ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರೇ ರಚಿಸಿದ ಶ್ರೇಷ್ಠ ಗ್ರಂಥ ಮಹಾಭಾರತ

ಲಕ್ಷಾಲಂಕಾರ, ತಾತ್ಪರ್ಯಗಳನ್ನು ಒಳಗೊಂಡ ಗ್ರಂಥ: ಪಲಿಮಾರು ವಿದ್ಯಾಧೀಶ ಸ್ವಾಮೀಜಿ
Last Updated 8 ನವೆಂಬರ್ 2019, 10:05 IST
ಅಕ್ಷರ ಗಾತ್ರ

ಉಡುಪಿ: ದಕ್ಷಿಣ ಭಾರತದಲ್ಲಿ ಯಾರ ಆಕ್ರಮಣಕ್ಕೂ ತುತ್ತಾಗದೆ ಮಠಗಳಲ್ಲಿ ರಕ್ಷಿಸಲ್ಪಟ್ಟ ತಾಳೆಪತ್ರಗಳು ಇಂದು ಸಂಪೂರ್ಣ ಮಹಾಭಾರತದಂತಹ ಶ್ರೇಷ್ಠ ಗ್ರಂಥ ರಚನೆಗೆ ಕಾರಣವಾಗಿವೆ ಎಂದುಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಹೇಳಿದರು.

ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ತತ್ವ ಸಂಶೋಧನಾ ಸಂಸತ್ ನೇತೃತ್ವದಲ್ಲಿ ನಿನ್ನಾ ಒಲುಮೆಯಿಂದ ಪ್ರತಿಷ್ಠಾನ ಆಯೋಜಿಸಿದ್ದ ಸಮಗ್ರ ಮಹಾಭಾರತ ಸಮರ್ಪಣೋತ್ಸವ ಮತ್ತು ಶ್ರೀವ್ಯಾಸ-ದಾಸ ವಿಜಯ ಉತ್ಸವದಲ್ಲಿ ಅವರು ಮಾತನಾಡಿದರು.

ಮೊಘಲರ ದಾಳಿಯಿಂದ ಉತ್ತರ ಭಾರತದ ಸಂಸ್ಕೃತಿ, ಪ್ರಾಚೀನ ತಾಳೆಗರಿಗಳು ನಾಶವಾದವು. ಆದರೆ, ದಕ್ಷಿಣ ಭಾರತ ಬಾಹ್ಯ ಆಕ್ರಮಣಕ್ಕೆ ಹೆಚ್ಚು ತುತ್ತಾಗಲಿಲ್ಲ. ಪರಿಣಾಮ ಮಠಗಳಲ್ಲಿ ತಾಳೆಗರಿಗಳು ಸಂರಕ್ಷಿಸಲ್ಪಟ್ಟವು. ಅವುಗಳನ್ನೆಲ್ಲ ಅಧ್ಯಯನ ಮಾಡಿದ 40 ವಿದ್ವಾಂಸರ ತಂಡ ಸಂಪೂರ್ಣ ಮಹಾಭಾರತ ಗ್ರಂಥ ರಚನೆಮಾಡಿದೆ ಎಂದರು.

ಕ್ರಿಶ್ಚಿಯನ್ನರಿಗೆ, ಮುಸ್ಲಿಮರಿಗೆ ಪ್ರತ್ಯೇಕ ಧರ್ಮ ಗ್ರಂಥಗಳಿದ್ದಂತೆ, ಹಿಂದೂಗಳಿಗೆ ಮಹಾಭಾರತ ಶ್ರೇಷ್ಠ ಗ್ರಂಥ. ಬೈಬಲ್‌, ಖುರಾನ್‌ ಗ್ರಂಥಗಳನ್ನು ದೇವರ ಧೂತರು ರಚಿಸಿದರೆ, ಮಹಾಭಾರತವನ್ನು ಸ್ವತಃ ದೇವರೇ ರಚನೆ ಮಾಡಿರುವುದು ವಿಶೇಷ ಎಂದು ಪಲಿಮಾರು ಶ್ರೀಗಳು ಹೇಳಿದರು.

ದೇವರೇ ರಚಿಸಿದ ಮಹಾಭಾರತ ಗ್ರಂಥ ಮಧ್ವಾಚಾರ್ಯರು, ವಾದಿರಾಜರ ವ್ಯಾಖ್ಯಾನದಿಂದು ಮತ್ತಷ್ಟು ಶ್ರೇಷ್ಠವಾಯಿತು. 61 ಸಂಪುಟಗಳಲ್ಲಿ ರಚಿತವಾಗಿರುವ ಮಹಾಭಾರತ ಗ್ರಂಥವು ವಾದಿರಾಜರ ಲಕ್ಷಾಲಂಕಾರ, ವೇದವಾಸ್ಯರ ಮಹಾಭಾರತ ಹಾಗೂ ಆಚಾರ್ಯರ ತಾತ್ಪರ್ಯ ನಿರ್ಣಯಗಳನ್ನು ಒಳಗೊಂಡಿದೆ. ಅಧ್ಯಯನಕ್ಕೆ ಇದು ಶ್ರೇಷ್ಠವಾದ ಗ್ರಂಥ ಎಂದರು.

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಮಾತಣಾಡಿ,ಕೃಷ್ಣನ ಆರಾಧಕರಾದ ಪಲಿಮಾರು ಶ್ರೀಗಳು ನಿರಂತರ ಸಂಕೀರ್ತನೆ, ಲಕ್ಷ ತುಳಸಿ ಅರ್ಚನೆ, ಸುವರ್ಣ ಗೋಪುರ ಹಾಗೂ ಸಂಪೂರ್ಣ ಮಹಾಭಾರತ ಗ್ರಂಥವನ್ನು ಸಮರ್ಪಣೆ ಮಾಡುವ ಮೂಲಕ ಸರ್ವೋತ್ತಮ ಯತಿಗಳಾಗಿದ್ದಾರೆ ಎಂದು ಶ್ಲಾಘಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಪೂರ್ಣ ಮಹಾಭಾರತ ಗ್ರಂಥವನ್ನು ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರು, ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ವಿದ್ಯಾವಲ್ಲಭತೀರ್ಥರು, ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನತೀರ್ಥರು, ಸೋದೆ ವಿಶ್ವವಲ್ಲಭತೀರ್ಥರು, ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥರು, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರತೀರ್ಥರು, ಪ್ರಯಾಗ ಮಠದ ವಿದ್ಯಾತ್ಮತೀರ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT