ಬುಧವಾರ, ಆಗಸ್ಟ್ 4, 2021
22 °C
ಮೂಕಾಸುರನ ಬೆಟ್ಟದ ಬಳಿ ನಿಲ್ಸ‌ಕಲ್ ಸ್ಮಾರಕ ಶಿಲೆ

ಕೊಲ್ಲೂರು: ಶಿಲಾಯುಗದ ನಿವೇಶನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕುಂದಾಪುರ ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಾಲಯ ಸಮೀಪದ ಮೂಕಾಸುರನ ಬೆಟ್ಟದ ಬುಡದಲ್ಲಿ ಶಿಲಾಯುಗದ ನಿಲ್ಸ‌ಕಲ್‌ ಸ್ಮಾರಕಶಿಲೆ, ಕಲ್ಗುಳಿ, ಮುರಕಲ್ಲಿನಲ್ಲಿ ಕೊರೆದ ಬಾವಿ ಹಾಗೂ ಮಡಕೆಯ ಅವಶೇಷಗಳು ದೊರೆತಿವೆ ಎಂದು ಮುಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ ತಿಳಿಸಿದ್ದಾರೆ.

ಕೊಲ್ಲೂರು ಹಾಗೂ ಮೂಕಾಂಬಿಕಾ ದೇವಸ್ಥಾನದ ಪ್ರಾಚೀನತೆಯು ಕ್ರಿಪೂ 1,000 ವರ್ಷಗಳಷ್ಟು ಪ್ರಾಚೀನ ಪರಂಪರೆ ಹೊಂದಿರುವುದನ್ನು ಕೊಲ್ಲೂರಿನ ಶಿಲಾಯುಗ ನಿವೇಶನ ಶೋಧವು ಧೃಡೀಕರಿಸುತ್ತದೆ. ಪುರಾಣದ ಪ್ರಕಾರ ಮೂಕಾಸುರನನ್ನು ದೇವಿ ಹತ್ಯೆ ಮಾಡಿದ್ದರಿಂದ ಮೂಕಾಂಬಿಕೆ ಎಂಬ ಅಭಿದಾನ ಪಡೆದು ಕೊಲ್ಲೂರಿನಲ್ಲಿ ನೆಲೆಸಿದ್ದಳು ಎಂಬ ಪ್ರತೀತಿ ಇದೆ. ಬಹುಶಃ ಮೂಕಾಸುರನ ಸಮಾಧಿಯ ಸಮೀಪ ಆತನ ಸ್ಮಾರಕವಾಗಿ ಈ ಶಿಲೆಯನ್ನು ನಿಲ್ಲಿಸಿರಬಹುದು ಎಂದು ಅವರು ಶಂಕಿಸಿದ್ದಾರೆ.‌

ಕೊಲ್ಲೂರಿಗೆ ಸಮೀಪದಲ್ಲಿರುವ ಹೊಸನಗರ ತಾಲ್ಲೂಕಿನನ ಬೈಸೆ, ನಿಲ್ಸ‌ಕಲ್ ಹಾಗೂ ಹೆರಗಲ್‌ನಲ್ಲಿ 40 ನಿಲ್ಸ‌ಕಲ್ ಮಾದರಿ ಶಿಲೆಗಳು ಈಗಾಗಲೇ ಪತ್ತೆಯಾಗಿವೆ. ಉಡುಪಿ ಜಿಲ್ಲೆಯ ಸುಭಾಸ್‌ನಗರದ ಬಗ್ಗಡಿಕಲ್ ಸಮೀಪ ನಾಲ್ಕು ಹಾಗೂ ನಿಟ್ಟೂರಿನ ಅಡ್ಕದಕಟ್ಟೆಯಲ್ಲಿ ಒಂದು ಹಾಗೂ ಬುದ್ದನಜೆಡ್ಡುವಿನಲ್ಲಿ ಒಂದು, ಕೊಡಗಿನ ಅರಸಿಣಗುಪ್ಪೆಯಲ್ಲಿ ಒಂದು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮೂರು ನಿಲ್ಸ‌ಕಲ್ ಮಾದರಿ ದೊರೆತಿದ್ದು, ಸದ್ಯ ಪತ್ತೆಯಾಗಿರುವುದು ಏಳನೆಯ ಶೋಧವಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.

ಸ್ಥಳೀಯ ಗ್ರಾನೈಟ್ ಶಿಲೆ ಬಳಸಿ ನಿಲ್ಸ‌ಕಲ್ ತಯಾರಿಸಲಾಗಿದ್ದು ದಕ್ಷಿಣ ಭಾರತದಾದ್ಯಂತ ಗ್ರಾನೈಟ್ ಶಿಲೆಯನ್ನು ಸಮಾಧಿಗಳ ರಚನೆಗಾಗಿ ಬಳಸಿರುವುದು ವಿಶೇಷ. ಸಂಶೋಧನೆಯಲ್ಲಿ ಕೊಲ್ಲೂರಿನ ಮುರುಳೀಧರ ಹೆಗ್ಡೆ, ರಮೇಶ್ ಅನಗಳ್ಳಿ, ಗದ್ದೆಮನೆ ಚಂದ್ರ ಯು.ಬಿ. ರಾಘವೇಂದ್ರ ಐತಾಳ್, ಜನಾರ್ಧನ ಆಚಾರಿ ಮತ್ತು ನುಕ್ಸಾಲ್ ಭಾಸ್ಕರ್ ನೆರವು ನೀಡಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು