ಕುಂದಾಪುರ: ಸರ್ಕಾರ ಪ್ರಕಟಿಸಿರುವ ಮೀಸಲಾತಿ ಪಟ್ಟಿಯಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದೆ.
ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಎಲ್ಲಾ 23 ಸದಸ್ಯರಿಗೂ ಅಧ್ಯಕ್ಷರಾಗುವ ಅವಕಾಶವಿದೆ. 23 ಸದಸ್ಯರಲ್ಲಿ ಬಿಜೆಪಿ 14, 8 ಕಾಂಗ್ರೆಸ್, ಓರ್ವ ಪಕ್ಷೇತರ ಸದಸ್ಯೆ ಆಯ್ಕೆಯಾಗಿದ್ದಾರೆ. ಬಿಜೆಪಿ ಪಾಳಯದ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಒಲಿಯುವ ಸಾಧ್ಯತೆ ಇದೆ. ಬಿಜೆಪಿಯ 6 ಮಹಿಳೆಯರಿಗೂ ಉಪಾಧ್ಯಕ್ಷ ಮೀಸಲಾತಿ ಅವಕಾಶಗಳಿವೆ.
2018ರಲ್ಲಿಯೇ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದ್ದರೂ, ಮೀಸಲಾತಿ ಗೊಂದಲದಿಂದಾಗಿ 2 ವರ್ಷ 2 ತಿಂಗಳ ಬಳಿಕ ಪುರಸಭೆಯ 9ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದು, ಬಿಜೆಪಿಯ ವೀಣಾ ಭಾಸ್ಕರ್, ಸಂದೀಪ್ ಖಾರ್ವಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿದ್ದರು.
ಜಿಲ್ಲೆಯ ದೊಡ್ಡ ಪುರಸಭೆಗಳಲ್ಲಿ ಒಂದಾಗಿರುವ ಕುಂದಾಪುರ ಪುರಸಭೆ ಆಡಳಿತವನ್ನು ಕಾಂಗ್ರೆಸ್, ಬಿಜೆಪಿ, ಕಮ್ಯನಿಸ್ಟ್, ಪೌರ ಸಮಿತಿಗಳು ನಿರ್ವಹಿಸಿವೆ. ಪುರಸಭೆಯ ವ್ಯಾಪ್ತಿಯಲ್ಲಿ ಬಿಲ್ಲವ, ರಾಮಕ್ಷತ್ರಿಯ, ಮೊಗವೀರ, ಕೊಂಕಣ ಖಾರ್ವಿ, ಅಲ್ಪಸಂಖ್ಯಾತರು, ದೇವಾಡಿಗರು, ಪ.ಜಾತಿ, ಪ.ವರ್ಗ, ಬ್ರಾಹ್ಮಣ, ಜಿಎಸ್‌ಬಿ, ಬಂಟ ಯಾನೆ ನಾಡವರು, ಗಾಣಿಗ, ವಿಶ್ವಕರ್ಮ, ದೈವಜ್ಞ ಬ್ರಾಹ್ಮಣ, ಇತರ ಸಮುದಾಯದವರು ಇದ್ದಾರೆ. ಈ ಹಿಂದೆ ಬಿಲ್ಲವ, ಅಲ್ಪಸಂಖ್ಯಾತರು, ರಾಮಕ್ಷತ್ರಿಯ, ಜಿಎಸ್‌ಬಿ, ಬ್ರಾಹ್ಮಣ, ಮೊಗವೀರ, ಕೊಂಕಣ ಖಾರ್ವಿ, ಪ.ಜಾತಿ ಸಮುದಾಯದ ಪ್ರತಿನಿಧಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ದೊರಕಿದ್ದವು. ದೇವಾಡಿಗ, ಬಂಟ ಯಾನೆ ನಾಡವರು, ಪ.ವರ್ಗ, ಉಳಿದ ಕೆಲ ಸಮುದಾಯದವಗೆ ಅವಕಾಶ ದೊರಕಿಲ್ಲ ಎಂಬ ಕೊರಗು ಇದೆ.
ಈ ಬಾರಿ ಆಡಳಿತ ಅವಧಿ ಕೇವಲ 14 ತಿಂಗಳ ಮಾತ್ರ ಇರುವುದರಿಂದ ಅಧಿಕಾರದ ಹೊಣೆ ನಿರ್ವಹಿಸುವವರ ಮೇಲೆ ಸಾಕಷ್ಟು ಜವಾಬ್ದಾರಿಗಳಿದೆ. ಪಕ್ಷ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಜನಾಭಿಪ್ರಾಯ ಮೂಡಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ವಿಶೇಷ ಅನುದಾನ ಪಡೆದುಕೊಳ್ಳಲು ಹರಸಾಹಸ ಪಡಬೇಕು. ಹಿಂದಿನ ಅವಧಿಯಲ್ಲಿನ ಆರೋಪ, ಹಗರಣಗಳಿಗೆ ತಾರ್ಕಿಕ ಅಂತ್ಯ ತರಬೇಕು. ಕುಡಿಯುವ ನೀರು, ರಾಷ್ಟ್ರೀಯ ಹೆದ್ದಾರಿ, ತ್ಯಾಜ್ಯ ವಿಲೆವಾರಿ, ರಿಂಗ್ ರಸ್ತೆ, ಪುರಭವನ, ಯುಜಿಡಿ ಮುಂತಾದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡಬೇಕು. ಪುರಸಭೆ ಲಂಚದ ಕೂಪವಾಗಿದೆ ಎನ್ನುವ ಸಾರ್ವಜನಿಕ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಜನಸ್ನೇಹಿ ಕಚೇರಿಯನ್ನಾಗಿಸುವ ಸವಾಲು ಹಾಗೂ ಗುರಿಗಳು ಇದೆ.
ಯಾರಿಗೆ ಈ ಬಾರಿ ಅವಕಾಶ ?
ಅಧ್ಯಕ್ಷ ಗಾದಿಗೆ ಬಿಜೆಪಿ ಹಿರಿಯ ಸದಸ್ಯರಾದ ಕೆ.ಮೋಹನ್‌ದಾಸ್ ಶೆಣೈ ಅವರ ಹೆಸರು ಮತ್ತೊಮ್ಮೆ ಪ್ರಾಸ್ತಾಪವಾಗುತ್ತಿದೆ. ಈ ಹಿಂದೆ 2009 ರಿಂದ ಎರಡು ಅವಧಿಗೆ 5 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಅವರ ಅಧಿಕಾರವಧಿಯಲ್ಲಿ ಪುರಸಭೆಗೆ ರಾಷ್ಟ್ರೀಯ ಪ್ರಶಸ್ತಿಯ ಮನ್ನಣೆಯೂ ದೊರಕಿತ್ತು. ಅವಕಾಶ ಸಿಗದ ಸಮುದಾಯದ ಪ್ರತಿನಿಧಿಗಳನ್ನು ಪರಿಗಣಿಸುವುದಾದರೆ ವಿ.ಪ್ರಭಾಕರ್, ಗಿರೀಶ್ ದೇವಾಡಿಗ ಹಾಗೂ ಸಂತೋಷ್ ಶೆಟ್ಟಿಯವರ ಪರಿಗಣನೆಯ ಸಾಧ್ಯತೆಗಳು ಇದೆ. ಉಳಿದಂತೆ ರಾಘವೇಂದ್ರ ಖಾರ್ವಿ, ಶೇಖರ್ ಪೂಜಾರಿ ಹಾಗೂ ಶ್ರೀಕಾಂತ್ ಅವರ ಪರಿಗಣನೆಯಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿರುವುದರಿಂದ ಈ ಹಿಂದೆ ಅಧ್ಯಕ್ಷರಾಗಿದ್ದವರನ್ನು ಹೊರತು ಪಡಿಸಿ ಆಯ್ಕೆಗೆ ಉಳಿದ 5 ಮಂದಿಯನ್ನು ಪರಿಗಣಿಸಿದರೆ ಅಶ್ವಿನಿ ಪ್ರದೀಪ್, ರೋಹಿಣಿ ಉದಯ್, ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಪ್ರೇಮಲತಾ ಹೆಸರು ಅರ್ಹರ ಸಾಲಿನಲ್ಲಿ ಇದೆ. ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಅಶ್ವಿನಿ, ವನಿತಾ ಹಾಗೂ ಶ್ವೇತಾ ಅವರ ಹೆಸರು ಮುಂಚೂಣಿಯಲ್ಲಿದೆ.
ಸಂಖ್ಯಾ ಬಲದಲ್ಲಿ ಅಧಿಕಾರಕ್ಕೆ ಹತ್ತಿರವಿರುವ ಬಿಜೆಪಿ ಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಳು ಈ ಹಿಂದಿನ ಸಂಪ್ರದಾಯದಂತೆ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಅವರ ನೇತ್ರತ್ವದಲ್ಲಿಯೇ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಪಕ್ಷ ತೀರ್ಮಾನ ಮಾಡುವ ನಿರೀಕ್ಷೆಗಳಿವೆ. ಈ ಹಿಂದೆ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯವರೇ ಆಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕಿಶೋರಕುಮಾರ ಅವರ ಅಭಿಪ್ರಾಯಗಳು ಪರಿಗಣನೆಯಾಗುತ್ತದೆ ಎನ್ನುವ ನಿರೀಕ್ಷೆಗಳು ಪಕ್ಷದ ವಲಯದಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.