ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ತೋಟಕ್ಕೆ ಅಗತ್ಯ ಪೋಷಕಾಂಶ ಕೊಡಿ: ಕೆವಿಕೆ ವಿಜ್ಞಾನಿ ಡಾ.ಎಚ್‌.ಎಸ್‌.ಚೈತನ್ಯ

Last Updated 14 ಮೇ 2021, 14:12 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಅಡಿಕೆ ಮತ್ತು ಕಾಳುಮೆಣಸು ರೈತರಿಗೆ ಉತ್ತಮ ಆದಾಯ ತಂದುಕೊಡುವ ಬೆಳೆ. ರೈತರು ಸಮರ್ಪಕ ಬೇಸಾಯ ಕ್ರಮಗಳನ್ನು ಪಾಲಿಸುವುದರಿಂದ ಉತ್ತಮ ಇಳುವರಿಯ ಜತೆಗೆ ಅಧಿಕ ಲಾಭ ಪಡೆಯಬಹುದು ಎಂದು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಸಲಹೆ ನೀಡಿದೆ.

ಅಡಿಕೆ ತೋಟದಲ್ಲಿ ದುಡಿಯುವ ಕೃಷಿಕರು ಮುಂಗಾರು ಶುರುವಾಗುವ ಮೊದಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ವರ್ಷದ ಆರರಿಂದ ಎಂಟು ತಿಂಗಳು ಪಟ್ಟ ಶ್ರಮ ವ್ಯರ್ಥವಾಗುತ್ತದೆ. ಇಳುವರಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾರುತ್ತವೆ ಎನ್ನುತ್ತಾರೆ ಕೆವಿಕೆ ವಿಜ್ಞಾನಿ ಡಾ.ಎಚ್‌.ಎಸ್‌.ಚೈತನ್ಯ.

ಪೋಷಕಾಂಶಗಳ ನಿರ್ವಹಣೆ:

ಮೇ ಮೊದಲ ವಾರದಲ್ಲಿ ಜಿಲ್ಲೆಯಾದ್ಯಂತ ಮಳೆಯಾಗಿರುವುದರಿಂದ ಭೂಮಿ ತಂಪಾಗಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಲಭ್ಯವಿರುತ್ತದೆ. ಅಡಿಕೆ ಮರಳಿಗೆ ಪೋಷಕಾಂಶಗಳನ್ನು ಒದಗಿಸಲು ಇದು ಸೂಕ್ತ ಸಮಯ. ಈ ಅವಧಿಯಲ್ಲಿ ಶಿಫಾರಸ್ಸು ಮಾಡಿರುವ ಸಾರಜನಕ, ರಂಜಕ, ಮತ್ತು ಪೊಟ್ಯಾಶ್ ಪೋಷಕಾಂಶಗಳನ್ನು ಎರಡು ಕಂತುಗಳಲ್ಲಿ ಅಡಿಕೆ ಮರಗಳಿಗೆ ಕೊಡುವುದು ಉತ್ತಮ.

ರಾಸಾಯನಿಕ ಗೊಬ್ಬರಗಳ ಮೊದಲ ಕಂತನ್ನು ಅಡಿಕೆ ಮರಗಳಿಗೆ ಈ ಸಮಯದಲ್ಲಿ ಕೊಡುವುದು ಅವಶ್ಯ. ರಾಸಾಯನಿಕ ಗೊಬ್ಬರ ಕೊಡುವ ಮೊದಲು ಮಣ್ಣಿನಲ್ಲಿರುವ ಹುಳಿ ಅಂಶ ಸರಿಪಡಿಸಲು ಪ್ರತಿ ಅಡಿಕೆ ಮರಕ್ಕೆ ಅರ್ಧ ಕೆ.ಜಿ. ಸುಣ್ಣ ಒದಗಿಸಬೇಕು. ಸುಣ್ಣ ಕೊಟ್ಟ ಮೂರು ವಾರದ ನಂತರ ಮೊದಲ ಕಂತಿನ ರಾಸಾಯನಿಕ ಗೊಬ್ಬರ ನೀಡಬೇಕು.

ಸಾರಜನಕ ಒದಗಿಸುವ ಬೇವು ಲೇಪಿತ ಯೂರಿಯಾವನ್ನು ಪ್ರತಿ ಮರಕ್ಕೆ 150 ಗ್ರಾಂ, ರಂಜಕ ಪೋಷಕಾಂಶ 150 ಗ್ರಾಂ ಮತ್ತು ಪೊಟ್ಯಾಶ್ ಪೋಷಕಾಂಶವನ್ನು ಎಂಒಪಿ ರೂಪದಲ್ಲಿ ಪ್ರತಿ ಮರಕ್ಕೆ 180 ಗ್ರಾಂ ಒದಗಿಸಬೇಕು ಎಂದು ಮಾಹಿತಿ ನೀಡುತ್ತಾರೆ ಡಾ.ಎಚ್‌.ಎಸ್‌.ಚೈತನ್ಯ.

ಅಡಿಕೆ ಮರಗಳಿಗೆ ಕಾಳುಮೆಣಸು ಬಳ್ಳಿಗಳನ್ನು ಅಂತರ ಬೆಳೆಯಾಗಿ ಬೆಳೆಸಿದ್ದರೆ ಸುಣ್ಣದ ಪ್ರಮಾಣ ಅರ್ಧ ಕೆ.ಜಿ, ಬೇವು ಲೇಪಿತ ಯೂರಿಯಾ 300 ಗ್ರಾಂ, ಶಿಲಾರಂಜಕ 300 ಗ್ರಾಂ ಎಂಒಪಿ 360 ಗ್ರಾಂ ಪ್ರತಿ ಮರಕ್ಕೆ ಒದಗಿಸಬೇಕು. ಅಡಿಕೆ ಮರಗಳಿಗೆ ಸುಣ್ಣ ಕೊಡುವಾಗ ಬುಡ ಬಿಡಿಸುವ ಅವಶ್ಯಕತೆ ಇಲ್ಲ. ಬುಡದಿಂದ ಒಂದೂವರೆಯಿಂದ ಎರಡು ಅಡಿ ದೂರದಲ್ಲಿ ಮಣ್ಣಿನ ಮೇಲ್ಭಾಗದಲ್ಲಿ ಸುಣ್ಣ ಚೆಲ್ಲಬೇಕು.

‌ಸುಣ್ಣ ಹಾಕಿದ ಮೂರು ವಾರಗಳ ನಂತರ ರಾಸಾಯನಿಕ ಗೊಬ್ಬರ ಹಾಕಬೇಕು. ರಾಸಾಯನಿಕ ಗೊಬ್ಬರವನ್ನೂ ಮರದ ಬುಡದಿಂದ ಒಂದೂವರೆಯಿಂದ ಎರಡು ಅಡಿ ದೂರದಲ್ಲಿ ಕೊಡುವುದು ಉತ್ತಮ. ಮರದ ಬೇರುಗಳಿಗೆ ಹಾನಿ ಮಾಡಬಾರದು. ರಸಗೊಬ್ಬರ ಹಾಕಿದ ಬಳಿಕ ಮಣ್ಣಿನಿಂದ ಮುಚ್ಚಿ, ಕಳೆ, ತುಂಡರಿಸಿದ ಅಡಿಕೆ ಹಾಳೆ ಮತ್ತು ಒಣಗಿದ ಅಡಿಕೆ ಗರಿಗಳಿಂದ ಹೊದಿಕೆ ಕೊಡಬೇಕು. ಅಡಿಕೆ ಮರಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಎರಡನೇ ಕಂತಿನ ಬೇಸಾಯವನ್ನು ಮಳೆಗಾಲ ಕಳೆದ ನಂತರ ಆಗಸ್ಟ್ ಅಥವಾ ಸಪ್ಟೆಂಬರ್‌ನಲ್ಲಿ ಕೊಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT