ಗುರುವಾರ , ಆಗಸ್ಟ್ 11, 2022
26 °C
ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ನಿಧನ

ಪಂಥಾಹ್ವಾನದಂತೆ ಬದುಕಿ ತೋರಿಸಿದ ಸಾಹಸಿ ಉದ್ಯಾವರ ಮಾಧವ ಆಚಾರ್ಯ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಪ್ರಸಿದ್ಧಿ, ಕೀರ್ತಿ, ಪ್ರಚಾರವನ್ನು ಬದಿಗಿಟ್ಟು ನೋಡಿದರೂ ‘ದೊಡ್ಡ ಮನುಷ್ಯ’ ಎಂದು ಕರೆಯಬಹುದಾದಂತಹ ವ್ಯಕ್ತಿತ್ವ ಉದ್ಯಾವರ ಮಾಧವ ಆಚಾರ್ಯ ಅವರದ್ದು. ಅವರು ಬದುಕಿದ ರೀತಿಯೇ ಅದ್ಭುತ. ಮಾನವೀಯ ಸಂಪನ್ನತೆ, ಸೌಹಾರ್ದ, ಸ್ನೇಹಮಯ ನಡವಳಿಕೆ, ಯಾರನ್ನೂ ನೋಯಿಸದ ಮನೋಧರ್ಮ ಅವರನ್ನು ಬಹಳ ಎತ್ತರದ ಸ್ಥಾನದಲ್ಲಿ ನಿಲ್ಲಿಸಿತ್ತು’ ಎಂದು ಸ್ಮರಿಸಿದರು ಅವರ ಶಿಷ್ಯರಾದ ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿ ಅವರು.

ಯಕ್ಷಗಾನದಲ್ಲಿ ಬ್ಯಾಲೆಗಳನ್ನು ಪ್ರದರ್ಶಿಸುವ ಮೂಲಕ ಕರಾವಳಿಯಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿದ್ದ ಮಾಧವ ಆಚಾರ್ಯರದ್ದು ಸಾಹಸಮಯ ಬದುಕು. ‌ಇಳಿ ವಯಸ್ಸಿನಲ್ಲಿ ಆರೋಗ್ಯ ಹದಗೆಟ್ಟಾಗ ಅನಾರೋಗ್ಯವನ್ನು ಹೆದರಿಸಿದ ಪರಿಯೇ ಬೆರಗು ಮೂಡಿಸುವಂಥದ್ದು. ಒಂದು ರೀತಿಯಲ್ಲಿ ಜೀವನದುದ್ದಕ್ಕೂ ಪಂಥಾಹ್ವಾನದಂತೆ ಬದುಕಿದ್ದವರು ಅವರು ಎಂದು ಸ್ಮರಿಸಿದರು ಗುರುರಾಜ ಮಾರ್ಪಳ್ಳಿ.

ಬ್ರಹ್ಮ ಕಪಾಲ, ನಳ ದಮಯಂತಿ, ಶಬರಿ ಅವರ ಅದ್ಭುತ ಕೃತಿಗಳು. ‘ಅಂಧಯುಗ’ ಹಾಗೂ ‘ಸೂರ್ಯೋದಯದಿಂದ ಸೂರ್ಯಾಸ್ಥದವರೆಗೆ’ ನಾಟಕಗಳು ಅವರೊಬ್ಬ ಸಮರ್ಥ ರಂಗ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಿದರೆ, ಗಿರೀಶ್ ಕಾರ್ನಾಡರ ‘ತುಘಲಕ್‌’ ನಾಟಕದಲ್ಲಿ ಇತಿಹಾಸಕಾರನ ‘ಭರಣಿ’ಯ ಪಾತ್ರ ಅವರೊಳಗಿದ್ದ ಅದ್ಭುತ ನಟನನ್ನು ಪರಿಚಯಿಸುತ್ತದೆ.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನೆನಪಿಡುವಂತಹ ಬಹಳಷ್ಟು ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅಂದು ಪಿಪಿಸಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರ ಆಪ್ತ ಸಾಹಿತ್ಯ ಬಳಗದಲ್ಲಿ ಮಾಧವ ಆಚಾರ್ಯರು ಗುರುತಿಸಿಕೊಂಡಿದ್ದರು. ಜೀವನದ ಕೊನೆಯ ಘಟ್ಟದಲ್ಲಿ ಮಾತ್ರ ಅವರ ನಿಲುವುಗಳು ಬದಲಾದವು. ಆಚಾರ್ಯರ ಕೃತಿಗಳಲ್ಲಿ ಭಕ್ತಿ ಪ್ರಧಾನ್ಯತೆ ಎದ್ದು ಕಾಣುತ್ತಿತ್ತು ಎಂದು ನೆನಪಿಸಿಕೊಂಡರು.

‘ನನ್ನ ಪ್ರಥಮ ಹಾಗೂ ಎರಡನೇ ಕವನ ಸಂಕಲನಗಳು ಮಾಧವ ಆಚಾರ್ಯರ ವ್ಯಾಸಮುದ್ರಣ ಸಂಸ್ಥೆಯ ಮೂಲಕ ಪ್ರಕಟವಾಗಿದ್ದವು. ಅವರ ಬ್ಯಾಲೆಗಳಿಗೆ ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶಕನಾದೆ ಎಂಬ ಹೆಮ್ಮೆ ಇದೆ. ಬದುಕಿನ ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತಿದ್ದ ಅವರದ್ದು ಮಾನವೀಯ ಸ್ಪರ್ಶವಿದ್ದ ಗುಣವಾಗಿತ್ತು. ಬದುಕನ್ನು ಸ್ವೀಕರಿಸುವುದು ಹೇಗೆ, ಕಷ್ಟಗಳನ್ನು ಹೆದರಿಸುವುದು ಹೇಗೆ, ಗೆಲುವಿನ ಅರ್ಥ ಏನು ಎಂಬುದನ್ನು ತಿಳಿಸಿಕೊಟ್ಟವರು ಮಾಧವ ಆಚಾರ್ಯರು’ ಎಂದು ಸ್ಮರಿಸಿದರು ಗುರುರಾಜ ಮಾರ್ಪಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು