ಕುಂದಾಪುರ: ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳುವ ಪೂರ್ವ ಸರ್ಕಾರಿ ವೈದ್ಯರ ಶಿಫಾರಸು ಪತ್ರ ಕಡ್ಡಾಯವಾಗಿರುವುದರಿಂದ ತುರ್ತು ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿದೆ ಎಂದು ಕೆಡಿಪಿ ಸದಸ್ಯ ವಕ್ವಾಡಿ ರಮೇಶ್ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಆರೋಪಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ವಿಮಾ ನಿಯಮ ಸರಳೀಕರಣಗೊಳಿಸುವಂತೆ ಅವರು ಒತ್ತಾಯಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ಈ ಬಗ್ಗೆ ಸದನದಲ್ಲೂ ಪ್ರಶ್ನಿಸಿದ್ದು, ಸಮರ್ಪಕ ಉತ್ತರ ದೊರೆತಿಲ್ಲ. ಸರ್ಕಾರಿ ವಿಮೆಯಲ್ಲಿ ಕಡಿಮೆ ಹಣ ದೊರೆಯುವ ಕಾರಣ ಆಸ್ಪತ್ರೆಗಳು ವಿಮೆಗೆ ಒಳಪಡಲು ಒಪ್ಪುತ್ತಿಲ್ಲ. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ದೊರೆಯದ ಚಿಕಿತ್ಸೆಗೆ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ದೊರಕುತ್ತದೆ ಎಂದರು.
ನೆರೆಯ ಜಿಲ್ಲೆಯವರು ನಮ್ಮ ಜಿಲ್ಲೆಗೆ ಚಿಕಿತ್ಸೆಗೆ ಬರುವುದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ಇರುತ್ತದೆ. ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾಗುವ ಮೂಲಕ ಒತ್ತಡ ತಪ್ಪಿಸಬಹುದು ಎಂದು ಶಾಸಕ ಗಂಟಿಹೊಳೆ ಸಲಹೆ ನೀಡಿದರು.
ಶಿಫಾರಸ್ಸು ಪತ್ರ ಇಲ್ಲದೇ ಕೆಲವು ಚಿಕಿತ್ಸೆಗೆ ಮಾತ್ರ ನೇರ ದಾಖಲಾತಿ ನಡೆಯುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್ ಮಾಹಿತಿ ನೀಡಿದರು. ಸರ್ಕಾರಿ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಬೇಕು ಎಂದುಕೊಡ್ಗಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು.
ಶಂಕರನಾರಾಯಣ ಪಂಚಾಯಿತಿಯಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಂದ ₹2.5 ಕೋಟಿ ಅನುದಾನವನ್ನು ನಕಲಿ ದಾಖಲೆ ಸೃಷ್ಟಿಸಿ ಬಳಸಲಾಗಿದೆ. ಈ ರೀತಿ ಹಣ ದುರುಪಯೋಗ ಆಗುವುದನ್ನು ತಪ್ಪಿಸಬೇಕು ಎಂದು ಕೆಡಿಪಿ ಸದಸ್ಯ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಹೇಳಿದರು.
ಟಿಎಪಿಎಇಎಂಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ವ್ಯಕ್ತಿಯೊಬ್ಬರು ಮೃತಪಟ್ಟಾಗ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ವೈದ್ಯರು ರಜೆಯಲ್ಲಿರುವ ಕಾರಣ ನೀಡಿದ್ದಾರೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಇಂತಹ ಅವ್ಯವಸ್ಥೆಗೆ ಕೊನೆಯಾಗಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಕುಂದಾಪುರ ಸರ್ಕಾರಿ ಶವಾಗಾರದಲ್ಲಿ ಮೃತದೇಹ ಇಡುವ ವ್ಯವಸ್ಥೆ ಸರಿ ಇಲ್ಲ ಎಂದು ಆಕ್ಷೇಪಿಸಿದರು. ರಸ್ತೆ ಬದಿ ಮುದ್ರಿತ ಕಾಗದದಲ್ಲಿ ಹಾಗೂ ಪ್ಲಾಸ್ಟಿಕ್‌ನಲ್ಲಿ ಆಹಾರ ಪದಾರ್ಥಗಳನ್ನು ಕಟ್ಟಿ ಕೊಡಲಾಗುತ್ತದೆ. ಚಿಕನ್ ಕಬಾಬ್‌ಗೆ ಕೃತಕ ಬಣ್ಣ ಹಾಕಲಾಗುತ್ತದೆ ಎಂದು ಸದಸ್ಯೆ ಜ್ಯೋತಿ ಎಂ ಪುತ್ರನ್ ಆಕ್ಷೇಪಿಸಿದರು.
ನೆರೆ ಸಂದರ್ಭದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಹೇಳುವ ಬದಲಾಗಿ ಪರಿಹಾರ ಒದಗಿಸುವ ಬಗ್ಗೆ ಯೋಚಿಸಬೇಕು ಎಂದು ಗುರುರಾಜ್ ಗಂಟಿಹೊಳೆ, ಕೃಷಿ ಇಲಾಖೆ ಅಧಿಕಾರಿಗೆ ಹೇಳಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಉದಯ ಕುಮಾರ್, ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಜಿ, ಕೆಡಿಪಿ ಸದಸ್ಯರಾದ ವಿಜಯಧರ, ಕರೀಂ ಅಬ್ದುಲ್ ಮುನಾಫ್ ಇದ್ದರು.
ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರು, ಶವ ಪರೀಕ್ಷೆ ತರಬೇತಿ ಪಡೆದವರ ಕೊರತೆ ಪೋಷಕಾಂಶ ಕಡಿಮೆ ಚಿಕಿತ್ಸೆ ಘಟಕ ತಾಲ್ಲೂಕು ಆಸ್ಪತ್ರೆಯಲ್ಲಿ ಉಳಿಸಲು ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.