ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿಗೆ ‘ಪತ್ರ ಅಭಿಯಾನ’

ಮತಹಾಕುವಂತೆ ಪೋಷಕರಿಗೆ ಪತ್ರ ಬರೆಯಲಿರುವ ಹಾಸ್ಟೆಲ್‌ ವಿದ್ಯಾರ್ಥಿಗಳು
Last Updated 19 ಮಾರ್ಚ್ 2019, 15:19 IST
ಅಕ್ಷರ ಗಾತ್ರ

ಉಡುಪಿ: ಚುನಾವಣೆಯ ದಿನ ಕಡ್ಡಾಯವಾಗಿ ಮತದಾನ ಮಾಡಲು ಫೋಷಕರಿಗೆ ಪತ್ರ ಬರೆಯುವಂತೆ ಸರ್ಕಾರದ ಅಧೀನದಲ್ಲಿರುವ ಜಿಲ್ಲೆಯ ಎಲ್ಲ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಪತ್ರಗಳನ್ನು ರವಾನಿಸಲಾಗಿದೆ.

ಮತದಾನದಿಂದ ಯಾರೂ ದೂರ ಉಳಿಯಬಾರದು, ಮತದಾನ ಪ್ರಮಾಣ ಹೆಚ್ಚಳವಾಗಬೇಕು ಎಂದು ಜಿಲ್ಲಾಸ್ವೀಪ್‌ ಸಮಿತಿ ಪತ್ರ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ.

ಈಗಾಗಲೇಜಿಲ್ಲೆಯ ಐಟಿಡಿಪಿ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಮತ್ತು ನಂತರದ ಹಾಸ್ಟೆಲ್‌ಗಳು ಹಾಗೂ ಆಶ್ರಮ ಶಾಲೆಗಳಿಗೆ ಅಗತ್ಯ ಪತ್ರಗಳನ್ನು ತಲುಪಿಸಲಾಗಿದ್ದು, ಪೋಷಕರಿಗೆ, ಬಂಧು ಬಳಗದವರಿಗೆ, ಆತ್ಮೀಯರಿಗೆ ಹಾಗೂ 18 ವರ್ಷ ಸ್ನೇಹಿತರಿಗೆ ಮತದಾನ ಮಾಡುವಂತೆ ಪ್ರೇರೇಪಿಸಿ ಪತ್ರ ಬರೆಯಲು ಸೂಚಿಸಲಾಗಿದೆ.

ವಿದ್ಯಾರ್ಥಿಗಳು ಪತ್ರದಲ್ಲಿ ಮತದಾನ ಪ್ರೇರೇಪಿಸುವ ಸಾಲುಗಳನ್ನು ಬರೆದು, ಮನೆಯ ವಿಳಾಸ ನಮೂದಿಸಿ ಹಾಸ್ಟೆಲ್‌ಗಳ ವಾರ್ಡನ್‌ಗೆ ಪತ್ರಗಳನ್ನು ತಲುಪಿಸಬೇಕು.ವಾರ್ಡನ್‍ಗಳು ಆ ಪತ್ರಗಳನ್ನು ಅಂಚೆ ಕಚೇರಿಗೆ ತಲುಪಿಸಬೇಕು ಎಂದು ಸ್ವೀಪ್‌ ಸಮಿತಿ ಸೂಚನೆ ನಿಡಿದೆ.

ಜಿಲ್ಲೆಯಲ್ಲಿರುವ 61 ಹಾಸ್ಟೆಲ್‌ಗಳಲ್ಲಿ 5,000 ವಿದ್ಯಾರ್ಥಿಗಳಿದ್ದು ಪ್ರತಿಯೊಬ್ಬರೂ ಪತ್ರ ಅಭಿಯಾನದಲ್ಲಿ ಭಾಗವಹಿಸಬೇಕು. ಕ್ಷೇಮ ಸಮಾಚಾರದ ಜತೆಗೆ ಕಡ್ಡಾಯವಾಗಿ ಮತದಾನ ಜಾಗೃತಿಯ ಸಾಲುಗಳನ್ನು ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗಿದೆ ಎಂದು ಸ್ವೀಪ್ ಸಮಿತಿ ತಿಳಿಸಿದೆ.

ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿರುವ (18 ತುಂಬಿದ) ವಿದ್ಯಾರ್ಥಿಗಳಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಮತಯಂತ್ರ, ವಿವಿ ಪ್ಯಾಟ್‌ಗಳ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ ಅಧಿಕಾರಿ ಹಾಕಪ್ಪ ಆರ್.ಲಮಾಣಿ.

ಎಲೆಕ್ಟ್ರಾನಿಕ್‌ ಯುಗದಲ್ಲಿ ಪತ್ರ ಬರೆಯುವ ಹವ್ಯಾಸ ಮರೆಯಾಗುತ್ತಿದೆ. ಪತ್ರದೊಳಗಿನ ಪ್ರೀತಿತುಂಬಿದ ಅಕ್ಷರಗಳಿಗೆ ಇರುವಷ್ಟು ಆತ್ಮೀಯತೆ ಎಲೆಕ್ಟ್ರಾನಿಕ್‌ ಮೇಲ್‌ಗಳಲ್ಲಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಪತ್ರ ಬರೆಯುವ ಹವ್ಯಾಸವನ್ನು ಉತ್ತೇಜಿಸಲು ಹಾಗೂ ಮತದಾನ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷೆಯೂ ಆಗಿರುವ ಸಿಂಧೂ ಬಿ.ರೂಪೇಶ್ ಅವರ ವಿನೂತನ ಕಾರ್ಯಕ್ರಮ ರೂಪಿಸಿದ್ದಾರೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT