ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಳಿಯ ₹ 76 ಕೋಟಿ ವರ್ಗಾವಣೆ ಅಕ್ರಮ: ಸುರೇಶ್ ಕಲ್ಲಾಗರ್

ಕುಂದಾಪುರದಲ್ಲಿ ನೈಜ ಕಟ್ಟಡ ಕಾರ್ಮಿಕರ ಧರಣಿ
Last Updated 22 ಸೆಪ್ಟೆಂಬರ್ 2022, 16:00 IST
ಅಕ್ಷರ ಗಾತ್ರ

ಕುಂದಾಪುರ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೊಳಚೆ ನಿರ್ಮೂಲನ ಮಂಡಳಿ ಮೂಲಕ 2019-20ನೇ ಸಾಲಿನಲ್ಲಿ ನಿರ್ಮಾಣವಾದ 5,129 ಫಲಾನುಭವಿಗಳಿಗೆ ₹ 76 ಕೋಟಿ ಬಿಡುಗಡೆ ಮಾಡಿರುವುದು ಅಕ್ರಮ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಹೇಳಿದರು.

ಗುರುವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ನಡೆದ ಧರಣಿಯಲ್ಲಿ ಮಾತನಾಡಿ, ನಿಯಮ ಮೀರಿ ಪಾವತಿಸಲಾದ ಹಣವನ್ನು ಕೂಡಲೇ ಮಂಡಳಿ ಖಾತೆಗೆ ವಾಪಾಸ್‌ ಜಮೆ ಮಾಡಬೇಕು. ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕಟ್ಟಡ ಕಾರ್ಮಿಕರ ಮಂಡಳಿಗೆ ಫಲಾನುಭವಿಗಳಾಗಿ ನೋಂದಾಯಿಸುವ ಕ್ರಮವನ್ನು ಕೈಬಿಡಬೇಕು. ನೋಂದಾಯಿಸಿದವರಲ್ಲಿ ನೈಜ ಕಟ್ಟಡ ಕಾರ್ಮಿಕರಿದ್ದರೆ ಅಂತವರನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು ಎಂದರು.

ಬೇಡಿಕೆಗಳು: ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಮನೆ ಕಟ್ಟಲು ₹ 5 ಲಕ್ಷ ಸಹಾಯಧನ, ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿ ಆಯ್ಕೆಯಾದ ಎಲ್ಲರಿಗೂ ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನೋಂದಾವಣೆ ನಿಲ್ಲಬೇಕು, ನಕಲಿ ದಾಖಲೆ ಸೃಷ್ಟಿಸಿ ಕಟ್ಟಡ ಕೆಲಸ ಮಾಡದ ಕಾರ್ಮಿಕರ ನೋಂದಾಯಿಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, 2022ನೇ ಸಾಲಿನಿಂದ ವಾರ್ಷಿಕ ಕನಿಷ್ಠ 15,000 ಕಾರ್ಮಿಕರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ₹ 300 ಕೋಟಿ ಮೀಸಲಿಡಬೇಕು. ಕುಂದಾಪುರ ನಿರೀಕ್ಷಕರ ಕಚೇರಿಯಲ್ಲಿ ಖಾಯಂ ನಿರೀಕ್ಷಕರು ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು.

ಕಟ್ಟಡ ಕಾರ್ಮಿಕರಿಗೆ ನಗದು ರಹಿತ ಸಂಜೀವಿನಿ ಯೋಜನೆ ಜಾರಿ ಮಾಡಬೇಕು. ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಬಾಕಿ ಇರುವ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು, 2022-23ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಅರ್ಜಿಗಳನ್ನು ಸ್ವೀಕರಿಸಬೇಕು. ಉದ್ಯೋಗ ಪ್ರಮಾಣ ಪತ್ರ ಕೊಡುವ ಅಧಿಕಾರವನ್ನು ನೋಂದಾಯಿತ ಕಟ್ಟಡ ಕಾರ್ಮಿಕ ಸಂಘಗಳಿಗೆ ಹಾಗೂ ನೋಂದಾಯಿತ ಬಿಲ್ಡರ್‌ಗಳಿಗೆ ಮಾತ್ರ ನೀಡಬೇಕು. ಸಿಎಸ್‌ಸಿ ಸೆಂಟರ್, ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಅವಕಾಶ ರದ್ದು ಮಾಡಬೇಕು.

ಕೋವಿಡ್ ಕಾಲದಲ್ಲಿ ತಿರಸ್ಕರಿಸಿದ ಮದುವೆ ಧನ ಸಹಾಯ, ಶೈಕ್ಷಣಿಕ ಧನ ಸಹಾಯ ಪುರಸ್ಕರಿಸಬೇಕು. ಫಲಾನುಭವಿಗಳಿಗೆ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು. ವಸ್ತು ರೂಪದಲ್ಲಿ ಪರಿಹಾರ ನಿಲ್ಲಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ಉಪ ತಹಸೀಲ್ದಾರ್ ಮೂಲಕ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ಸಲ್ಲಿಸಲಾಯಿತು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ, ತಾಲ್ಲೂಕು ಸಂಚಾಲಕ ಚಂದ್ರಶೇಖರ.ವಿ, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿದರು. ಸಂತೋಷ ಹೆಮ್ಮಾಡಿ, ಸುರೇಶ್ ಪೂಜಾರಿ, ಜಗದೀಶ್ ಆಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT