ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಸೌಧದಲ್ಲಿ ಸೋರಿಕೆ: ಆಕ್ರೋಶ

ಸಮಗ್ರ ತನಿಖೆಗೆ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಆಗ್ರಹ
Last Updated 3 ಜುಲೈ 2022, 2:09 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹೆಬ್ರಿ: ‘₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೆಬ್ರಿ ತಾಲ್ಲೂಕು ಕಚೇರಿಯ ನೂತನ ಕಟ್ಟಡ ಆಡಳಿತ ಸೌಧ ಉದ್ಘಾಟನೆಯಾಗಿ ಒಂದು ತಿಂಗಳೊಳಗೆ ನೀರು ಸೋರಿಕೆಯಾಗುತ್ತಿರುವುದು ಭ್ರಷ್ಟಾಚಾರದ ಸಂಕೇತ. ಜನರ ತೆರಿಗೆ ಹಣದ ದುರುಪಯೋಗ ಪಡಿಸಿರುವುದಕ್ಕೆ ಇದೊಂದು ದೊಡ್ಡ ಉದಾಹರಣೆ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಆರೋಪಿಸಿದರು.

ಶನಿವಾರ ಹೆಬ್ರಿ ತಾಲ್ಲೂಕು ಕಚೇರಿಯ ನೂತನ ಕಟ್ಟಡ ಆಡಳಿತ ಸೌಧಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದರು.

ಹೆಬ್ರಿ ಜನತೆಯ ಕನಸಿನ ತಾಲ್ಲೂಕು ನಿರ್ಮಾಣಗೊಂಡಿದೆ. ಆದರೆ ತಾಲ್ಲೂಕು ಕಚೇರಿ ಕಟ್ಟಡ ಕಳಪೆ ಕಾಮಗಾರಿ ಆಗಿದೆ. ಕಾಮಗಾರಿಗಳಲ್ಲಿ ಕಮಿಷನ್, ರಸ್ತೆ ಹಾಗೂ ಕಿಂಡಿ ಅಣೆಕಟ್ಟು ಕಾಮಗಾರಿಯಲ್ಲಿಯೂ ಕಮಿಷನ್. ಭ್ರಷ್ಟ ಮಂತ್ರಿಗಳೊಂದಿಗೆ ಸೇರಿಕೊಂಡು ಕಮಿಷನ್ ನೀಡುವ ಸಲುವಾಗಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಹೆಬ್ರಿ ಆಡಳಿತ ಸೌಧ ಕಾಮಗಾರಿಯಲ್ಲಿ ಮಧ್ಯವರ್ತಿಗಳ ಕೈವಾಡವಿದೆ. ಬೊಮ್ಮಾಯಿ ಸರ್ಕಾರದ ಲೂಟಿಕೋರರ ಕೂಟದಲ್ಲಿ ಸಚಿವ ಸುನಿಲ್ ಕುಮಾರ್ ಲೂಟಿಕೋರ ಕುಖ್ಯಾತಿ ಪಡೆದಿದ್ದಾರೆ ಎಂದು ಮಂಜುನಾಥ ಪೂಜಾರಿ ಮುದ್ರಾಡಿ ಆರೋಪಿಸಿದರು.

ಕಟ್ಟಡ ಸೋರಿಕೆ ತಾಂತ್ರಿಕ ತೊಂದರೆಯಲ್ಲ: ಆಡಳಿತ ಸೌಧ ಸೊರಿಕೆಯಾಗಲು ತಾಂತ್ರಿಕ ತೊಂದರೆ ಎಂದು ಉತ್ತರಿಸುತ್ತಿರುವುದು ಸರಿಯಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಬೇಡಿ. ಕಳಪೆ ಕಾಮಗಾರಿ ನಡೆದಿದೆ ಮತ್ತು ಇದರಲ್ಲಿ ದಲ್ಲಾಳಿಗಳ ಕೈವಾಡವಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ದಲ್ಲಾಳಿಗಳು ಹಾಗೂ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮಂಜುನಾಥ ಪೂಜಾರಿ ಅಗ್ರಹಿಸಿದರು.

ಹೆಬ್ರಿ ಬ್ಲಾಕ್‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ, ವಿಶುಕುಮಾರ್ ಮುದ್ರಾಡಿ, ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜಿನಿ ಹೆಬ್ಬಾರ್ ಇದ್ದರು.

‘ಕಮಿಷನ್‌ ಆಸೆಗೆ ಕಳಪೆ ಕಾಮಗಾರಿ’

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ‘₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಅಡಳಿತ ಸೌಧ ಕಾಂಗ್ರೆಸ್ ಸರ್ಕಾರದ ಕೊಡುಗೆ. ಆದರೆ ಬಿಜೆಪಿ ಕಮಿಷನ್ ಆಸೆಗಾಗಿ ಕಳಪೆ ಕಾಮಗಾರಿ ಮಾಡಿ ಭ್ರಷ್ಟಚಾರಕ್ಕೆ ಮುನ್ನುಡಿ ಬರೆದಿದೆ. ಸಿದ್ದರಾಮಯ್ಯ ಸರ್ಕಾರದ ಅಂದಿನ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಹೆಬ್ರಿ ನೂತನ ತಾಲ್ಲೂಕು ಘೋಷಣೆ ಮಾಡಿ ತಾಲ್ಲೂಕು ಕಚೇರಿ ಕಟ್ಟಡ ಕಟ್ಟಲು ₹10 ಕೋಟಿ ಮಂಜೂರು ಮಾಡಿದ್ದರು. ಹೆಬ್ರಿ ಆಡಳಿತ ಸೌಧದಲ್ಲಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಸುನೀಲ್ ಕುಮಾರ್ ಕಾಂಗ್ರೆಸ್ ಪಕ್ಷದ ಹೋರಾಟವನ್ನು ಉಲ್ಲೇಖಿಸದೆ ತಾರತಮ್ಯ ಮಾಡಿದ್ದಾರೆ.

ಹೆಬ್ರಿ ತಾಲ್ಲೂಕಿನಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿ ಮಂಜೂರಾಗಿಲ್ಲ. ಇಂದಿಗೂ ದೂರದ ಬ್ರಹ್ಮಾವರ ಕಾರ್ಕಳಕ್ಕೆ ಹೋಗಬೇಕಿದೆ. ಸಚಿವ ಸುನಿಲ್‌ ಕುಮಾರ್ ಮುಂದಿನ 9 ತಿಂಗಳ ಅವಧಿಯಲ್ಲಿ ಹೆಬ್ರಿ ತಾಲ್ಲೂಕಿಗೆ ಸಬ್ ರಿಜಿಸ್ಟರ್ ಆಫೀಸ್ ಭಾಗ್ಯ ದೊರಕಿಸಿಕೊಡಲಿ. ಹೆಬ್ರಿ ತಾಲ್ಲೂಕಿಗೆ ಸುನಿಲ್‌ ಕುಮಾರ್ ಕೊಡುಗೆ ನಗಣ್ಯ ಎಂದು ಕೃಷ್ಣ ಶೆಟ್ಟಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT