ಕೆ ಬೇಕಿದೆ ಪಾರ್ಕಿಂಗ್ ಸೌಲಭ್ಯ
Last Updated 28 ಫೆಬ್ರುವರಿ 2022, 2:55 IST
ಅಕ್ಷರ ಗಾತ್ರ

ಕುಂದಾಪುರ: ಜಿಲ್ಲೆಯ ಪ್ರಮುಖ ಉಪವಿಭಾಗ ಕೇಂದ್ರ ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಕುಂದಾಪುರ ನಗರ ಯೋಜನಾಬದ್ಧವಾಗಿ ಬೆಳೆಯದೆ ಇರುವುದರಿಂದಾಗಿ ದಿನದಿಂದ ದಿನಕ್ಕೆ ಇಲ್ಲಿನ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ.

ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್‌ನಿಂದ ಹೊಸ ಬಸ್‌ ನಿಲ್ದಾಣದವರೆಗೆ ಎರಡು ಪ್ರಮುಖ ರಸ್ತೆಗಳಿದ್ದು, ನಗರದ ಬಹುಪಾಲು ವಾಣಿಜ್ಯ ಮಳಿಗೆಗಳು, ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು ಈ ರಸ್ತೆಗಳ ಆಸು-ಪಾಸಿನಲ್ಲಿವೆ. ಪರಿಣಾಮ ಸಹಜವಾಗಿಯೇ ಸಂಚಾರ ದಟ್ಟಣೆ ಹೆಚ್ಚಾಗಿದೆ.

ಉಪ ವಿಭಾಗ ಕೇಂದ್ರ, ಜಿಲ್ಲಾ ಹೆಚ್ಚುವರಿ ನ್ಯಾಯಾಲಯ, ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆ, ಸಹಕಾರಿ ಸಹಾಯಕ ನಿಬಂಧಕರ ಕಚೇರಿ, ಡಿಎಫ್ಒ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಿಗೆ ಕುಂದಾಪುರಕ್ಕೆ ಬರುವವರಿಗೆ ಹಾಗೂ ಸ್ಥಳೀಯ ವಾಹನಗಳಿಗೂ ರಸ್ತೆ ಬದಿಯೇ ನಿಲುಗಡೆ ಪ್ರದೇಶವಾಗಿರುವುದರಿಂದ ರಸ್ತೆಯ ಇಕ್ಕೆಲಗಳು ಸದಾ ವಾಹನಗಳಿಂದ ತುಂಬಿ ತುಳುಕುತ್ತಿವೆ. ಪಾದಚಾರಿಗಳು ನಡೆದು ಹೋಗುವ ಜಾಗವೂ ವಾಹನಗಳು ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಸಾರ್ವಜನಿಕರು ಪೇಟೆಯಲ್ಲಿ ನಡೆದುಕೊಂಡು ಹೋಗಲು ಸಮಸ್ಯೆಯಾಗಿದೆ.

ಪಾದಚಾರಿ ಮಾರ್ಗವಿಲ್ಲದೆ ಪ್ರಾಣ ಪಣಕಿಟ್ಟು ರಸ್ತೆಯ ಮೇಲೆ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ದಶಕಗಳಿಂದ ಕುಂದಾಪುರ ನಗರವನ್ನು ಕಾಡುತ್ತಿರುವ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆಗೆ ಇದುವರೆಗೂ ಮುಕ್ತಿ ಸಿಕ್ಕಿಲ್ಲ.

ಕುಂದಾಪುರ ಪುರಸಭೆಯಾಗಿ ಪರಿವರ್ತನೆಗೊಂಡು ಹಲವು ವರ್ಷಗಳು ಕಳೆದಿದೆ. ನಗರಸಭೆಯಾಗಿ ಮೇಲ್ದರ್ಜೆಗೇರಬೇಕು ಎಂಬ ಬಲವಾದ ಕೂಗು ಇದೆ. ದಿನದಿಂದ ದಿನಕ್ಕೆ ನಗರ ವಿಸ್ತಾರಗೊಳ್ಳುತ್ತಲೇ ಇದ್ದು, ಬಹುತೇಕ ಹಳೆಯ ಕಟ್ಟಡಗಳಿದ್ದ ಜಾಗದಲ್ಲಿ ವಾಣಿಜ್ಯ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಮಹಾ ನಗರಗಳಲ್ಲಿ ಕಾಣುತ್ತಿದ್ದ ಮಾಲ್‌ಗಳು, ಬೃಹತ್ ವಾಣಿಜ್ಯ ಮಳಿಗೆಗಳು ಕುಂದಾಪುರಕ್ಕೂ ಕಾಲಿಟ್ಟಿವೆ. ಕಳೆದ 10-15 ವರ್ಷಗಳಲ್ಲಿ ವಾಹನಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಕುಂದಾಪುರ ಬೆಳೆಯುತ್ತಾ ಹೋದರೂ ನಗರಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಮಾತ್ರ ಇಲ್ಲವಾಗಿದೆ.

ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಂತೆ ಇರುವ ಮಾರ್ಕೆಟ್‌ ಯಾರ್ಡ್‌ನಲ್ಲಿ ವಾರದ ಸಂತೆ ನಡೆಯುತ್ತಿದ್ದರೂ, ವಾಹನಗಳ ಮಾಲೀಕರು ಹೆದ್ದಾರಿಯ ಸರ್ವೀಸ್ ರಸ್ತೆಗಳಲ್ಲೇ ವಾಹನವನ್ನು ಪಾರ್ಕಿಂಗ್ ಮಾಡಿ ಬರುವುದರಿಂದ ಪ್ರತಿವಾರ ಸಂಚಾರ ದಟ್ಟಣೆ ಕಿರಿಕಿರಿ ಎದುರಾಗಲಿದೆ. ಪೊಲೀಸರಿಗೆ ಪ್ರತಿ ಶನಿವಾರ ಪಾರ್ಕಿಂಗ್ ಸಮಸ್ಯೆ ಪರಿಹರಿಸುವುದೇ ದೊಡ್ಡ ಸವಾಲಾಗಿದೆ. ಬಹುಮಹಡಿಯ ವಾಣಿಜ್ಯ ಕಟ್ಟಡಗಳಲ್ಲಿ ವಾಹನ ನಿಲುಗಡೆಗಾಗಿ ನಿರ್ಮಿಸಲಾದ ಪಾರ್ಕಿಂಗ್ ಸ್ಥಳಗಳ ಸದ್ಬಳಕೆ ಆಗದಿರುವುದು ಸಮಸ್ಯೆಯನ್ನು ಗಂಭೀರವಾಗುವಂತೆ ಮಾಡಿದೆ.

ಪುರಸಭೆಯ ಒಳ ರಸ್ತೆಗಳಲ್ಲಿಯೂ ಪಾರ್ಕಿಂಗ್ ಸಮಸ್ಯೆ ಇದೆ. ಸುಂದರ ಕುಂದಾಪುರದ ಕಲ್ಪನೆಯಲ್ಲಿ ವಿಸ್ತಾರವಾಗಿದ್ದ ರಸ್ತೆಗಳು ಸಂಚಾರ ಸಮಸ್ಯೆಯನ್ನು ಬಗೆಹರಿಸುತ್ತದೆ ಎನ್ನುವ ನಗರವಾಸಿಗಳ ನಿರೀಕ್ಷೆಗಳು ಹುಸಿಯಾಗಿದೆ. ಎಡಿಬಿ ಯೋಜನೆ ನಗರದ ರಸ್ತೆಗಳನ್ನು ಸುಂದರಗೊಳಿಸಿದ್ದರೆ, ಯುಜಿಡಿ (ಒಳಚರಂಡಿ) ಕಾಮಗಾರಿ ರಸ್ತೆಗಳನ್ನು ವಿರೂಪಗೊಳಿಸಿದೆ.

ಪರಿಹಾರಕ್ಕೆ ಪ್ರಯತ್ನ:

ಹಿಂದೆ, ಜಿಲ್ಲಾ ಎಸ್.ಪಿ ಆಗಿದ್ದ ಅಣ್ಣಾಮಲೈ ಹಾಗೂ ಅಂದಿನ ಕುಂದಾಪುರದ ಸರ್ಕಲ್ ಇನ್ಸಪೆಕ್ಟರ್ ದಿವಾಕರ ಮುತುವರ್ಜಿ ವಹಿಸಿ, ಮೂಡ್ಲಕಟ್ಟೆಯ ಎಂಐಟಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ನೀಲ ನಕಾಶೆ ಸಿದ್ದಪಡಿಸಿದ್ದರು. ರಸ್ತೆಗಳಲ್ಲಿ ನಿರ್ದಿಷ್ಟ ನಿಲುಗಡೆಯ ಬಗ್ಗೆ ಗುರುತುಗಳನ್ನು ಹಾಕಲಾಗಿತ್ತು.

ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ಸಂಬಂಧ ಪುರಸಭೆಯಲ್ಲಿ ಹಲವು ಬಾರಿ ಸುದೀರ್ಘ ಚರ್ಚೆಗಳು ನಡೆದಿದೆ. ಉಪ ವಿಭಾಗದ ಪೊಲೀಸ್‌ ಅಧಿಕಾರಿಗಳು ವ್ಯವಸ್ಥೆಯನ್ನು ಸರಿಪಡಿಸಲು ಯೋಜನೆ ಹಾಗೂ ನಿರ್ದೇಶನಗಳನ್ನು ನೀಡಿದ್ದರು. ಪಾರ್ಕಿಂಗ್ ಸ್ಥಳಗಳನ್ನು ಪ್ರತ್ಯೇಕವಾಗಿ ಗುರುತಿಸಿದ್ದರೂ, ಜನದಟ್ಟಣೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಭಾಗಗಳಲ್ಲಿ ಕಾಲು ಇಡಲು ಅವಕಾಶ ಇಲ್ಲದಂತೆ ವಾಹನಗಳು ತುಂಬಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT