ಕೋಟ(ಬ್ರಹ್ಮಾವರ): ಯಕ್ಷಗಾನದ ಮೌಲ್ಯ ಹಾಗೂ ಅದರ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಂಘ–ಸಂಸ್ಥೆಗಳು ಮಾಡಬೇಕು ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ ಸಿ ಕುಂದರ್ ಹೇಳಿದರು.
ಕೋಟದ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಕೋಟ ರಸರಂಗದ ಆಶ್ರಯದಲ್ಲಿ ಯಕ್ಷಗಾನ ಪ್ರಸಂಗ ಅಧ್ಯಯನ ಕಮ್ಮಟದ ಸಮಾರೋಪ ಕಾರ್ಯಕ್ರಮಕ್ಕೆ ಚಂಡೆ ಬಾರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಯಕ್ಷಗಾನದ ಹಿನ್ನೆಲೆ ಇರುವ ಸುಧಾ ಮಣೂರರ ಕುಟುಂಬ ಅದನ್ನು ನಿರಂತರ ಉಳಿಸಬೇಕೆಂಬ ತುಡಿತದೊಂದಿಗೆ ಮುಂದಿನ ತಲೆಮಾರಿಗೆ ರಂಗವೇದಿಕೆಯನ್ನು ಬಳುವಳಿಯಾಗಿ ನೀಡುತ್ತಿದೆ. ಇದು ಸಾಗತಾರ್ಹ ಬೆಳವಣಿಗೆಯಾಗಿದೆ. ಇಂತಹ ಕಾರ್ಯ ಪ್ರತಿಯೊಂದು ಸಂಸ್ಥೆಯಿಂದ ಆಗಲಿ ಎಂದು ಆಶಿಸಿದರು.
ರಸರಂಗ ಕೋಟ ಅಧ್ಯಕ್ಷೆ ಸುಧಾ ಮಣೂರು ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಎ ಕುಂದರ್, ಸಾಂಸ್ಕೃತಿಕ ಚಿಂತಕ ಚಂದ್ರ ಆಚಾರ್, ಕೋಟ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಇದ್ದರು.
ವಸಂತಿ ಹಂದಟ್ಟು ನಿರೂಪಿಸಿ ವಂದಿಸಿದರು. ನಂತರ ರಸರಂಗ ಕೋಟದ ಸದಸ್ಯರಿಂದ ‘ಶ್ರೀರಾಮ ಕಾರುಣ್ಯ’ ಯಕ್ಷಗಾನ ಪ್ರದರ್ಶನಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.