ಶಿಕ್ಷಣ ಸಾಲ: ನಿಗಧಿತ ಗುರಿ ತಲುಪಿ

ಶನಿವಾರ, ಜೂಲೈ 20, 2019
26 °C
ಲೀಡ್ ಬ್ಯಾಂಕ್ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ಸೂಚನೆ

ಶಿಕ್ಷಣ ಸಾಲ: ನಿಗಧಿತ ಗುರಿ ತಲುಪಿ

Published:
Updated:
Prajavani

ಉಡುಪಿ: 2018-19ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ಗಳು ವಿವಿಧ ಕ್ಷೇತ್ರವಾರು ₹ 6,515 ಕೋಟಿ ಸಾಲ ವಿತರಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಸುಜಾತಾ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಲೀಡ್ ಬ್ಯಾಂಕ್ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗಳಿಗೆ ₹ 8705.63 ಕೋಟಿ ಸಾಲ ವಿತರಣೆ ಗುರಿ ನೀಡಲಾಗಿತ್ತು. ಅದರಲ್ಲಿ ಶೇ 74.84 ಗುರಿ ಸಾಧಿಸಲಾಗಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರಕ್ಕೆ ₹ 2325 ಕೋಟಿ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರ ಉದ್ಯಮ ಕ್ಷೇತ್ರಕ್ಕೆ 1900 ಕೋಟಿ, ಶಿಕ್ಷಣ ಕ್ಷೇತ್ರಕ್ಕೆ ₹110 ಕೋಟಿ, ಗೃಹ ನಿರ್ಮಾಣ ಕ್ಷೇತ್ರಕ್ಕೆ ₹510 ಕೋಟಿ, ಇತರ ಆದ್ಯತಾ ವಲಯಗಳಿಗೆ ₹670 ಕೋಟಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆದ್ಯತಾ ವಲಯಕ್ಕೆ ₹ 7505 ಕೋಟಿ ಸಾಲದ ಗುರಿ ನೀಡಲಾಗಿತ್ತು. ಈ ಪೈಕಿ ₹5515 ಕೋಟಿ ಸಾಲ ನೀಡಲಾಗಿದ್ದು, ಶೇ 73.48 ಗುರಿ ತಲುಪಲಾಗಿದೆ. ಆದ್ಯತೆಯಲ್ಲದ ಕ್ಷೇತ್ರಗಳಿಗೆ ನಿಗಧಿಗೊಳಿಸಲಾಗಿದ್ದ ₹1200 ಕೋಟಿ ಸಾಲಕ್ಕೆ ಪ್ರತಿಯಾಗಿ ₹1000 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ₹23,827 ಕೋಟಿ ಠೇವಣಿ ಹಾಗೂ ₹11816 ಕೋಟಿ ಮುಂಗಸ ಸ್ವೀಕರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿ ಪ್ರಮಾಣ ಶೇ 6.54, ಮುಂಗಡ ಪ್ರಮಾಣ ಶೇ 5.2ರಷ್ಟು ಹೆಚ್ಚಾಗಿದೆ ಎಂದರು.

ಎಸ್‌ಸಿ, ಎಸ್‌ಟಿ ಸೇರಿದಂತೆ ದುರ್ಬಲ ವರ್ಗದ 99185 ಫಲಾನುಭವಿಗಳಿಗೆ ₹1355 ಕೋಟಿ ಸಾಲ ವಿತರಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ₹2497 ಕೋಟಿ ಸಾಲ ನೀಡಲಾಗಿದೆ. ₹3146 ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಎಲ್‌ಡಿಸಿಎಂ ಅಧಿಕಾರಿ ಡಿ.ಸಿ.ರುದ್ರೇಶ್ ಮಾತನಾಡಿ, ಕಿಸಾನ್ ಕ್ರೆಡಿಡ್ ಯೋಜನೆಯಡಿ 24543 ಕಾರ್ಡ್‌ದಾರರಿಗೆ ₹ 355.46 ಕೋಟಿ ಸಾಲ ನೀಡಲಾಗಿದೆ ಎಂದರು.

ಆರ್‌ಬಿಐ ಸಹಾಯಕ ಜನರಲ್‌ ಮ್ಯಾನೆಜರ್ ಪಿ.ಕೆ.ಪಟ್ಟಾನಾಯ್ಕ್ ಆರ್‌ಬಿಐನ ಬಡ್ಡಿಕಡಿತ, ವಿಶೇಷ ಸೂಚನೆಗಳು, ಬ್ಯಾಂಕ್‌ಗಳು ಅನುಸರಿಬೇಕಾದ ಮಾರ್ಗದರ್ಶಿಗಳ ವಿವರವನ್ನು ನೀಡಿದರು. ಎಲ್ಲ ಬ್ಯಾಂಕ್‌ಗಳು ಸಿ.ಡಿ ಅನುಪಾತವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಡಿಜಿಟಲ್ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಉತ್ತೇಜಿಸಬೇಕು ಎಂದು ಸೂಚನೆ ನೀಡಿದರು.

ನಬಾರ್ಡ್‌ ಸಹಾಯಕ ಜನರಲ್‌ ಮ್ಯಾನೇಜರ್ ಎಸ್‌.ರಮೇಶ್ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್‌ಗಳ ಸಾಧನೆಯನ್ನು ಅವಲೋಕಿಸಿದರು. ಆದ್ಯತಾ ವಲಯದ ಸಾಧನೆ ತೃಪ್ತಿಕರವಾಗಿಲ್ಲ. ಈ ವಲಯದ ಅಭಿವೃದ್ಧಿಗೆ  ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ, ನಬಾರ್ಡ್ ಯೋಜನೆಗಳ ಕುರಿತು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ಬಿ.ರೂಪೇಶ್‌, ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಎಲ್ಲ ಬ್ಯಾಂಕ್‌ಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಬ್ಯಾಂಕ್‌ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಂವಹನದ ಕೊರತೆ ಇರಬಾರದು ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !