ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಚ್ ಉತ್ಸವಕ್ಕೆ ಸಿಂಗಾರಗೊಂಡಿದೆ ಮಲ್ಪೆ

ಇಂದಿನಿಂದ ಮೂರು ದಿನ ಉತ್ಸವ; ಪ್ರತಿದಿನ ಸಂಗೀರ ರಸಸಂಜೆ
Last Updated 19 ಜನವರಿ 2023, 19:30 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡು 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾ ರಜತ ಉತ್ಸವದ ಭಾಗವಾಗಿ ಜ.20ರಿಂದ 22ರವರೆಗೆ ಮಲ್ಪೆ ಬೀಚ್‌ ಉತ್ಸವ ಆಯೋಜಿಸಲಾಗಿದೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯು ಸಂಘ ಸಂಸ್ಥೆಗಳ ಜತೆಗೂಡಿ ಅದ್ಧೂರಿಯಾಗಿ ಬೀಚ್‌ ಉತ್ಸವವನ್ನು ಆಚರಿಸಲು ತಯಾರಿ ನಡೆಸಿದೆ. ಶುಕ್ರವಾರ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಮೂರು ದಿನ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಮೇಳೈಸಲಿವೆ.

ರಜತ ಉತ್ಸವವನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ಹಾಗೂ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಮಲ್ಪೆ ಬೀಚ್‌ ಉತ್ಸವದಲ್ಲಿ ಕರಾವಳಿಗರಿಗೆ ಹಾಗೂ ಪ್ರವಾಸಿಗರಿಗೆ ಹೊಸ ಅನುಭವಗಳು ಸಿಗಲಿವೆ.

ಬೀಚ್‌ ಉತ್ಸವದ ವಿಶೇಷ:

ಜ.20 ರಿಂದ 21ರವರೆಗೆ ಗಾಳಿಪಟ ಉತ್ಸವ, ಆರ್ಟ್ ಕ್ಯಾಂಪ್, ಫೋಟೊಗಳ ಪ್ರದರ್ಶನ, ಫುಡ್ ಫೆಸ್ಟಿವಲ್ ಪ್ರಮುಖ ಆಕರ್ಷಣೆಯಾಗಿರಲಿದೆ. 21 ಮತ್ತು 22 ರಂದು ಈಜು ಸ್ಪರ್ಧೆ, ಪುರುಷರ ಕಬಡ್ಡಿ ಸ್ಪರ್ಧೆಗಳು ನಡೆಯಲಿವೆ.

ಜ.22ರಂದು ಶ್ವಾನ ಪ್ರದರ್ಶನ ನಡೆಯಲಿದ್ದು ಆಕರ್ಷಕ ಶ್ವಾನಗಳು ಭಾಗವಹಿಸಲಿವೆ. ಮಹಿಳೆಯರಿಗಾಗಿ ಚಿತ್ರಕಲೆ, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ.

ಸಂಗೀತ ರಸ ಸಂಜೆ:

ಉತ್ಸವ ನಡೆಯುವ ಮೂರು ದಿನ ಸಂಜೆ 6 ಗಂಟೆಗೆ ಸಂಗೀತ ರಸಸಂಜೆ ನಡೆಯಲಿದೆ. ಮೊದಲ ದಿನ ಜ.20ರಂದು ರಾಜೇಶ್ ಕೃಷ್ಣನ್‌ ಹಾಗೂ ಚಂದನ್‌ ಶೆಟ್ಟಿ ತಂಡ ಎಲ್ಲರನ್ನು ರಂಜಿಸಲಿದೆ.

ಎರಡನೇ ದಿನ 21ರಂದು ಬಾಲಿವುಡ್‌ನ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ತಂಡದಿಂದ ಸಂಗೀತ ರಸದೌತಣ ಇರಲಿದೆ. 22ರಂದು ರಘು ದೀಕ್ಷಿತ್‌ ಕಂಚಿನ ಕಂಠದಿಂದ ಎಲ್ಲರನ್ನೂ ಮೋಡಿ ಮಾಡಲಿದ್ದಾರೆ. ಸಿನಿಮಾ ಹಾಗೂ ಜನಪದ ಗೀತೆಗಳು ಸಂಗೀತಾಸಕ್ತರ ಮನ ತಣಿಸಲಿವೆ.

ಹೊಸದಾಗಿ ವಾಟರ್‌ ಸ್ಫೋರ್ಟ್ಸ್‌ಗಳನ್ನು ಪರಿಚಯಿಸಲಾಗಿದ್ದು ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ಫ್ಲೈಬೋರ್ಡ್‌ನಲ್ಲಿ ಮೇಲೆರುವ ಅನುಭವ ಪಡೆಯಬಹುದು. ಮೈರೋಮಾಂಚನಗೊಳಿಸುವ ಮೋಟರೈಸಡ್‌ ವಾಟರ್‌ ಸ್ಪೋರ್ಟ್ಸ್‌ಗಳು, ನಾನ್ ಮೊಟರೈಸಡ್‌ ಹಾಗೂ ಅಂಡರ್ ವಾಟರ್ ಸ್ಪೋರ್ಟ್‌ಗಳು ಉತ್ಸವದ ಪ್ರಮುಖ ಆಕರ್ಷಣೆ.

ಜೆಟ್‌ ಸ್ಕೀಯಲ್ಲಿ ಸಮುದ್ರವನ್ನು ಸೀಳಿಕೊಂಡು ಸಾಗುವ ಹಾಗೂ ಕ್ಲಿಫ್‌ ಡೈವ್‌ನಲ್ಲಿ ಉಸಿರು ಬಿಗಿಹಿಡಿದು ಎತ್ತರದಿಂದ ಸಮುದ್ರಕ್ಕೆ ಜಿಗಿಯುವ, ಸ್ಕೂಬಾ ಡೈವಿಂಗ್‌ನಲ್ಲಿ ಸಮುದ್ರದಾಳದ ಜೀವವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಇದಲ್ಲದೆ ಸರ್ಫಿಂಗ್‌, ಕಯಾಕಿಂಗ್‌, ಪ್ಯಾರಾ ಸೇಲಿಂಗ್‌, ರೈಡಿಂಗ್‌ ಸೇರಿದಂತೆ ಹಲವು ಮೋಜಿನಾಟಗಳು ಇವೆ.

ಉತ್ಸವಕ್ಕೆ ಮಲ್ಪೆ ಬೀಚ್‌ ಕಿನಾರೆಯಲ್ಲಿ ವಿಶಾಲವಾದ ವೇದಿಕೆ ನಿರ್ಮಾಣವಾಗಿದ್ದು ಸಾವಿರಾರು ಮಂದಿ ಕೂರಲು ಆಸನದ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕುಡಿಯುವ ನೀರು ಹಾಗೂ ಶೌಚಾಲಯಗಳ ಸೌಲಭ್ಯ ಕಲ್ಪಿಸಲಾಗಿದೆ. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT