ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ಮಾಜಿ ಶಾಸಕ ಅಮಾಸೆಬೈಲ್ ಗೋಪಾಲಕೃಷ್ಣ ಕೊಡ್ಗಿ ನಿಧನ

Last Updated 13 ಜೂನ್ 2022, 11:29 IST
ಅಕ್ಷರ ಗಾತ್ರ

ಕುಂದಾಪುರ (ಉಡುಪಿ ಜಿಲ್ಲೆ): ಮಾಜಿ ಶಾಸಕ ಹಾಗೂ 3ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಅಮಾಸೆಬೈಲ್ ಗೋಪಾಲಕೃಷ್ಣ ಕೊಡ್ಗಿ ( 93) ಸೋಮವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅಮಾಸೆಬೈಲಿನಲ್ಲಿ ತಾವೇ ಅಧ್ಯಕ್ಷರಾಗಿರುವ ಅಮಾಸೆಬೈಲ್ ಚಾರಿಟಬಲ್ ಟ್ರಸ್ಟ್‌ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಹು ಅಂಗಾಗಳ ವೈಫಲ್ಯಕ್ಕೆ ಒಳಗಾಗಿದ್ದರು.

ಪತ್ನಿ ಸುನಂದಾ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ.ಕಿರಣಕುಮಾರ ಕೊಡ್ಗಿ, ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರಕುಮಾರ ಕೊಡ್ಗಿ ಸೇರಿದಂತೆ ಐದು ಗಂಡು ಹಾಗೂ ಪುತ್ರಿ ಇದ್ದಾರೆ. ಎ.ಜಿ.ಕೊಡ್ಗಿಯರ ಮೃತ ದೇಹವನ್ನು ಅಮಾಸೆಬೈಲಿಗೆ ತಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿ, ಮಂಗಳವಾರ ಜೂನ್‌ 14ರಂದು ಮಧ್ಯಾಹ್ನ 1ಕ್ಕೆ ಸ್ವಗ್ರಹದ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

1929 ರ ಅಕ್ಟೋಬರ್‌ 1 ರಂದು ಕಾರ್ಕಳ ತಾಲ್ಲೂಕಿನ ಮಂಜರಪಳಿಕೆಯಲ್ಲಿ ಜನಿಸಿದ್ದ ಅವರು, 8ನೇ ತರಗತಿಯವರೆಗೆ ಶಂಕರನಾರಾಯಣದಲ್ಲಿ ಶಿಕ್ಷಣ ಪಡೆದರು. ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಮಂಗಳೂರಿನ ಸೇಂಟ್‌ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದುಕೊಂಡಿದ್ದರು. ಮುಂದೆ ಪೂಣೆಯಲ್ಲಿ ಕಾನೂನು ಪದವಿ ಪಡೆದು, ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ್ದರು.

1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 1956 ರಲ್ಲಿ ಮರಳಿ ಅಮಾಸೆಬೈಲಿಗೆ ಬಂದಿದ್ದ ಅವರು, ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು, ಕೃಷಿ, ಹೈನುಗಾರಿಕೆ, ಸಹಕಾರಿ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. 1960ರಲ್ಲಿ ಕುಂದಾಪುರ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. 14 ವರ್ಷ ಶಂಕರನಾರಾಯಣ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿದ್ದರು. ದಕ್ಷಿಣ ಜಿಲ್ಲಾ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಕರ್ಣಾಟಕ ಬ್ಯಾಂಕಿನ ನಿರ್ದೇಶಕರಾಗಿದ್ದರು.

ರಾಜಕೀಯ ನಂಟು: 1960 ರಲ್ಲಿ ನಡೆದ ತಾಲ್ಲೂಕು ಬೋರ್ಡ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಾಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಬಳಿಕ ತಾಲ್ಲೂಕು ಬೋರ್ಡ್ ಉಪಾಧ್ಯಕ್ಷ ಹಾಗೂ ಅಧ್ಯಕ್ಷರಾಗಿದ್ದರು.

ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ 1972 ಹಾಗೂ 1978 ಆಯ್ಕೆಯಾಗಿದ್ದರು. 1993ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು 2006 ರ ಆಗಸ್ಟ್‌ 28 ರಿಂದ ರಾಜ್ಯದ 3ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಹಾಗೂ 2009 ರ ಜುಲೈ 3 ರಿಂದ ರಾಜ್ಯದ 3ನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1994ರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2013 ರ ಅಕ್ಟೋಬರ್‌ 1 ರಂದು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು.

ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್‌: ಅಮಾಸೆಬೈಲ್ ಹಾಗೂ ಪರಿಸರದ ಗ್ರಾಮಗಳ ಅಭಿವೃದ್ಧಿಯ ಉದ್ದೇಶದಿಂದ 2008 ರ ಅಕ್ಟೋಬರ್‌ 10 ರಂದು ಡಿ.ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷ ಹಾಗೂ ಎ.ಜಿ.ಕೊಡ್ಗಿ ಅಧ್ಯಕ್ಷರಾಗಿ ಅಮಾಸೆಬೈಲ್ ಚಾರಿಟಬಲ್ ಟ್ರಸ್ಟ್‌ ಪ್ರಾರಂಭ ಮಾಡಿ, ಅದರ ಮೂಲಕ ಪರಿಸರದ ಹಲವಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ತಮ್ಮ ಚಟುವಟಿಕೆಯ ಕೊನೆಯವರೆಗೂ ಟ್ರಸ್ಟ್‌ ಕಚೇರಿಯಲ್ಲಿ ಕುಳಿತು, ಜವಾಬ್ದಾರಿ ನಿರ್ವಹಿಸುವುದನ್ನು ರೂಢಿಯಾಗಿರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT