ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣಾತ್ಮಕತೆ ಬಿಡಿ ಧನಾತ್ಮಕತೆ ಅನುಸರಿಸಿ

ಮನೋರೋಗ ಗುಣಪಡಿಸಲು ಸಾಧ್ಯ: ಜಿಲ್ಲಾ ನ್ಯಾಯಧೀಶ ಸಿ.ಎಂ.ಜೋಶಿ
Last Updated 10 ಅಕ್ಟೋಬರ್ 2019, 15:02 IST
ಅಕ್ಷರ ಗಾತ್ರ

ಉಡುಪಿ: ಮನೋರೋಗ ಗುಣಪಡಿಸಬಹುದಾದ ಕಾಯಿಲೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಸಿ.ಎಂ.ಜೋಶಿ ಹೇಳಿದರು.

ಗುರುವಾರ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಐಎಂಎ ಭವನದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಕಾಯಿಲೆಯನ್ನು ಕೂಡ ಇತರೆ ಕಾಯಿಲೆಗಳಂತೆ ಗುಣಪಡಿಸಬಹುದು. ಮಾನಸಿಕ ನೆಮ್ಮದಿ ಹಾಗೂ ಆರೋಗ್ಯದಿಂದ ಇತರ ಕಾಯಿಲೆಗಳಿಂದ ದೂರವಿರಬಹುದು. ಋಣಾತ್ಮಕ ವಿಚಾರಗಳಿಂದ ದೂರವಿದ್ದು, ಧನಾತ್ಮಕತೆಯನ್ನು ಅಳವಡಿಸಿಕೊಂಡು, ಸಮಚಿತ್ತ ಕಾಪಾಡಿಕೊಂಡಾಗ ಮಾನಸಿಕ ಸದೃಢತೆ ಸಾಧ್ಯ ಎಂದರು.

ಮಾನಸಿಕ ಆರೋಗ್ಯದ ಬಗ್ಗೆ ಹಲವು ಪುಸ್ತಕಗಳು ಲಭ್ಯವಿದ್ದು, ಓದಬೇಕು. ಪೋಷಕರು ಮಾನಸಿಕ ರೋಗಗಳ ಬಗ್ಗೆ ತಿಳಿದುಕೊಳ್ಳಬೇಕು. ಮಾನಸಿಕ ಆರೋಗ್ಯ ಮತ್ತು ಆರೈಕೆ ಕಾಯ್ದೆಯ ಅನ್ವಯ ಮಾನಸಿಕ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಸಲಹೆ ನೀಡಿದರು.‌

ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ, ಸಮಸ್ಯೆಗಳು ನಮಗೆ ಮಾತ್ರ ಎಂಬ ಋಣಾತ್ಮಕ ವಿಚಾರಗಳನ್ನು ಮನಸಿನಿಂದ ತೆಗೆದುಹಾಕಬೇಕು. ಕಷ್ಟಗಳನ್ನು ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಆತ್ಮಹತ್ಯೆಯಂತಹ ವಿಚಾರಗಳು ಮನಸ್ಸಿಗೆ ಬರುವುದಿಲ್ಲ ಎಂದರು.‌

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ವ್ಯಕ್ತಿಯು ಸಾಮರ್ಥ್ಯ ಮೀರಿ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಒತ್ತಡಗಳು ಆವರಿಸುತ್ತವೆ. ನಿರೀಕ್ಷೆಗಳು ಕೈಗೆಟುಕುವಂತಿರಲಿ. ಒತ್ತಡ ರಹಿತ ಜೀವನದಿಂದ ಸಾಧನೆ ಸಾಧ್ಯ ಎಂದರು.

ಕೋಲಾರದಲ್ಲಿ ರೈತರು ಕನಿಷ್ಟ ಭೂಮಿ ಹೊಂದಿದ್ದರೂ, ಸಾವಿರಾರು ಅಡಿ ಬೋರ್‌ ಕೊರೆದು ಬೊಗಸೆಯಷ್ಟು ನೀರು ಪಡೆಯುತ್ತಾರೆ. ಇದರಲ್ಲಿಯೇ ಕೃಷಿ ಮಾಡುತ್ತಾರೆ. ಕೋಲಾರದಲ್ಲಿ ರೈತರ ಆತ್ಮಹತ್ಯೆಯ ನಿದರ್ಶನಗಳಿಲ್ಲ ಎಂದು ಶ್ಲಾಘಿಸಿದರು.

ಕೆಲಸದಲ್ಲಿ ಶ್ರದ್ಧೆ ಆಸಕ್ತಿ ಇರಬೇಕು. ಮಾದಕ ವ್ಯಸನಗಳಿಗೆ ದಾಸರಾಗದೇ ಶಿಸ್ತುಬದ್ಧ ಜೀವನ ನಡೆಸಬೇಕು. ದೇಶ ಹೆಮ್ಮೆ ಪಡುವಂತೆ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಡಿಎಚ್‌ಒ ಡಾ.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಲು ಜಿಲ್ಲಾ ಆಸ್ಪತ್ರೆಗಳಲ್ಲಿ 9 ಆಪ್ತ ಸಮಾಲೋಚಕರನ್ನು ನಿಯುಕ್ತಿಗೊಳಿಸುವುದರ ಜೊತೆಗೆ, ಪ್ರತಿ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಪ್ರೀತಿ ಗೆಹ್ಲೋಟ್, ಮನೋ ತಜ್ಞರಾದ ಡಾ.ವಾಸುದೇವ್, ಡಾ.ಮಾನಸ್, ವಾಣಿ ಆರ್ ಬಲ್ಲಾಳ್, ಪ್ರೊ.ಸೋಝಾನ್ ಉಪಸ್ಥಿತರಿದ್ದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ .ಸುರೇಂದ್ರ ಚಿಂಬಾಲ್ಕರ್ ಸ್ವಾಗತಿಸಿದರು. ವಿಜಯಾಬಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT