ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆಗಳು

Last Updated 3 ನವೆಂಬರ್ 2021, 15:44 IST
ಅಕ್ಷರ ಗಾತ್ರ

‘ಮಲ್ಪೆ ರಸ್ತೆಯ ಗುಂಡಿ ಮುಚ್ಚಿ’

ಉಡುಪಿಯಿಂದ ಮಲ್ಪೆಗೆ ಹೋಗುವ ಮುಖ್ಯರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ವಾಹನಗಳನ್ನು ಓಡಿಸುವುದೇ ದೊಡ್ಡ ಸವಾಲಾಗಿದೆ. ಒಂದೊಂದು ಗುಂಡಿ ಒಂದು ಅಡಿಗೂ ಹೆಚ್ಚು ಆಳವಾಗಿದ್ದು, ಪ್ರತಿನಿತ್ಯ ಸವಾರರು ಬಿದ್ದು ಗಾಯ ಮಾಡಿಕೊಳ್ಳುವಂತಾಗಿದೆ. ಗುಂಡಿಗಳ ಅರಿವಿಲ್ಲದೆ ಆಟೊ, ಕಾರು ಹಾಗೂ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಗುಂಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರೆ, ಮಣ್ಣು ತಂದು ಸುರಿಯಲಾಗುತ್ತದೆ. ಸಣ್ಣ ಮಳೆಗೆ ಗುಂಡಿಗೆ ಹಾಕಿದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದ್ದು, ಪದೇಪದೇ ಸಮಸ್ಯೆ ತಲೆದೋರುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುಂಡಿಗಳಿಗೆ ಕಾಂಕ್ರಿಟ್‌ ಹಾಕಿ ಮುಚ್ಚಬೇಕು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

–ರಾಜೇಶ್‌, ಸ್ಥಳೀಯ

‘ಸಿಸಿಟಿವಿ ಕ್ಯಾಮೆರಾ ಹಾಕಿ’

ರಾಷ್ಟ್ರೀಯ ಹೆದ್ದಾರಿ ಸಮೀಪದ ಮಣಿಪಾಲ್ ಇನ್ ಹೋಟೆಲ್ ಮಗ್ಗುಲಲ್ಲಿ ಬೊಂಡದ ಚಿಪ್ಪು, ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳನ್ನು ರಾಶಿಯಾಗಿ ತಂದು ಸುರಿಯಲಾಗುತ್ತಿದೆ. ಮಳೆಯ ನೀರು ತೆಂಗಿನ ಚಿಪ್ಪಿನಲ್ಲಿ ತುಂಬಿಕೊಂಡು ಸಾಂಕ್ರಮಿಕ ರೋಗಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಈ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ತ್ಯಾಜ್ಯವನ್ನು ತಂದು ಸುರಿಯುವವರಿಗೆ ದಂಡ ಹಾಕಿ ಪ್ರಕರಣ ದಾಖಲಿಸಬೇಕು. ಸ್ಥಳದಲ್ಲಿ ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ತ್ಯಾಜ್ಯ ಎಸೆಯುವವರಿಗೆ ದಂಡ ಹಾಕುವ ಎಚ್ಚರಿಕೆ ಫಲಕವನ್ನು ಅಳವಡಿಸಬೇಕು. ಈ ಭಾಗದಲ್ಲಿ ಗಸ್ತು ಮಾಡಬೇಕು.

–ವೆಂಕಟೇಶ್ ಪ್ರಭು, ನಾಗರಿಕ

‘ಚರಂಡಿ ಸ್ಲಾಬ್ ಸರಿಪಡಿಸಿ’

ರಾಷ್ಟ್ರೀಯ ಹೆದ್ದಾರಿ ಬದಿಯ ಸೇವಾ ರಸ್ತೆಯಲ್ಲಿ ಮಳೆನೀರು ಹಾಗೂ ತ್ಯಾಜ್ಯ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಲಾಗಿದ್ದು, ಅದರ ಮೇಲೆ ಹಾಕಿರುವ ಸ್ಲಾಬ್‌ಗಳು ಕುಸಿದು ಬಿದ್ದಿವೆ. ಸೇವಾ ರಸ್ತೆಯಲ್ಲಿ ಪಾದಚಾರಿ ಮಾರ್ಗವಿಲ್ಲದ ಕಾರಣ ಸಾರ್ವಜನಿಕರು ಚರಂಡಿ ಸ್ಲಾಬ್ ಮೇಲೆ ನಡೆದುಕೊಂಡು ಹೋಗಬೇಕಾಗಿದೆ. ಅಲ್ಲಲ್ಲಿ ಸ್ಲಾಬ್‌ಗಳು ಮುರಿದುಬಿದ್ದಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಚರಂಡಿಯ ದುರ್ನಾತ ಪರಿಸರವನ್ನು ಅಸಹನೀಯಗೊಳಿಸಿದೆ. ಕೂಡಲೇ ಚರಂಡಿ ಮೇಲೆ ಸ್ಲಾಬ್‌ ಅಳವಡಿಸಬೇಕು.

–ರಮಾನಂದ ಶೆಣೈ, ನಾಗರಿಕ

‘ದಾರಿದೀಪ ಅಳವಡಿಸಿ’

ರಾಷ್ಟ್ರೀಯ ಹೆದ್ದಾರಿ 169 ‘ಎ’ ವ್ಯಾಪ್ತಿಯ ಕಡಿಯಾಳಿಯಿಂದ ಪರ್ಕಳದವರೆಗೆ ದಾರಿದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಪರಿಣಾಮ, ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಪಾದಚಾರಿಗಳು ಓಡಾಡಲೂ ಭಯಪಡುವಂತಾಗಿದೆ. ಪಾದಚಾರಿ ಮಾರ್ಗದ ಪಕ್ಕದಲ್ಲೇ ಹುಲ್ಲಿನ ಪೊದೆಗಳಿದ್ದು, ಸಾರ್ವಜನಿಕರು ಆತಂಕದಿಂದ ಪ್ರಯಾಣಿಸುವಂತಾಗಿದೆ. ತಕ್ಷಣ ದಾರಿದೀಪಗಳ ವ್ಯವಸ್ಥೆ ಮಾಡಬೇಕು.

– ನಿತ್ಯಾನಂದ ಒಳಕಾಡು, ಜಿಲ್ಲಾ ನಾಗರಿಕ ಸಮಿಯ ಸಂಚಾಲಕ

‘ವಾಹನ ತೆರವುಗೊಳಿಸಿ’

ಮಣಿಪಾಲದ ಎಂಐಟಿ ನಿಲ್ದಾಣದ ಬಳಿ ನವೀಕೃತ ಬಬ್ಬು ಸ್ವಾಮಿ ದೇವಸ್ಥಾನದ ಎದುರುಗಡೆ ಪುಸ್ತಕ ಮಾರಾಟ ವಾಹನ ನಿಲ್ಲಿಸಿಕೊಳ್ಳಲಾಗಿದೆ. ಹಲವು ದಿನಗಳಿಂದ ಈ ವಾಹನ ತಿರುಗದೆ ನಿಂತಲ್ಲಿಯೇ ನಿಂತಿದೆ. ವಾಹನಕ್ಕೆ ಬೃಹತ್ ಕಟೌಟ್‌ಗಳನ್ನು ಅಳವಡಿಸಿ, ಪುಸ್ತಕದ ವ್ಯಾಪಾರ ಶುರು ಮಾಡಲಾಗಿದೆ. ಶಾಲಾ ಕಾಲೇಜುಗಳು, ಕೆಎಂಸಿ ಆಸ್ಪತ್ರೆ ಹತ್ತಿರುವಿರುವ ಅತ್ಯಂತ ಜನನಿಬಿಡ ಪ್ರದೇಶ ಇದಾಗಿದ್ದು, ನಾಲ್ಕು ರಸ್ತೆಗಳು ಕೂಡುವ ಜಾಗವಾಗಿದೆ. ವಾಹನ ನಿಂತಲ್ಲೇ ನಿಂತು ತಿರುಗದೆ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದು, ಅಪಘಾತಗಳಾಗುವ ಆತಂಕ ಎದುರಾಗಿದೆ. ಕೂಡಲೇ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕು.

–ಸ್ಥಳೀಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT