ಉಡುಪಿ: ನಾಗರ ಪಂಚಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿಯೇ ನಡೆದಿದೆ. ಹೂವು ಮತ್ತು ಹಣ್ಣುಗಳ ದರ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿದೆ.
ಹಬ್ಬಗಳ ಸಂದರ್ಭದಲ್ಲಿ ಸೇವಂತಿಗೆ, ಚೆಂಡುಹೂವು, ಗುಲಾಬಿ ಮೊದಲಾದ ಹೂವುಗಳನ್ನು ಮಾರಾಟ ಮಾಡಲು ಹಾಸನ ಮೊದಲಾದೆಡೆಗಳಿಂದ ವ್ಯಾಪಾರಿಗಳು ನಗರಕ್ಕೆ ಬರುತ್ತಾರೆ. ಇಲ್ಲಿ ಬೀದಿ ಬದಿಗಳಲ್ಲಿ ಮಾರಾಟ ಮಾಡುತ್ತಾರೆ. ಈ ಬಾರಿಯೂ ಹಾಸನದಿಂದ ಹಲವು ಹೂವಿನ ವ್ಯಾಪಾರಿಗಳು ನಗರಕ್ಕೆ ಬಂದಿದ್ದಾರೆ.
ಮಲ್ಲಿಗೆಯ ದರ ಒಂದು ಅಟ್ಟೆಗೆ ₹2,400ಕ್ಕೆ ಹಾಗೂ ಜಾಜಿ ಹೂವಿನ ದರ ಪ್ರತಿ ಅಟ್ಟೆಗೆ ₹950ಕ್ಕೆ ಏರಿಕೆಯಾಗಿದೆ. ಸೇವಂತಿಗೆ ಹೂವಿನ ದರ ಮಾರಿಗೆ ₹150ಕ್ಕೆ, ಚೆಂಡುಹೂವು ಮತ್ತು ಕಾಕಡ ಒಂದು ಮಾರಿನ ದರ ₹100ಕ್ಕೆ ಏರಿದೆ.
ಈ ಬಾರಿ ಹೂವಿನ ಬೆಲೆ ಏರಿಕೆಯಾಗಿರುವುದರಿಂದ ಹೂವು ಕೊಳ್ಳುವವರ ಸಂಖ್ಯೆ ಕುಸಿದಿದೆ. ಬೆಲೆ ವಿಚಾರಿಸಿ ತೆರಳುವವರೇ ಹೆಚ್ಚಾಗಿದ್ದಾರೆ ಎಂದು ಹಾಸನದ ಹೂವಿನ ವ್ಯಾಪಾರಿ ಶ್ರೀನಿವಾಸ್ ತಿಳಿಸಿದರು.
ನಾಗರ ಪಂಚಮಿ ಹಬ್ಬಕ್ಕೆ ಅಗತ್ಯವಾದ ಹಿಂಗಾರ ಮತ್ತು ಕೇದಗೆ ಹೂವನ್ನು ಸ್ಥಳೀಯ ವ್ಯಾಪಾರಿಗಳು ಮಾರುತ್ತಾರೆ. ಒಂದು ಕೇದಗೆ ಹೂವಿಗೆ ₹150 ಮತ್ತು ಅಡಿಕೆ ಮರದ ಒಂದು ಹಿಂಗಾರಕ್ಕೆ ₹250 ದರವಿದ್ದರೂ ನಾಗರ ಪಂಚಮಿ ಹಬ್ಬ ಆಚರಣೆಯಲ್ಲಿ ಮುಖ್ಯವಾಗಿರುವುದರಿಂದ ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಗ್ರಾಹಕರದ್ದಾಗಿದೆ.
ಈ ಬಾರಿ ಕೇದಗೆ ಹೂವು ಮತ್ತು ಹಿಂಗಾರದ ದರ ವಿಪರೀತ ಹೆಚ್ಚಾಗಿದೆ. ಮಳೆಯಾದ ಕಾರಣ ಲಭ್ಯತೆ ಕಡಿಮೆಯಾಗಿ ದರ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ನಮಗೆ ಅನಿವಾರ್ಯವಾಗಿ ಕೊಂಡು ಕೊಳ್ಳಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಹಕ ಅಂಬಾಗಿಲಿನ ಶ್ರೀನಿವಾಸ್.
ಹಬ್ಬ, ಪೂಜೆಗಳ ಸಂದರ್ಭದಲ್ಲಿ ಏಲಕ್ಕಿ ಬಾಳೆಹಣ್ಣು ಬಳಸಲಾಗುತ್ತದೆ. ಏಲಕ್ಕಿ ಬಾಳೆ ಹಣ್ಣಿನ ದರ ಕೆ.ಜಿ.ಗೆ ₹90ಕ್ಕೇರಿದೆ. ಕಳೆದ ವಾರ ಕೆ.ಜಿ.ಗೆ ₹80 ಇತ್ತು. ಆ್ಯಪಲ್ ದರ ಕೆ.ಜಿ.ಗೆ ₹220ಕ್ಕೆ ಏರಿಕೆಯಾದರೆ, ಪಪ್ಪಾಯ ಹಣ್ಣಿನ ದರ ಕೆ.ಜಿ.ಗೆ ₹60 ಕ್ಕೇರಿದೆ. ಕಳೆದ ವಾರ ಪಪ್ಪಾಯ ಹಣ್ಣಿನ ದರ ಕೆ.ಜಿ.ಗೆ ₹40 ಇತ್ತು.
ಹಬ್ಬದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ತರಕಾರಿ ದರ ಗಗನಕ್ಕೇರುತ್ತದೆ ಆದರೆ ಈ ಬಾರಿ ನಾಗರ ಪಂಚಮಿ ವೇಳೆಗೆ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗದೆ ಸ್ಥಿರವಾಗಿರುವುದು ಗ್ರಾಹಕರಿಗೆ ಅಲ್ಪ ಸಮಾಧಾನ ತಂದಿದೆ.
ತರಕಾರಿ ದರ (ಪ್ರತಿ ಕೆ.ಜಿ.₹ಗಳಲ್ಲಿ)ಕ್ಯಾರೆಟ್;60ಮಂಗಳೂರು ಸೌತೆ;20ಬೀನ್ಸ್;50ಬದನೆಕಾಯಿ;60ಈರುಳ್ಳಿ;40ಅಲಸಂಡೆ;50ಬೂದುಗುಂಬಳ; 30 ಬೆಂಡೆಕಾಯಿ;48ತೊಂಡೆಕಾಯಿ;55
ಈ ಬಾರಿ ವಿಪರೀತ ಮಳೆಯಾಗಿರುವುದರಿಂದ ಹೂವಿನ ಬೆಳೆ ನಾಶವಾಗಿ ಹೋಗಿದೆ. ಅಳಿದುಳಿದ ಹೂವುಗಳನ್ನು ಮಾರಾಟಕ್ಕೆ ತಂದಿದ್ದೇವೆ. ಬೆಳೆ ನಾಶವಾಗಿರುವುದರಿಂದ
-ಹೂವಿನ ದರವೂ ಹೆಚ್ಚಾಗಿದೆ ಆದಿತ್ಯ ಹೂವಿನ ವ್ಯಾಪಾರಿ ಹಾಸನ
ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ತರಕಾರಿ ದರ ಏರಿಕೆಯಾಗುವುದಿಲ್ಲ. ಚೌತಿ ಮೊದಲಾದ ಹಬ್ಬಗಳ ವೇಳೆ ವಿಪರೀತ ಏರಿಕೆಯಾಗುತ್ತದೆ
-ಆನಂದ್ ಉಡುಪಿಯ ತರಕಾರಿ ಮಾರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.