ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ; ‘ಯಕ್ಷಗಾನ ಸೆನ್ಸಾರ್‌ ಮಂಡಳಿ ರಚನೆಯಾಗಲಿ’

ಮುನಿಯಾಲು: ಸಾಹಿತ್ಯ ಸಮ್ಮೇಳನ ಸಂಪನ್ನ, ಸಾಧಕರಿಗೆ ಸನ್ಮಾನ
Last Updated 1 ಫೆಬ್ರುವರಿ 2023, 4:55 IST
ಅಕ್ಷರ ಗಾತ್ರ

ಹೆಬ್ರಿ: ‘ಯಕ್ಷಗಾನಕ್ಕೆ ಸೆನ್ಸಾರ್‌ ಮಂಡಳಿ ರಚಿಸಿ ಈ ಕಲೆಗೆ ಹೊಸತನ ನೀಡಬೇಕು. ಆ ಮೂಲಕ ಪ್ರಸಂಗ ಸಾಹಿತ್ಯ, ಪ್ರಸಂಗಕರ್ತರು, ಹಾಸ್ಯನಟ, ನಟಿಯರನ್ನು ಗುರುತಿಸುವ ಕೆಲಸ ಆದಾಗ ಯಕ್ಷಗಾನ ಸಮಗ್ರ ಕರ್ನಾಟಕದ ಕಲೆಯಾಗಿ ಉಳಿಯುತ್ತದೆ. ಸರ್ಕಾರ ಮತ್ತು ಕನ್ನಡ–ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು’ ಎಂದು ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಹೇಳಿದರು.

ಅವರು ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮುನಿಯಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ. ಅಧಿಕಾರಿ ವೇದಿಕೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಆರೋಹಣ’ ನುಡಿಚೇತನದ ಸಮಾರೋಪದಲ್ಲಿ ಮಾತನಾಡಿದರು.

‘ನಮ್ಮ ಅಮ್ಮಂದಿರು ತಮ್ಮ ಮಕ್ಕಳ ಬಾಯಲ್ಲಿ ಮಮ್ಮಿ ಬದಲು ಅಮ್ಮ ಎಂದು ಹೇಳಿಸಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು’ ಎಂದು ಅವರು ಆಶಯ ವ್ಯಕ್ತಪಡಿಸಿದರು.

‘ನಮ್ಮ ಮಾತೃ ಭಾಷೆಯನ್ನು ನಾವೇ ಉಳಿಸಿ ಬೆಳೆಸಬೇಕು’ ಎಂದು ಸರ್ವಾಧ್ಯಕ್ಷ ಮುನಿಯಾಲು ಗಣೇಶ ಶೆಣೈ ಹೇಳಿದರು.

ಕನ್ನಡದಲ್ಲಿ ಜಾಗತಿಕ ಮಟ್ಟದ ಸಾಹಿತ್ಯ ಬಂದಿದೆ, ಆದರೆ ಪುಸ್ತಕೋಧ್ಯಮ ಬಡಕಲಾಗಿದೆ. ಸಾಹಿತಿಗಳು ಅವರ ಪುಸ್ತಕಗಳನ್ನು ಅವರೇ ಪ್ರಕಟಿಸುವುದು ಶೋಭೆಯಲ್ಲ, ವರ್ಷಕ್ಕೆ 3 ಸಾವಿರ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಆದರೆ ಸರ್ಕಾರಕ್ಕೆ ಗ್ರಂಥಾಲಯದ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತಿಲ್ಲ, ಕೆಲವು ವರ್ಷಗಳಿಂದ ಸರ್ಕಾರ ಸಗಟು ಖರೀದಿಯನ್ನು ಸರಿಯಾಗಿ ಮಾಡುತ್ತಿಲ್ಲ, ಪ್ರಜೆಗಳಿಂದ ಸರ್ಕಾರ ತೆರಿಗೆ ರೂಪದಲ್ಲಿ ಸಂಗ್ರಹಿಸುವ ₹200-₹300 ಕೋಟಿಯಷ್ಟು ಗ್ರಂಥಾಲಯ ತೆರಿಗೆಯನ್ನು ಗ್ರಂಥಾಲಯ ಇಲಾಖೆಗೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ‘ಕನ್ನಡ ಮಾಧ್ಯಮ ಶಾಲೆಗಳು ಬಲಗೊಳ್ಳಬೇಕು, ಬದುಕು ಕಟ್ಟುವ ಕನ್ನಡ ಭಾಷೆಯನ್ನು ನಾವೆಲ್ಲರೂ ಸೇರಿ ಕಟ್ಟಿ ಬೆಳೆಸಬೇಕಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಾದ ಗೋಪಾಲ ಶೆಟ್ಟಿ ಮಡಾಮಕ್ಕಿ, ಸುಂದರಿ ಮುಳ್ಳುಗುಡ್ಡೆ, ರಾಮಣ್ಣ ಪೂಜಾರಿ ನಾಡ್ಪಾಲು, ಗೋಪಾಲ ಕುಲಾಲ್‌ ಮುನಿಯಾಲು, ರಾಜೇಂದ್ರ ಕಿಣಿ ಬೆಳ್ವೆ, ನಿತ್ಯಾನಂದ ಶೆಟ್ಟಿ ಶಿವಪುರ, ಡಿ.ಜಿ. ರಾಘವೇಂದ್ರ ದೇವಾಡಿಗ ಚಾರ, ರಾಧಾಕೃಷ್ಣ ನಾಯ್ಕ್‌ ಬೇಳಂಜೆ, ಸುಧನ್ವ ಮುದ್ರಾಡಿ, ಸಮ್ಮೇಳನದ ಸರ್ವಾಧ್ಯಕ್ಷ ಮುನಿಯಾಲು ಗಣೇಶ ಶೆಣೈ, ಮಾವಿನಕಟ್ಟೆ ಶಂಕರ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ ಪೈ., ಕಾರ್ಯಾಧ್ಯಕ್ಷ ಗೋಪಿನಾಥ ಭಟ್‌, ಸಂಚಾಲಕಿ ಜ್ಯೋತಿ ಹರೀಶ್‌, ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ದಂಪತಿ, ಲಯನ್ಸ್‌ ಅಧ್ಯಕ್ಷ ಸೀತಾರಾಮ ಕಡಂಬ ಸಹಿತ ಸಮ್ಮೇಳನದ ಯಶಸ್ಸಿಗೆ ದುಡಿದ ಹಲವರನ್ನು ಗೌರವಿಸಲಾಯಿತು.

ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್‌, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್‌ ರಾವ್‌, ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಆಚಾರ್ಯ, ಹೆಬ್ರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್‌, ಮುನಿಯಾಲು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸೀತಾರಾಮ ಕಡಂಬ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ರವಿರಾಜ್‌ ಕುಂಬಾಶಿ, ಭುಜಂಗ ಶೆಟ್ಟಿ ಪಡುಕುಡೂರು, ಟಿ. ಮಂಜುನಾಥ್‌ ಕಾಡುಹೊಳೆ, ಹರೀಶ ಪೂಜಾರಿ, ಮಹೇಶ ನಾಯ್ಕ್‌, ಹರ್ಷ ಶೆಟ್ಟಿ ಹೆಬ್ರಿ, ಸಾಹಿತ್ಯ ಪರಿಷತ್‌ ಮತ್ತು ಸ್ವಾಗತ ಸಮಿತಿ ಪ್ರಮುಖರು ಇದ್ದರು.

ಜ್ಯೋತಿ ಹರೀಶ್‌ ಸ್ವಾಗತಿಸಿದರು. ಡಾ. ಪ್ರವೀಣ್‌ ಕುಮಾರ್‌ ವಂದಿಸಿದರು. ಪ್ರಕಾಶ ಪೂಜಾರಿ ಮಾತಿಬೆಟ್ಟು ಮತ್ತು ರಾಜೇಶ್‌ ಕುಡಿಬೈಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT