ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರವಂತೆ ತೀರಕ್ಕೆ ಬೇಕು ಸುರಕ್ಷತಾ ತಡೆಬೇಲಿ: ಸಾರ್ವಜನಿಕರ ಆಗ್ರಹ

ಅಪಘಡಗಳ ತಡೆಗೆ ಸುರಕ್ಷತಾ ಕ್ರಮಗಳ ಜಾರಿಗೆ ಸಾರ್ವಜನಿಕರ ಆಗ್ರಹ
Last Updated 4 ಜುಲೈ 2022, 14:00 IST
ಅಕ್ಷರ ಗಾತ್ರ

ಉಡುಪಿ: ಮರವಂತೆ ಕಡಲಿಗೆ ಕಾರು ಪಲ್ಟಿಯಾಗಿ ಇಬ್ಬರು ದಾರುಣವಾಗಿಮೃತಪಟ್ಟ ಘಟನೆಯ ಬೆನ್ನಲ್ಲೇ ತ್ರಾಸಿಯಿಂದ ಮರವಂತೆವರೆಗು ಚಾಚಿಕೊಂಡಿರುವ ಕಡಲ ತೀರಕ್ಕೆ ಸುರಕ್ಷಿತ ತಡೆಗೋಡೆ ನಿರ್ಮಾಣವಾಗಬೇಕು ಹಾಗೂ ಬೀದಿದೀಪ, ಹೈಮಾಸ್ಟ್ ದೀಪ, ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಎಂಬ ಬೇಡಿಕೆ ಜೋರಾಗಿದೆ.

ಮರವಂತೆ ಬೀಚ್‌ ಕರಾವಳಿಯ ಪ್ರಸಿದ್ಧ ಕಡಲ ತೀರವಾಗಿದ್ದು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಮರವಂತೆ ಬೀಚ್‌ಗೆ ಪ್ರವಾಸಿಗರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಗರಿಷ್ಠ ಸುರಕ್ಷತಾ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ತ್ರಾಸಿ–ಮರವಂತೆ ಮೇಲೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಸಂಚರಿಸುವ ಬಹುತೇಕ ವಾಹನ ಸವಾರರು ಕಡಲು ಹಾಗೂ ನದಿಯ ಸೌಂದರ್ಯಕ್ಕೆ ಮನಸೋತು ಹೆದ್ದಾರಿ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಪ್ರಕೃತಿಯ ಸೌಂದರ್ಯ ವೀಕ್ಷಿಸುತ್ತಾರೆ. ವಾರಾಂತ್ಯದಲ್ಲಿ ಹೆದ್ದಾರಿಗೆ ಹೊಂದಿಕೊಂಡೇ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

ಪ್ರವಾಸೋದ್ಯಮ ಇಲಾಖೆ ಹೆದ್ದಾರಿ ಬದಿಯಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕುವ ಮೂಲಕ ಸಂಭವನೀಯ ಅಪಘಾತಗಳನ್ನು ತಡೆಯಬಹುದು. ರಾತ್ರಿಯ ಹೊತ್ತು ತ್ರಾಸಿಯಿಂದ ಮರವಂತೆವರೆಗೆ ಹೆದ್ದಾರಿಯಲ್ಲಿ ಬೀದಿದೀಪಗಳು ಹಾಗೂ ಹೈಮಾಸ್ಟ್‌ ದೀಪಗಳ ವ್ಯವಸ್ಥೆ ಇಲ್ಲವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಜತೆಗೆ, ಕಡಲಿನ ಬದಿಗೆ ಸುರಕ್ಷತಾ ತಡೆಬೇಲಿಯೂ ಇಲ್ಲದಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಬೀದಿ ದೀಪಗಳು ಇಲ್ಲದ ಕಾರಣ ವಾಹನ ಸವಾರರು ಕತ್ತಲೆಯಲ್ಲಿ ಸಾಗಬೇಕಾಗಿದೆ. ಹೀಗೆ, ಹೋಗುವಾಗ ಸ್ವಚ್ಪ ಎಚ್ಚರ ತಪ್ಪಿದರೂ ಸಮುದ್ರ ಪಾಲಾಗುವ ಸಾದ್ಯತೆಗಳು ಹೆಚ್ಚಾಗಿರುತ್ತವೆ. ಭಾನುವಾರವೂ ಮಧ್ಯರಾತ್ರಿಯಲ್ಲಿಯೇ ಕಾರು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದು ಎರಡು ಜೀವಗಳು ಬಲಿಯಾಗಬೇಕಾಯಿತು ಎನ್ನುತ್ತಾರೆ ಸ್ಥಳೀಯರು.

ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಭಾರಿ ಗಾತ್ರದ ವಾಹನಗಳನ್ನು ಹೆದ್ದಾರಿ ಬದಿಯಲ್ಲಿಯೇ ನಿಲ್ಲಿಸಲಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕಡಲಿನ ಆಕರ್ಷಣೆಗೆ ಕೆಲವರು ರಾತ್ರಿಯ ಹೊತ್ತು ವಾಹನಗಳನ್ನು ಹೆದ್ದಾರಿ ಬದಿಯಲ್ಲಿಯೇ ನಿಲ್ಲಿಸಿ ತಂಗುತ್ತಾರೆ. ಇದರಿಂದ ಅಪಘಾತಗಳಾಗುವ ಅಪಾಯ ಹೆಚ್ಚಾಗಿದ್ದು, ಕಡಿವಾಣ ಹಾಕಬೇಕು.

ಮರವಂತೆ ಬೀಚ್‌ನ ಒಂದು ಬದಿಗೆ ಅತ್ಯಾಧುನಿಕ ಸುರಕ್ಷತಾ ಗೋಡೆ ಅಥವಾ ವಾಹನಗಳನ್ನು ತಡೆದು ನಿಲ್ಲಿಸುವ ಸಾಮರ್ಥ್ಯವಿರುವ ಸೇಫ್‌ ಗಾರ್ಡ್‌ಗಳನ್ನು ಹಾಕಬೇಕು. ಹೈಮಾಸ್ಟ್‌ ದೀಪಗಳನ್ನು ಅಳವಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT