ಶುಕ್ರವಾರ, ಫೆಬ್ರವರಿ 21, 2020
20 °C
ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌

ಓದುಗರ ಸೆಳೆಯಲು ಡಿಜಿಟಲ್‌ ಗ್ರಂಥಾಲಯಗಳು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಗ್ರಂಥಾಲಯಗಳು ಆಧುನಿಕ ಸೌಕರ್ಯಗಳನ್ನು ಒಳಗೊಂಡು ಓದುಗರ ಸ್ನೇಹಿಯಾಗಿಸಲು ಜಿಲ್ಲೆಯ ಎಲ್ಲ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸುವ ಚಿಂತನೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ಡಿಜಿಟಲ್ ಗ್ರಂಥಾಲಯ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

ಗ್ರಂಥಾಲಯ ಓದುಗರ ಸಂಖ್ಯೆ ಇಳಿಮುಖವಾಗುತ್ತಿರುವುದು ಕಳವಳಕಾರಿ ವಿಚಾರ. ಮಕ್ಕಳಿಗೆ ಬಾಲ್ಯದಲ್ಲಿಯೇ ಗ್ರಂಥಾಲಯಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳ ಕಥೆಗಳು, ಸ್ಪರ್ಧಾತ್ಮಕ ಪರೀಕ್ಷಾ ಮಾಹಿತಿ ಪುಸ್ತಕಗಳು ದೊರೆಯಬೇಕು ಎಂದರು.

ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ಅಗತ್ಯವಿದ್ದು, ಕಂಪ್ಯೂಟರ್, ಕಟ್ಟಡ ಸೇರಿದಂತೆ ಅಗತ್ಯ  ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಿಇಒ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಹೆಚ್ಚಿಸುವುದು ದೊಡ್ಡ ಸವಾಲು. ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್‍ಕೆಜಿ, ಯುಕೆಜಿ ತರಗತಿ ಆರಂಭಿಸಿರುವಂತೆ ಗ್ರಂಥಾಲಯ ಇಲಾಖೆ ಉಳಿವಿಗೆ ಕೆಲವು ಯೋಜನೆಗಳು ಜಾರಿಯಾಗಬೇಕು. ಗ್ರಂಥಾಲಯಗಳನ್ನು ಉಳಿಸಿ ಬೆಳೆಸಲ ಪಿಡಿಒಗಳ ಜೊತೆಗೆ ಚರ್ಚಿಸಲಾಗುವುದು ಎಂದರು.

ಬ್ಯಾಂಕಿಂಗ್, ಐಎಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಲಭ್ಯವಿದ್ದರೆ ಓದುಗರ ಸಂಖ್ಯೆ ಹೆಚ್ಚಾಗಲಿದೆ. ಹಿರಿಯ ನಾಗರಿಕರನ್ನು ಸೆಳೆಯಲು ಕೆಲವು ಪುಸ್ತಕಗಳು ಹಾಗೂ ಸೌಲಭ್ಯಗಳನ್ನು ಒದಗಿಸಬೇಕು. 

ಪುಸ್ತಕಗಳನ್ನು ಖರೀದಿಸಲು ಅನುದಾನದ ಕೊರತೆಯಿದ್ದರೆ, ದಾನಿಗಳ ನೆರವಿನ ಮೂಲಕ ಪುಸ್ತಕಗಳನ್ನು ಖರೀದಿಸಲು ಮೇಲ್ವಿಚಾರಕರು ಪ್ರಯತ್ನಿಸಬೇಕು. ಸ್ಥಳೀಯವಾಗಿ ಬೇಡಿಕೆ ಇರುವ ಪುಸ್ತಕಗಳನ್ನು ಹೆಚ್ಚಾಗಿ ಖರೀದಿಸಿ ಎಂದು ಶ್ರೀನಿವಾಸ ರಾವ್ ಕಿವಿಮಾತು ಹೇಳಿದರು.

ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಣಿಪಾಲ ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಡಾ.ಶಿವಾನಂದ ಭಟ್ ‘ಸಾರ್ವಜನಿಕ ಗ್ರಂಥಾಲಯ ಓದುಗರು ಮತ್ತು ಮಾಹಿತಿ ಆವಶ್ಯಕತೆಗಳು’ ಕುರಿತು ಮಾತನಾಡಿದರು.

ಪ್ರೊ.ಮಹಾಬಲೇಶ್ವರ ರಾವ್ ‘ಸ್ಮಾರ್ಟ್ ಲೈಬ್ರೇರಿ' ಕುರಿತು, ಕಾಪು ಕಾಲೇಜಿನ ಗ್ರಂಥಪಾಲಕ ರಾಜಶೇಖರ ಕಂಬಾರ ‘ಸಾರ್ವಜನಿಕ ಮಾಧ್ಯಮ ಪರಿಕರಗಳು ಮತ್ತು ಗ್ರಂಥಾಲಯದಲ್ಲಿ ಅದರ ಉಪಯೋಗಗಳು' ವಿಷಯದ ಬಗ್ಗೆ ಹಾಗೂ ಜಗತ್ ವೆಂಚರ್ಸ್ ಸಂಸ್ಥೆಯ ಕೀರ್ತಿ ಇ-ಗ್ರಂಥಾಲಯಗಳ ಕುರಿತು ಉಪನ್ಯಾಸ ನೀಡಿದರು.

ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಸಮಾಜ ವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್‌ ಡಾ.ರಾಬರ್ಟ್ ಕ್ಲೈವ್ ‘ಒತ್ತಡ ನಿರ್ವಹಣೆ’ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಐ. ನಳಿನಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಶಕುಂತಳಾ ಕುಂದರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು