ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಿಂದ ನಗರ ಪ್ರವೇಶ: ಕಾಮಗಾರಿ ಆರಂಭ

Last Updated 9 ಅಕ್ಟೋಬರ್ 2022, 6:22 IST
ಅಕ್ಷರ ಗಾತ್ರ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಿಂದ ಕುಂದಾಪುರ ನಗರಕ್ಕೆ ಪ್ರವೇಶ ಕಲ್ಪಿಸಲು ಹಾಗೂ ನಗರದಿಂದ ಹೆದ್ದಾರಿಗೆ ತೆರಳಲು ಸರ್ವಿಸ್ ರಸ್ತೆಯಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ನೀಡುವಂತೆ ಕಳೆದ ಕೆಲವು ಸಮಯದಿಂದ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಹೆದ್ದಾರಿ ಪ್ರಾಧಿಕಾರ ಸ್ಪಂದಿಸಿದೆ.

ನಗರದ ಲೋಕೋಪಯೋಗಿ ಕಚೇರಿಯ ಮುಂಭಾಗದಲ್ಲಿನ ಸರ್ವಿಸ್ ರಸ್ತೆಗೆ ಪ್ರವೇಶಕ್ಕೆ ಅವಕಾಶವಾಗುವಂತೆ, ಉಡುಪಿಯಿಂದ ಕುಂದಾಪುರಕ್ಕೆ ಬರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಗರಕ್ಕೆ ಪ್ರವೇಶ ಹಾಗೂ ನಗರದಿಂದ ನಿರ್ಗಮಕ್ಕೆ ಬೇಡಿಕೆ ಇದ್ದರೂ, ಇದೀಗ ಪ್ರಾಯೋಗಿಕವಾಗಿ ಪ್ರವೇಶಾವಕಾಶವನ್ನು ನೀಡಲಾಗಿದ್ದು ಇದರ ಸಾಧಕ ಬಾಧಕಗಳನ್ನು ಅವಲಂಭಿಸಿ ನಿರ್ಗಮನಕ್ಕೆ ಅವಕಾಶ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಬೇಡಿಕೆ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ನಗರದ ಬಹುಪಾಲು ಭಾಗ ಮೇಲ್ಸೇತುವೆ ಹೊಂದಿರುವುದರಿಂದ, ಉಡುಪಿ ಭಾಗದಿಂದ ಕುಂದಾಪುರ ನಗರಕ್ಕೆ ಬರುವ ಪ್ರಯಾಣಿಕರು ದೂರದ ಹಂಗಳೂರಿನಿಂದ ಹಾಗೂ ನಗರದಿಂದ ಹೊರ ತೆರಳುವವರು ವಿನಾಯಕ ದೇವಸ್ಥಾನದ ಬಳಿಯಿಂದ ಹೆದ್ದಾರಿ ಸಂಪರ್ಕಿಸಬೇಕಾದ ಅನೀವಾರ್ಯತೆ ಇದೆ.

ಇದರಿಂದಾಗಿ ಸರ್ವಿಸ್ ರಸ್ತೆಗಳ ಮೇಲೆ ಸಂಚಾರ ಒತ್ತಡ, ಅನಗತ್ಯ ಇಂಧನ ವ್ಯಯ ಹಾಗೂ ಸಮಯ ವ್ಯರ್ಥವಾಗುತ್ತದೆ ಎನ್ನುವ ತಾಂತ್ರಿಕ ಅಂಶಗಳನ್ನು ಇಟ್ಟುಕೊಂಡು ಸ್ಥಳೀಯರು ಹೋರಾಟಕ್ಕೆ ಮುಂದಾಗಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಈ ಪರಿಸರದ ಪ್ರಮುಖ ಜನಪ್ರತಿನಿಧಿಗಳು ಸಾರ್ವಜನಿಕ ಬೇಡಿಕೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.

ಬೇಡಿಕೆಯನ್ನು ಪರಿಶೀಲಿಸಿ ವರದಿ ನೀಡಲು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಯ ಬಳಿಕವೂ ಯಾವುದೇ ಪರಿಣಾಮಕಾರಿ ಬೆಳವಣಿಗೆಗಳು ನಡೆಯದ ಕಾರಣ, ಇತ್ತೀಚೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ದೀಪದ ವ್ಯವಸ್ಥೆ ಕಲ್ಪಿಸಲು ಆಗ್ರಹ: ಪ್ರವೇಶಾವಕಾಶ ನೀಡಲು ಇಲಾಖೆ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸಿರುವ ಸಾಮಾಜಿಕ ಹೋರಾಟಗಾರ ವಿವೇಕ್ ನಾಯಕ್ ಅವರು, ಉಡುಪಿ ಭಾಗದಿಂದ ಕುಂದಾಪುರ ನಗರಕ್ಕೆ ಬರುವವರಿಗೆ ಇದೇ ಪ್ರಮುಖ ಪ್ರವೇಶ ಮಾರ್ಗವಾಗಿ ಬದಲಾಗುವುದರಿಂದ ಇಲ್ಲಿ ಸರಿಯಾದ ದೀಪದ ವ್ಯವಸ್ಥೆಯನ್ನು ಮಾಡಬೇಕಾದ ಅವಶ್ಯತೆ ಇದೆ. ಹೆದ್ದಾರಿಯಲ್ಲಿ ಕನಿಷ್ಠ 1 ಕಿ.ಮೀ ದೂರದಲ್ಲಿ ನಗರಕ್ಕೆ ಪ್ರವೇಶ ಇರುವುದರ ಬಗ್ಗೆ ವಾಹನ ಚಾಲಕರಿಗೆ ಮಾಹಿತಿ ನೀಡುವ ಸೂಚನಾ ಫಲಕವನ್ನು ಅಳವಡಿಸುವ ಕುರಿತು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ನಗರದಿಂದ ನಿರ್ಗಮನವಾಗುವ ವಾಹನಗಳು ಹೆದ್ದಾರಿಗೆ ತೆರಳಲು ಅನುಕೂಲವಾಗುವಂತೆ, ಪ್ರವೇಶಕ್ಕೆ ಅವಕಾಶ ನೀಡಿದ ಇನ್ನೊಂದು ಬದಿಯಲ್ಲಿ ಅವಕಾಶ ನೀಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಿರ್ಗಮನಕ್ಕೂ ಅವಕಾಶ ನೀಡಲು ಒತ್ತಾಯ: ಜಿಲ್ಲೆಯಲ್ಲಿ ಅತಿ ಹೆಚ್ಚು ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‌ಗಳನ್ನು ಹೊಂದಿರುವ ತಾಲ್ಲೂಕು ಕೇಂದ್ರಗಳಲ್ಲಿ ಕುಂದಾಪುರ ಪ್ರಮುಖ. ಇಲ್ಲಿ ಏನಿಲ್ಲ ಎಂದರು ಕನಿಷ್ಠ 10-12 ಖಾಸಗಿ ಹಾಗೂ ಒಂದು ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗಳು ಇವೆ.

ಇಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಹಾಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ, ಮಣಿಪಾಲ ಹಾಗೂ ಮಂಗಳೂರಿಗೆ ಕರೆದುಕೊಂಡು ಹೋಗುವ ಅನೀವಾರ್ಯತೆ ಇದೆ. ಕುಂದಾಪುರ
ಪರಿಸರದಲ್ಲಿ ಸಾಕಷ್ಟು ಸರ್ಕಾರಿ ಕಚೇರಿಗಳಿದ್ದು, ಇಲ್ಲಿನ ಅಧಿಕಾರಿಗಳು ಅಗತ್ಯ ಸಭೆ ಹಾಗೂ ಇತರ ಕಚೇರಿ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಸಂದರ್ಭಗಳು ಎದುರಾಗುತ್ತದೆ.

ಈ ಸಂದರ್ಭಗಳಲ್ಲಿ ನಗರದಲ್ಲಿನ ವಾಹನ ಸಂಚಾರಗಳ ಒತ್ತಡದಲ್ಲಿ ಹೆದ್ದಾರಿಯನ್ನು ಪ್ರವೇಶಿಸಲು ಸಾಕಷ್ಟು ಸಮಯ ವ್ಯಯವಾಗುತ್ತದೆ. ಇದರಿಂದ ಅಂಬುಲೆನ್ಸ್‌ನಲ್ಲಿ ಸಾಗುವ ರೋಗಿಗಳನ್ನು ಭಗವಂತನೇ ಕಾಪಾಡಬೇಕು.

ಈ ಎಲ್ಲ ಕಾರಣಗಳಿಂದಾಗಿ ಸರ್ವಿಸ್ ರಸ್ತೆಯ ಒತ್ತಡ ಕಡಿಮೆ ಮಾಡಲು ಪೂರಕವಾಗುವಂತೆ ನಗರದಿಂದ ನಿರ್ಗಮನಕ್ಕಾಗಿ ಹೆದ್ದಾರಿಯಲ್ಲಿ ಅವಕಾಶ ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಹೋರಾಟ ಸಮಿತಿಯ ಪ್ರಮುಖರಾದ ಬಿ.ಕಿಶೋರಕುಮಾರ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ ಕೋಳ್ಕೆರೆ ಪ್ರಾಧಿಕಾರದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT