ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬೀಚ್‌ಗೆ ಪ್ರವೇಶ ನಿರ್ಬಂಧ: ನೆಟ್‌ ಅಳವಡಿಕೆ

ಕಡಲಿಗಿಳಿದರೆ ₹ 500 ದಂಡ; ಮಲ್ಪೆ ಬೀಚ್‌ ನಿರ್ವಹಣಾ ಸಮಿತಿ
Last Updated 8 ಜೂನ್ 2022, 13:34 IST
ಅಕ್ಷರ ಗಾತ್ರ

ಉಡುಪಿ: ಕಡಲು ಪ್ರಕ್ಷುಬ್ಧಗೊಂಡಿರುವ ಕಾರಣ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮಲ್ಪೆ ಬೀಚ್‌ಗೆ ಇಳಿಯುವುದಕ್ಕೆ ನಿರ್ಬಂಧ ಹಾಕಲಾಗಿದೆ ಎಂದು ಮಲ್ಪೆ ಬೀಚ್ ನಿರ್ವಹಣಾ ಸಮಿತಿ ತಿಳಿಸಿದೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಹೆಚ್ಚಾಗಿ ಇಳಿಯುವ 1 ಕಿ.ಮೀ ಉದ್ದಕ್ಕೆ 6 ಅಡಿ ಎತ್ತರದ ಸುರಕ್ಷತಾ ನೆಟ್‌ ಹಾಕಲಾಗಿದೆ. ಜತೆಗೆ, ಅಲ್ಲಲ್ಲಿ ಅಪಾಯಕಾರಿ ಮುನ್ನೆಚ್ಚರಿಕೆ ಸಂದೇಶ ರವಾನಿಸುವ ಕೆಂಪು ಧ್ವಜಗಳನ್ನು ಹಾಕಲಾಗಿದೆ. ಪ್ರವಾಸಿಗರು ನಿಯಮಗಳನ್ನು ಪಾಲಿಸಬೇಕು ಎಂದು ಸಮಿತಿ ಮನವಿ ಮಾಡಿದೆ.

ಮಳೆಗಾಲದಲ್ಲಿ ಅಲೆಗಳ ಅಬ್ಬರ ಹಾಗೂ ನೀರಿನ ಸೆಳೆತ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಸಮುದ್ರಕ್ಕಿಳಿದರೆ ಪ್ರಾಣಕ್ಕೆ ಕುತ್ತು ಬರುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಬೀಚ್‌ಗಿಳಿಯಲು ನಿರ್ಬಂಧ ಹಾಕಲಾಗಿದೆ. ಪ್ರವಾಸಿಗರು ಕಡಲಿಗಿಳಿಯದಂತೆ ಧ್ವನಿವರ್ಧಕಗಳ ಮೂಲಕವೂ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ. ಸಿಬ್ಬಂದಿ ಗಸ್ತು ವ್ಯವಸ್ಥೆ ಮಾಡಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿ ನೆಟ್‌ ದಾಟಿ ಬೀಚ್‌ಗೆ ಇಳಿದವರಿಗೆ ₹ 500 ದಂಡ ವಿಧಿಸಲಾಗುವುದು. ಕಡಲು ಸಾಮಾನ್ಯಸ್ಥಿತಿಗೆ ಬಂದ ಬಳಿಕ ನೆಟ್‌ ಹಾಗೂ ಕೆಂಪು ಧ್ವಜಗಳನ್ನು ತೆರವುಗೊಳಿಸಿ, ಹಳದಿ ಧ್ವಜಗಳನ್ನು ಹಾಕಲಾಗುವುದು. ಅಲ್ಲಿಯವರೆಗೂ ಪ್ರವಾಸಿಗರು ನೀರಿಗಿಳಿಯುವಂತಿಲ್ಲ ಎಂದು ಬೀಚ್‌ ನಿರ್ವಹಣಾ ಸಮಿತಿಯ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಂಡು ಅಲೆಗಳ ಅಬ್ಬರ ಹಾಗೂ ಸೆಳೆತ ಹೆಚ್ಚಾಗಿರುತ್ತದೆ. ಇದರ ಅರಿವಿರದ ಹೊರ ಜಿಲ್ಲೆಗಳ ಪ್ರವಾಸಿಗರು ಮೋಜು ಮಾಡುತ ಮೈರೆತು ಅಲೆಗಳ ಸೆಳೆತಕ್ಕೆ ಸಿಲುಕಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಕಳೆದ ವಾರ ನೀರಿನಲ್ಲಿ ಮುಳುಗುತ್ತಿದ್ದ 6 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎನ್ನುತ್ತಾರೆ ಸಿಬ್ಬಂದಿ.

ಸದ್ಯ ಸೇಂಟ್‌ ಮೇರಿಸ್ ಐಲ್ಯಾಂಡ್ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ವಾಟರ್ ಸ್ಪೋರ್ಟ್ಸ್‌ ಸೇರಿದಂತೆ ಮೋಜಿನ ಕ್ರೀಡೆಗಳನ್ನು ನಿಲ್ಲಿಸಲಾಗಿದೆ. ಪ್ರವಾಸಿಗರು ನೆಟ್‌ನಿಂದ ಹೊರಗೆ ನಿಂತು ಕಡಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯಾಸ್ತವನ್ನು ಸವಿಯಬಹುದು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT