ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮೇಲೆ ಚಿತ್ತಾರ ಬಿಡಿಸಿದ 'ಬೆಳಕು'

21 ಸ್ವಯಂ ಸೇವಕರಿಂದ ಎರಡು ದಿನ ಶ್ರಮದಾನ: ಕಂಗೊಳಿಸಿದ ಶಾಲೆ
Last Updated 6 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಕುಂದಾಪುರ: ಕಣ್ಙು ಹಾಯಿಸಿದಷ್ಟು ದೂರ ಕಾಣುವ ಪ್ರಕೃತಿ ರಮಣೀಯವಾದ ಅರಣ್ಯದ ಸಮೀಪದಲ್ಲೊಂದು ಸರ್ಕಾರಿ ಶಾಲೆ. ಅದರ ಗೋಡೆಗಳ ಮೇಲೆಲ್ಲ ಕಣ್ಮನ ಸೆಳೆಯುವ ಬಣ್ಣದ ಚಿತ್ತಾರ..

ಈ ದೃಶ್ಯ ಕಂಡುಬಂದಿದ್ದು ತಾಲ್ಲೂಕಿನ ಕುಗ್ರಾಮ ಕೊಡ್ಲಾಡಿ ಗ್ರಾಮದ ಮಾರ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ. ಈ ಚಿತ್ತಾರ ಮೂಡಿಸಿದ್ದು ಬೆಂಗಳೂರಿನ 'ಬೆಳಕು' ಸಮಾಜ ಸೇವಾ ತಂಡ.

ದಶಕಗಳಿಂದ ಸುಣ್ಣ ಬಣ್ಣ ಕಾಣದ ಶಾಲೆಗಳ ಅಂದ ಹೆಚ್ಚಿಸಬೇಕು ಎಂಬ ಶಾಲಾಭಿವೃದ್ಧಿ ಸಮಿತಿಯ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದವರು ಶಾಲೆಯ ಹಳೆಯ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ. ವೃತ್ತಿ ಬದುಕಿನೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ತುಡಿತ ಹೊಂದಿರುವ ಒಂದಷ್ಟು ಯುವ ಮನಸ್ಸುಗಳು ಒಟ್ಟಾಗಿಸಿ ನಿರ್ಮಾಣವಾಗಿರುವ ‘ಬೆಳಕು’ ಸಂಘಟನೆಯ‌ ಸ್ನೇಹಿತರನ್ನು ಸಂಪರ್ಕಿಸಿ ಶಾಲೆಯ ಅಭಿವೃದ್ಧಿಯ ಕನಸನ್ನು ಅವರ ಮುಂದೆ ತೆರೆದಿಟ್ಟರು.

ಸಂದೀಪ್ ಒತ್ತಾಸೆಯಂತೆ ಈಚೆಗೆ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದ ಬೆಳಕು ತಂಡದ 21 ಮಂದಿ ಸ್ವಯಂ ಸೇವಕರು ಎರಡು ದಿನಗಳ ಕಾಲ ಶ್ರಮದಾನ ಮಾಡಿ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. ಶಾಲಾ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ ಬಳಿದಿದ್ದಾರೆ. ನಾಮಫಲಕವನ್ನು ಸುಂದರವಾಗಿ ಬರೆದಿದ್ದಾರೆ.

ಶಾಲೆ ಎದುರಿನ ಗೋಡೆಗಳಿಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು, ಮಕ್ಕಳ ಮನಸ್ಸಿಗೆ ಮುದ ನೀಡುವ ಚಿತ್ತಾರಗಳನ್ನು ರಚಿಸಿದ್ದಾರೆ. ಆವರಣ ಗೋಡೆ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿದು ಶಾಲೆಯ ಅಂದ ಹೆಚ್ಚಿಸಲಾಗಿದೆ.

ಬೆಳಕು ತಂಡ ಈಗಾಗಲೇ ಬೆಂಗಳೂರು, ಮಂಡ್ಯ, ಕಾರವಾರ ಸಹಿತ ರಾಜ್ಯದ 9 ಶಾಲೆಗಳ ಅಂದವನ್ನು ಹೆಚ್ಚಿಸಿದೆ. ಕುಂದಾಪುರ ತಾಲ್ಲೂಕಿನ ಮಾರ್ಡಿ ಶಾಲೆ 10ನೇ ಶಾಲೆ. ತಂಡದ ಸದಸ್ಯ ವಿನಯ್ ಕೆ.ಆರ್ ಪೇಟೆ ಕೃೆಚಳಕದಿಂದ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳು ಅನಾವರಣಗೊಂಡಿವೆ.

ಬೆಳಕು ತಂಡದ ಬಗ್ಗೆ:

2019ರಲ್ಲಿ ನಟ ವಿಷ್ಣುವರ್ಧನ್ ಜನ್ಮದಿನದಂದು 9 ಮಂದಿ ಸಮಾನಮನಸ್ಕರು ಸೇರಿ ಬೆಂಗಳೂರಿನಲ್ಲಿ ಹುಟ್ಟುಹಾಕಿದ ‘ಬೆಳಕು' ಸಂಘಟನೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದ ಯುವಕರು, ಯುವತಿಯರು, ವಯಸ್ಕರು ಸೇರಿ 210 ಸದಸ್ಯರಿದ್ದಾರೆ. ಹೆಚ್ಚಿನವರು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರದ್ದು ತಿಂಗಳಿನಲ್ಲಿ ಒಂದು ದಿನ ಸಮಾಜ ಸೇವೆಗೆ ಮೀಸಲಿಡುವ ಬದ್ಧತೆ.

ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸ್ಲಂಗಳಿಗೂ ಭೇಟಿ ನೀಡಿ ಅಗತ್ಯ ಸೌಲಭ್ಯ ನೀಡುತ್ತಿದೆ ತಂಡ. ಪ್ರಾಣಿ-ಪಕ್ಷಿಗಳ ರಕ್ಷಣೆ ಸಹಿತ ಸಾಮಾಜಿಕ ಸೇವಾ ಕೈಂಕರ್ಯಗಳಲ್ಲೂ ತೊಡಗಿಸಿಕೊಂಡಿದೆ. ದುಡಿಮೆಯ ಒಂದು ಪಾಲನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿರುವ ಬೆಳಕು ತಂಡ ಯಾರಿಂದಲೂ ವಂತಿಗೆ, ಸಹಾಯಧನ ಪಡೆಯುತ್ತಿಲ್ಲ. ತಂಡದ ಸಮಾಜಸೇವೆ ಗುರುತಿಸಿ ರತ್ನಶ್ರಿ, ಸೇವಾಭೂಷಣ, ಬಾಂಧವ್ಯ ರತ್ನ, ಸುವರ್ಣ ಕನ್ನಡಿಗ ಪ್ರಶಸ್ತಿ ನೀಡಲಾಗಿದೆ.

ಬೆಳಕು ತಂಡದ ಕೆಲಸ ನಾಲ್ಕಾರು ಜನರಿಗೆ ಪ್ರೇರಣೆಯಾಗಬೇಕು ಎನ್ನುವ ನಿಟ್ಟಿನಲ್ಲಿ 'ಪಯಣದ ಹಾದಿಗೆ ಪ್ರೇರಣೆ' ಎಂಬ ಟ್ಯಾಗ್ ಲೈನ್ ನೀಡಲಾಗಿದ್ದು, ಇಡೀ ತಂಡ ಒಂದು ಕುಟುಂಬದಂತೆ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಬೆಳಕು ತಂಡದ ಶಿವಕುಮಾರ್.

ಭಾನುವಾರದ ಸಂಜೆ ಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಾಕರ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೇಂದ್ರ ನಾಯ್ಕ ಕೊಡ್ಲಾಡಿ, ವಿದ್ಯಾಧರ ಶೆಟ್ಟಿ, ನಿವೃತ್ತ ಯೋಧ ಶಿವರಾಮ ನಾಯ್ಕ, ಉದಯಕುಮಾರ್, ಮುಖ್ಯ ಶಿಕ್ಷಕಿ ಗೌರಿ ಬಾಯಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ್ ಬಿ.ಕೆ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರ ಗಜೇಂದ್ರ ನಾಯ್ಕ ಶಿಕ್ಷಕ ಗಣೇಶ್ ಸಿ.ಎನ್ ಇದ್ದರು. ಈ ಸಂದರ್ಭ ಹಳೆಯ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT