ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ ಮ್ಯಾರಥಾನ್‌ 12ರಂದು

10,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ, 42 ಕಿ.ಮೀ ಹಾಗೂ 21 ಕಿ.ಮೀ ಓಟ
Last Updated 7 ಫೆಬ್ರುವರಿ 2023, 13:50 IST
ಅಕ್ಷರ ಗಾತ್ರ

ಉಡುಪಿ: ಮಾಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್‌ ಅಸೋಸಿಯೇಷನ್ ಹಾಗೂ ಎನ್‌ಇಬಿ ಸ್ಪೋರ್ಟ್ಸ್‌ ಬೆಂಗಳೂರು ಸಹಯೋಗದಲ್ಲಿ ಫೆ.12ರಂದು 5ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ ನಡೆಯಲಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅರ್ಲಿ ಡಿಟೆಕ್ಷನ್ ಸೇವ್ಸ್‌ ಲೈವ್ಸ್‌–ಐ ಕ್ಯಾನ್ ಸರ್ವೈವ್‌’ ಘೋಷ ವ್ಯಾಕ್ತದೊಂದಿಗೆ ಆರೋಗ್ಯ, ಸಾಮರಸ್ಯ ಹಾಗೂ ಸಮುದಾಯದ ಶಕ್ತಿಯ ಸಂಕೇತವಾಗಿ ಈ ವರ್ಷದ ಮ್ಯಾರಥಾನ್ ಆಯೋಜಿಸಲಾಗಿದೆ. ವಿದ್ಯಾರ್ಥಿ ಸಂಘಟಿತ ಬಹುದೊಡ್ಡ ಮ್ಯಾರಥಾನ್ ಇದಾಗಿದ್ದು ದೇಶ ವಿದೇಶಗಳಿಂದ 10000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

42 ಕಿ.ಮೀ ಪೂರ್ಣ ಮ್ಯಾರಥಾನ್‌, 21 ಕಿ.ಮೀ ಹಾಫ್‌ ಮ್ಯಾರಥಾನ್, 10 ಕಿ.ಮೀ, 5 ಕಿ.ಮೀ ಓಟ, 3 ಕಿ.ಮೀ ರೋಟರಿ ಮನೋರಂಜನಾ ಓಟ ಸೇರಿ ಐದು ವಿಭಾಗಗಳಲ್ಲಿ ಮ್ಯಾರಥಾನ್ ನಡೆಯುತ್ತಿದೆ. ಮಾದಕ ವ್ಯಸನ ವಿರುದ್ಧ ಅರಿವು ಮೂಡಿಸಲು ಪೊಲೀಸರು ಜಾಗೃತಿಯ ಓಟದಲ್ಲಿ ಭಾಗವಹಿಸಲಿದ್ದಾರೆ.

ಜಿಲ್ಲೆಯ ಕ್ರೀಡಾಪಟುಗಳನ್ನು ಉತ್ತೇಜಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗಗಳಲ್ಲಿ 3 ಕಿ.ಮೀ ಓಟ ಆಯೋಜಿಸಲಾಗಿದೆ.

12ರಂದು ಬೆಳಿಗ್ಗೆ 5ಕ್ಕೆ ಮಾಹೆ ಆಡಳಿತ ಕಟ್ಟಡದ ಮುಂಭಾಗ ಮ್ಯಾರಥಾನ್‌ಗೆ ಚಾಲನೆ ನೀಡಲಾಗುವುದು. ಫುಲ್ ಮ್ಯಾರಥಾನ್ ವಿಜೇತರಿಗೆ ಪ್ರಥಮ ಬಹುಮಾನವಾಗಿ ₹50,000, ದ್ವಿತೀಯ ₹30,000 ಹಾಗೂ ತೃತೀಯ ಬಹುಮಾನವಾಗಿ ₹20000 ನಗದು ನೀಡಲಾಗುವುದು.

ಹಾಫ್ ಮ್ಯಾರಥಾನ್ ವಿಜೇತರಿಗೆ ಪ್ರಥಮ ₹30,000, ದ್ವಿತೀಯ ₹20,000 ಹಾಗೂ ತೃತೀಯ ₹10000 ನಗದು ಪುರಸ್ಕಾರ ನೀಡಲಾಗುವುದು. ಅಂತರ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ ಹಾಗೂ ಅಂತರ ರಾಷ್ಟ್ರೀಯ ಮ್ಯಾರಥಾನ್ ಅಸೋಸಿಯೇಷನ್ (ಎಎಂಐಎಸ್‌) ಸಹಕಾರ ನೀಡಿದೆ.

ಮಕ್ಕಳ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವುದು ಮ್ಯಾರಥಾನ್‌ನ ಉದ್ದೇಶವಾಗಿದ್ದು, ಬಡ ರೋಗಿಗಳ ವೈದ್ಯಕೀಯ ವೆಚ್ಚ ಭರಿಸಲು ಧನ ಸಂಗ್ರಹ ಮಾಡಲಾಗುವುದು. ಮ್ಯಾರಥಾನ್‌ನಲ್ಲಿ ಉಳಿಯುವ ಹಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ನಿಧಿಗೆ ನೀಡಲಾಗುವುದು ಎಂದು ಡಾ.ಎಚ್‌.ಎಸ್‌.ಬಲ್ಲಾಳ್ ತಿಳಿಸಿದರು.

ಐಸಿಐಸಿಐ ಬ್ಯಾಂಕ್‌ ಮ್ಯಾರಥಾನ್ ಪ್ರಾಯೋಜಕತ್ವ ವಹಿಸಿದ್ದು, ರೋಟರಿ ಕ್ಲಬ್‌, ವಿಎನ್‌, ಎವನ್‌ಆರ್‌ಸಿ ಸಹಕಾರ ನೀಡಿವೆ. ಹೆಚ್ಚಿನ ಮಾಹಿತಿಗೆ http:/manipalmarathon.com, manipalmarathon@maipal.edu.in ಸಂಪರ್ಕಿಸಬಹುದು.

ಉಡುಪಿಯಲ್ಲಿ ವರ್ಷದಿಂದ ವರ್ಷಕ್ಕೆ ಮ್ಯಾರಥಾನ್‌ಗೆ ಹೆಚ್ಚು ಸ್ಪಂದನೆ ಸಿಗುತ್ತಿದೆ. ಈ ಬಾರಿಯ ಮ್ಯಾರಥಾನ್‌ಗೆ ಈಗಾಗಲೇ 7000ಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದು ಕೊನೆಯ ಎರಡು ದಿನ ಹೆಚ್ಚು ಮಂದಿ ನೋಂದಣಿ ಮಾಡಿಕೊಳ್ಳುವ ವಿಶ್ವಾಸ ಇದೆ ಎಂದು ಶಾಸಕ ಕೆ.ರಘುಪತಿ ಭಟ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಕೆಂಪರಾಜ್‌, ಕಾರ್ಯದರ್ಶಿ ದಿನೇಶ್ ಕುಮಾರ್, ಖಜಾಂಚಿ ಡಾ.ದೀಪಕ್‌ ರಾಮ್ ಬಾಯರಿ, ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ, ಸದಸ್ಯ ಲಚ್ಚೇಂದ್ರ, ಎನ್‌ಇಬಿ ಸ್ಪೋರ್ಟ್ಸ್‌ ನಿರ್ದೇಶಕ ಡಾ.ನಾಗರಾಜ್ ಅಡಿಗ, ಮಾಹೆ ಸ್ಪೋರ್ಟ್ಸ್‌ ಕೌನ್ಸಿಲ್ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಸಹ ಕಾರ್ಯದರ್ಶಿ ಡಾ.ಶೋಭಾ ಇದ್ದರು.

ಅಂಗವಿಕಲರಿಗೆ ವೀಲ್‌ಚೇರ್ ಮ್ಯಾರಥಾನ್

ಅಂಗವಿಕಲ ಸ್ಪರ್ಧಿಗಳಿಗೆ 3 ಕಿ.ಮೀ ವೀಲ್‌ಚೇರ್ ಮ್ಯಾರಥಾನ್ ಆಯೋಜಿಸಲಾಗಿದೆ. ಈಗಾಗಲೇ 100 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಾರ್ವಜನಿಕರು ಮ್ಯಾರಥಾನ್ ಸಾಗುವ ದಾರಿಯಲ್ಲಿ ನಿಂತು ಓಟಗಾರರಿಗೆ ಉತ್ಸಾಹ ತುಂಬಬೇಕು ಎಂದು ಶಾಸಕ ಕೆ.ರಘುಪತಿ ಭಟ್‌ ಮನವಿ ಮಾಡಿದರು.

ಮ್ಯಾರಥಾನ್‌ ಮಾರ್ಗ

ಮಾಹೆಯಿಂದ ಆರಂಭವಾಗಿ ಟೈಗರ್ ಸರ್ಕಲ್‌, ಸಿಂಡಿಕೇಟ್ ಸರ್ಕಲ್‌, ಪೆರಂಪಳ್ಳಿ ಚರ್ಚ್‌, ಅಂಬಾಗಿಲು, ಕಲ್ಸಂಕ ಸರ್ಕಲ್‌ ಮಾರ್ಗವಾಗಿ ಎಂಜಿಎಂ ತಲುಪಿ, ಅಲ್ಲಿಂದ ಮತ್ತೆ ಮಾಹೆಯವರೆಗೂ ಮ್ಯಾರಥಾನ್ ಸಾಗಲಿದೆ. ಸ್ಪರ್ಧಿಗಳು ಸಾಗುವ ಮಾರ್ಗದಲ್ಲಿ ಮಾರ್ಕ್ ಮಾಡಲಾಗಿದ್ದು, ಪ್ರಾಥಮಿಕ ಚಿಕಿತ್ಸೆ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT