ಬಾಲಚಂದ್ರ ಎಚ್.
ಉಡುಪಿ: ನಾಗರಪಂಚಮಿಯಿಂದ ಆರಂಭಗೊಂಡು ಸಾಲು ಸಾಲು ಹಬ್ಬಗಳು ಎದುರಾಗುತ್ತಿರುವುದು, ಧಾರ್ಮಿಕ ಹಾಗೂ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಹಣ್ಣಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಹಬ್ಬಗಳ ಆಚರಣೆ, ಶುಭ ಸಮಾರಂಭಗಳಿಗೆ ಬಾಳೆಹಣ್ಣಿನ ಬಳಕೆ ಹೆಚ್ಚಾಗಿರುವುದರಿಂದ ಸಹಜವಾಗಿ ಬೇಡಿಕೆಯೂ ಹೆಚ್ಚಾಗಿದ್ದು, ಬೆಲೆಯಂತೂ ಗಗನಕ್ಕೇರಿದೆ. ತಿಂಗಳ ಹಿಂದೆ ಕೆ.ಜಿಗೆ ₹60 ರಿಂದ ₹70ಕ್ಕೆ ಸಿಗುತ್ತಿದ್ದ ಏಲಕ್ಕಿ ಬಾಳೆ ಸದ್ಯ ₹110 ರಿಂದ ₹120ಕ್ಕೆ ಏರಿಕೆಯಾಗಿದೆ. ಒಂದೆರಡು ತಿಂಗಳಲ್ಲಿ ದರ ದುಪ್ಪಟ್ಟಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ದರ ಹೆಚ್ಚಾಗಿದ್ದರೂ ಹಬ್ಬ, ಹರಿದಿನ, ಶುಭ ಸಮಾರಂಭಗಳಿಗೆ ಬಾಳೆಹಣ್ಣಿನ ಬಳಕೆ ಕಡ್ಡಾಯವಾಗಿರುವುದರಿಂದ ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ.
ಏಲಕ್ಕಿ ಬಾಳೆಹಣ್ಣಿಗೆ ಸಾಮಾನ್ಯವಾಗಿ ಎಲ್ಲ ಸೀಸನ್‌ನಲ್ಲೂ ಬೇಡಿಕೆ ಇದ್ದರೂ ದರ ಮಾತ್ರ ₹50 ರಿಂದ ₹70ರ ಆಸುಪಾಸಿನಲ್ಲಿರುತ್ತದೆ. ನಾಗರ ಪಂಚಮಿಯ ಬಳಿಕ, ವರ ಮಹಾಲಕ್ಷ್ಮೀ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚೌತಿ ಹೀಗೆ ಸಾಲು ಸಾಲು ಹಬ್ಬಗಳು ಎದುರಾಗುವುದರಿಂದ ಬೇಡಿಕೆ ಹೆಚ್ಚಾಗಿ ದರವೂ ಏರಿಕೆಯಾಗುತ್ತದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಶ್ರೀಧರ್.
ಟೊಮೆಟೊ ದರ ಕುಸಿತ: ಎರಡು ತಿಂಗಳ ಕಾಲ ಗ್ರಾಹಕರ ಜೇಬಿಗೆ ಹೊರೆಯಾಗಿದ್ದ ಟೊಮೆಟೊ ದರ ಸದ್ಯ ಕುಸಿತ ಕಾಣುತ್ತಿದೆ. ಕಳೆದ ವಾರ ಕೆ.ಜಿಗೆ ₹50ರಿಂದ ₹60 ಇದ್ದ ಟೊಮೆಟೊ ಬೆಲೆ ಸದ್ಯ ₹40ಕ್ಕೆ ಇಳಿಕೆಯಾಗಿದೆ. ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚು ಪೂರೈಕೆಯಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ಟೊಮೆಟೊ ದರ ಕುಸಿಯುತ್ತಲೇ ಇದೆ ಎನ್ನುತ್ತಾರೆ ವ್ಯಾಪಾರಿ ಅಲ್ತಾಫ್.
ಜಿಲ್ಲೆಯ ಬೇಡಿಕೆಯ ಬಹುಪಾಲು ಟೊಮೆಟೊ ಹೊರ ಜಿಲ್ಲೆಗಳಿಂದ ಪೂರೈಕೆಯಾಗುವುದರಿಂದ ಅನ್ಯ ಜಿಲ್ಲೆಗಳಿಗಿಂತ ಇಲ್ಲಿ ದರ ಸ್ವಲ್ಪ ಹೆಚ್ಚಾಗಿದೆ. ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬರುತ್ತಿದ್ದು ಮಾರಾಟ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಅವರು.
ತರಕಾರಿ ದರ ಇಳಿಕೆ: ಕ್ಯಾರೆಟ್ ಹೊರತುಪಡಿಸಿ ಬಹುತೇಕ ತರಕಾರಿಗಳ ದರ ಇಳಿಕೆಯಾಗಿದೆ. ಕ್ಯಾರೆಟ್ ಕೆ.ಜಿಗೆ ₹85, ಬೀನ್ಸ್ ₹60, ಮೂಲಂಗಿ ₹25, ಬದನೆಕಾಯಿ ₹30, ಬೆಂಡೆಕಾಯಿ ₹25, ನುಗ್ಗೆಕಾಯಿ ₹80, ಆಲೂಗಡ್ಡೆ ₹35, ಎಲೆಕೋಸು ₹25, ಹೂಕೋಸು ₹25, ಹಸಿಮೆಣಸಿನಕಾಯಿ ₹80, ಬೀಟ್‌ರೂಟ್ ₹45, ಸಾಂಬರ್ ಸೌತೆ ₹20, ಈರೇಕಾಯಿ ₹40, ಕ್ಯಾಪ್ಸಿಕಂ ₹70, ಬೂದುಗುಂಬಳ ₹25, ಸಿಹಿ ಕುಂಬಳ ₹20, ಶುಂಠಿ ₹280, ಬೆಳ್ಳುಳ್ಳಿ ₹220 ದರ ಇದೆ.
ಹಣ್ಣುಗಳ ದರ ಹೆಚ್ಚಳ: ಹಬ್ಬಗಳ ಹಿನ್ನೆಲೆಯಲ್ಲಿ ಬಹುತೇಕ ಹಣ್ಣುಗಳ ದರ ಹೆಚ್ಚಾಗಿದೆ. ಸೇಬು ಗುಣಮಟ್ಟಕ್ಕೆ ಅನುಗುಣವಾಗಿ ₹180ರಿಂದ ₹350ರವರೆಗೂ ಬೆಲೆ ಇದೆ. ದಾಳಿಂಬೆ ಸಣ್ಣ ಗಾತ್ರ ₹120 ರಿಂದ ₹140, ದೊಡ್ಡಗಾತ್ರ ₹170 ರಿಂದ ₹180, ಪಪ್ಪಾಯ ₹40, ಮೋಸಂಬಿ ₹40, ಮಸ್ಕ್ ಮಲನ್ ₹40, ಸೀಬೆ ₹100 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.