ಶನಿವಾರ, ಡಿಸೆಂಬರ್ 7, 2019
22 °C
ಮಾರುಕಟ್ಟೆಯಲ್ಲಿ ದರ ಇಳಿಕೆ: ಜಾಜಿಗೂ ಕುಸಿದ ಬೇಡಿಕೆ

ಉಡುಪಿ | ಪಿತೃಪಕ್ಷದ ಬಿಸಿ: ಬಾಡಿದ ಶಂಕರಪುರ ಮಲ್ಲಿಗೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಾರದ ಹಿಂದೆ ಗಗನಕ್ಕೇರಿದ್ದ ಶಂಕರಪುರ ಮಲ್ಲಿಗೆಯ ದರ ದಿಢೀರ್ ಕುಸಿತ ಕಂಡಿದೆ. ಪಿತೃಪಕ್ಷದ ಪರಿಣಾಮ ಮಾರುಕಟ್ಟೆಯಲ್ಲಿ ಮಲ್ಲಿಗೆಗೆ ಬೇಡಿಕೆ ಇಲ್ಲದಂತಾಗಿದೆ. ಸೆ.12ರಂದು ಅಟ್ಟೆಗೆ ಗರಿಷ್ಠ ₹ 1,250 ಇದ್ದ ದರ ಶುಕ್ರವಾರ ₹ 170ಕ್ಕೆ ಇಳಿದಿದೆ.

ಪಿತೃಪಕ್ಷದ ಎಫೆಕ್ಟ್‌:

ಸೆ.14ರಿಂದ 28ರವರೆಗೂ ಪಿತೃಪಕ್ಷದ ಅವಧಿ ಇರುವುದರಿಂದ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ, ಶಂಕರಪುರ ಮಲ್ಲಿಗೆಗೆ ಬೇಡಿಕೆ ಕಡಿಮೆ. ವಾರದ ಅವಧಿಯಲ್ಲಿ ಗರಿಷ್ಠ ಹಾಗೂ ಕನಿಷ್ಠ ದರಗಳು ದಾಖಲಾಗಿದೆ ಎನ್ನುತ್ತಾರೆ ಸರ್ವೀಸ್‌ ಬಸ್‌ ನಿಲ್ದಾಣದ ಬಳಿಯಿರುವ ಆದಿಶಕ್ತಿ ಫ್ಲವರ್‌ ಮಾರ್ಟ್‌ನ ಹೂ ವ್ಯಾಪಾರಿ ಅಶ್ರಫ್‌.

ವಾತಾವರಣ ಪುಷ್ಪಕೃಷಿಗೆ ಅನುಕೂಲವಾಗಿರುವುದರಿಂದ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಬೇಡಿಕೆ ಇಲ್ಲವಾಗಿರುವುದರಿಂದ ದಿನೇ ದಿನೇ ಬೆಲೆ ಕುಸಿಯುತ್ತಲೇ ಇದೆ. ಒಂದು ವಾರದಲ್ಲಿ ₹ 1,080 ಇಳಿಕೆಯಾಗಿದೆ. ಮಹಾಲಯ ಅಮಾವಾಸ್ಯೆಯವರೆಗೂ ದರ ಕುಸಿತ ಇರುತ್ತದೆ ಎಂದರು.

ಸದ್ಯ ಸಭೆ, ಸಮಾರಂಭ ಹಾಗೂ ನಿತ್ಯ ದೇವರ ಪೂಜೆಗೆ ಮಾತ್ರ ಹೂ ಖರೀದಿ ನಡೆಯುತ್ತಿದೆ. ಮಹಿಳೆಯರು ಮುಡಿಯಲು ಒಂದಷ್ಟು ಖರ್ಚಾಗುತ್ತಿದೆ. ಒಟ್ಟಾರೆ ಮಾರಾಟ ಶೇ 80ರಷ್ಟು ಕುಸಿದಿದೆ. ನವರಾತ್ರಿವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಅಶ್ರಫ್‌ ಮಾಹಿತಿ ನೀಡಿದರು. 

ರಫ್ತು ಕುಸಿತ:

ಮುಂಬೈ, ದೆಹಲಿ ಹಾಗೂ ದುಬೈ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಕರಾವಳಿಗರು ಶಂಕರಪುರ ಮಲ್ಲಿಗೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ, ಉಡುಪಿ ಮಲ್ಲಿಗೆಯ ಘಮಲು ದೇಶದ ಗಡಿದಾಟಿ ಹರಡಿದೆ. ಅಲ್ಲಿನ ಶುಭ ಸಮಾರಂಭಗಳಿಗೆ ಇಲ್ಲಿಂದಲೇ ಪ್ರತಿದಿನ ವಿಮಾನದಲ್ಲಿ ಮಲ್ಲಿಗೆ ರಫ್ತಾಗುತ್ತದೆ. ಆದರೆ, ಅಲ್ಲಿಂದಲೂ ಬೇಡಿಕೆ ಕುಸಿದಿರುವುದರಿಂದ ರಫ್ತು ಪ್ರಮಾಣ ಇಳಿಮುಖವಾಗಿದೆ.

ಸುವಾಸನೆಯ ಕಾರಣಕ್ಕೆ ಶಂಕರಪುರ ಮಲ್ಲಿಗೆಗೆ ಬೇಡಿಕೆ ಹೆಚ್ಚು. ಸುಗಂಧ ದ್ರವ್ಯಗಳ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಮಲ್ಲಿಗೆ ಬಳಕೆಯಾದರೆ ಮಾರುಕಟ್ಟೆಯಲ್ಲಿ ದರ ಸ್ಥಿರತೆ ಕಾಣಬಹುದು. ಬೆಳೆಗಾರರೂ ಲಾಭ ಕಾಣಬಹುದು ಎನ್ನುತ್ತಾರೆ ಬೆಳೆಗಾರರು.

ನವರಾತ್ರಿಗೆ ಏರಲಿದೆ ದರ:

ಮಹಾಲಯ ಅಮಾವಾಸ್ಯೆ ಬಳಿಕ ನವರಾತ್ರಿ ಆರಂಭವಾಗುತ್ತದೆ. ಸಾಲು ಸಾಲು ಹಬ್ಬಗಳು ಬರುವುದರಿಂದ ಮಲ್ಲಿಗೆಯ ದರ ಮತ್ತೆ ಗಗನಕ್ಕೇರಲಿದೆ ಎಂಬುದು ವ್ಯಾಪಾರಿಗಳ ಅನುಭವದ ನುಡಿ.

ಉತ್ತಮ ಇಳುವರಿ:

ಶಂಕರಪುರ ಮಲ್ಲಿಗೆಯ ದರ ಬೇಡಿಕೆಯ ಜತೆಗೆ ಹವಾಮಾನದ ಮೇಲೆ ನಿರ್ಧರಿತವಾಗುತ್ತದೆ. ಬಿಸಿಲು ಹಾಗೂ ಮಳೆ ಒಟ್ಟಾಗಿ ಬೀಳುತ್ತಿದ್ದರೆ ಮಲ್ಲಿಗೆಯ ಇಳುವರಿ ಹೆಚ್ಚಾಗುತ್ತದೆ. ಸದ್ಯ ವಾತಾವರಣ ಪೂರಕವಾಗಿರುವುದರಿಂದ ಇಳುವರಿ ಹೆಚ್ಚಾಗಿದೆ. ಆದರೆ, ಬೆಲೆ ಕುಸಿತವಾಗಿದೆ ಎನ್ನುತ್ತಾರೆ ಬೆಳೆಗಾರ ರಾಘವೇಂದ್ರ ನಾಯಕ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು