ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ಬೇರು ಮಟ್ಟದಲ್ಲಿಯೇ ನಿರ್ಮೂಲನೆಯಾಗಲಿ: ಜಿ.ಪಂ ಸಿಇಒ ಪ್ರೀತಿ ಗೆಹ್ಲೋಟ್

Last Updated 18 ಸೆಪ್ಟೆಂಬರ್ 2019, 13:42 IST
ಅಕ್ಷರ ಗಾತ್ರ

ಉಡುಪಿ: ಬಾಲ್ಯ ವಿವಾಹಗಳಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಲಿದ್ದು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಸಮಾಜದಲ್ಲಿ ಅರಿವು, ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಪ್ರೀತಿ ಗೆಹ್ಲೋಟ್ ಹೇಳಿದರು.

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹ ಮಕ್ಕಳ ಬಾಲ್ಯವನ್ನು ಕಸಿಯುವಂತಹ ಅನಿಷ್ಠ ಪದ್ಧತಿಯಾಗಿದ್ದು ಮಕ್ಕಳ ಭವಿಷ್ಯವೂ ಹಾಳಾಗುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ಮೂಡನಂಬಿಕೆಗಳ ಪರಿಣಾಮದಿಂದ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಈ ಸಮಸ್ಯೆಯನ್ನು ಬೇರು ಮಟ್ಟದಿಂದಲೇ ನಿರ್ಮೂಲನೆ ಮಾಡಬೇಕು. ಸ್ವಯಂ ಸೇವಾ ಸಂಸ್ಥೆಗಳು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಡಿವೈಎಸ್‍ಪಿ ಜೈಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಇಲ್ಲ. ಜಿಲ್ಲೆಗೆ ವಲಸೆ ಬರುವವರಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಾಣಸಿಗುತ್ತಿವೆ. ಅವರಿಗೆ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಿ, ಈ ಮೌಢ್ಯವನ್ನು ಸಂಪೂರ್ಣ ತೊಡೆದುಹಾಕಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ ಮಾತನಾಡಿ, ‘ಬಾಲ್ಯ ವಿವಾಹ ಸಮಾಜಕ್ಕಂಟಿರುವ ಬಹು ದೊಡ್ಡ ಪಿಡುಗಾಗಿದ್ದು, ಇದನ್ನು ನಿರ್ಮೂಲನೆ ಮಾಡಲು ಸಂಘಟಿತ ಶ್ರಮ ಅಗತ್ಯ. ವಿವಾಹವಾಗಲು ಹೆಣ್ಣು ಹಾಗೂ ಗಂಡು ಶಾರೀರಿಕ ಹಾಗೂ ಮಾನಸಿಕ ಸದೃಢವಾಗಿರಬೇಕು ಎಂಬ ಹೆಣ್ಣಿಗೆ ಕನಿಷ್ಠ 18 ವರ್ಷ ಹಾಗೂ ಗಂಡಿಗೆ ಕನಿಷ್ಠ 21 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ. ಆದರೆ, ಸಾಮಾಜಿಕ, ಶೈಕ್ಷಣಿಕ, ಹಣಕಾಸು ಹಾಗೂ ಸಾಂಪ್ರದಾಯಿಕ ಭಾವನೆಗಳ ಒತ್ತಡದಿಂದಾಗಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದೆ’ ಎಂದು ವಿಷಾಧಿಸಿದರು.

ಬಾಲ್ಯ ವಿವಾಹಗಳಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಬಾಲ್ಯ ವಿವಾಹ ತಡೆಯುವ ವೇಳೆ ಅಧಿಕಾರಿಗಳಿಗೆ ತೊಂದರೆಗಳು ಎದುರಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಅಲ್ಲಿದ್ದವರಿಗೆ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು. ಬಾಲ್ಯ ವಿವಾಹಗಳ ಮಾಹಿತಿ ಸಿಕ್ಕರೆ ಚೈಲ್ಡ್ ಹೆಲ್ಪ್‌ಲೈನ್‌ ಸಂಖ್ಯೆ 1098ಕ್ಕೆ ಮಾಹಿತಿ ನೀಡಬೇಕು ಎಂದರು.

ಹಿರಿಯ ವಕೀಲ ಸಂಕಪ್ಪ, ಡಾ.ಶಶಿ ಜಾಯ್ಸ್ ಸೋನ್ಸ್, ಲೀಲಾವತಿ ಅವರು ಬಾಲ್ಯ ವಿವಾಹ ಕಾಯ್ದೆ, ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಪೊಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸದಸ್ಯರು, ಕಲ್ಯಾಣ ಮಂಟಪಗಳ ಪ್ರತಿನಿಧಿಗಳು, ಅರ್ಚಕರು, ಮುದ್ರಣ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT