ರಾಷ್ಟ್ರೀಯವಾದದ ಅಸ್ತ್ರದಿಂದ ಮಣಿಸುವ ಯತ್ನ

7
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆತ್ಮಜಿತ್ ಸಿಂಗ್ ಕಳವಳ

ರಾಷ್ಟ್ರೀಯವಾದದ ಅಸ್ತ್ರದಿಂದ ಮಣಿಸುವ ಯತ್ನ

Published:
Updated:
Deccan Herald

ಉಡುಪಿ: ತಮ್ಮ ವಾದವನ್ನು ಒಪ್ಪದವರನ್ನು ರಾಷ್ಟ್ರೀಯವಾದ ಎಂಬ ಅಸ್ತ್ರದಿಂದ ಹೊಡೆಯುವ ಪ್ರಯತ್ನಗಳು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಪ್ರಸ್ತುತ ನಡೆಯುತ್ತಿವೆ ಎಂದು ಕೇಂದ್ರ ಸಾಹಿತ್ಯ ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆತ್ಮಜಿತ್ ಸಿಂಗ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಗುರುವಾರ ಮಣಿಪಾಲ್ ಇಂಟರ್ ನ್ಯಾಷನಲ್ ಲಿಟರೇಚರ್ ಮತ್ತು ಆರ್ಟ್ಸ್ ಪ್ಲಾಟ್ ಫಾರಂ (ಮಿಲಾಪ್) ವಾರ್ಷಿಕ ಉತ್ಸವ ಉದ್ಘಾಟಿಸಿ ಅವರು ಮಾತಾಡಿದರು.

ತಳಪಾಯ ಇಲ್ಲದ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ಪರಂಪರೆ ಇಲ್ಲದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಖಡ್ಗ ಮತ್ತು ರಕ್ತದಿಂದ ಚರಿತ್ರೆ ಬರೆಯುವುದಕ್ಕೆ ಕೆಲವರು ಯತ್ನಿಸುತ್ತಿದ್ದಾರೆ. ಚರಿತ್ರೆಯ ನ್ಯಾಯದ ಆಧಾರದಲ್ಲಿ ಚರಿತ್ರೆ ರಚನೆಯಾಗಬೇಕು ಎಂದರು.

ಸಮುದ್ರದಲ್ಲಿ ಒಂದು ಜಾತಿಯ ಮೀನುಗಳು ಸಾವಿರಾರು ಕಿಲೋಮೀಟರ್‌ ವಲಸೆ ಹೋಗುತ್ತವೆ. ಅಲ್ಲಿ ಬದುಕಲಾಗದೆ ಮರಳುವಾಗ ಬಲೆಗೆ ಬಿದ್ದು ಸಾಯುತ್ತವೆ. ಹಾಗೆಯೇ ನಮ್ಮದಲ್ಲದ ಪರಂಪರೆಯನ್ನು ಒಪ್ಪಿಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರು.

ಖ್ಯಾತ ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಪರಂಪರೆಗಳೆಲ್ಲವೂ ಒಳ್ಳೆಯದಾಗಿರಲೇಬೇಕು ಎಂದಿಲ್ಲ. ಹೊಸತು ಕೆಟ್ಟದ್ದು ಎಂದೇನಿಲ್ಲ. ನಮಗೆ ಒಳ್ಳೆಯ ಹಾಗೂ ಕೆಟ್ಟದರ ಬಗ್ಗೆ ತಿಳಿವಳಿಕೆ ಇರಬೇಕು ಎಂದರು.

ಪ್ರಸ್ತುತ ರಂಗಭೂಮಿ ಹಲವು ಭಾಷೆಗಳ ಭಂಡಾರವಾಗಿದೆ. ರಂಗಭೂಮಿ ಯಾವಾಗಲೂ ಸಂಸ್ಕೃತಿಯ ಭಾಗವಾಗಿದೆ ಎಂದು ರಾಮಕೃಷ್ಣನ್ ರಮಾನಾಥನ್ ಅಭಿಪ್ರಾಯಪಟ್ಟರು.

ಮಣಿಪಾಲ ವಿಶ್ವವಿದ್ಯಾಲದಯ ಉಪ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಪ್ರಸಿದ್ಧ ರಂಗಕರ್ಮಿ ಕೆ.ವಿ.ಅಕ್ಷರ ಅವರ ಕನ್ನಡ ಥಿಯೇಟರ್ ಹಿಸ್ಟರಿ-1850-1950 ಹಾಗೂ ಮೈತ್ರೇಯಿ ಕಾರ್ನೂರ್ ಅವರ ಅನುವಾದಿತ ಕೃತಿ ‘ಎ ಹ್ಯಾಂಡ್ ಫುಲ್ ಆಫ್ ಸೇಸಮ್’ ಕೃತಿ ಬಿಡುಗಡೆ ಮಾಡಲಾಯಿತು.

ಆಧುನಿಕ ಕನ್ನಡ ಸಾಹಿತ್ಯ ಬರವಣಿಗೆಯ ಮೇಲೆ ಪ್ರಾದೇಶಿಕ ಭಾಷೆಗಳ ಪ್ರಭಾವ ಕುರಿತು ಚರ್ಚೆ ನಡೆಯಿತು. ಖ್ಯಾತ ಸಾಹಿತಿಗಳಾದ ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ, ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳ ಕುರಿತು ಸಂವಾದ ನಡೆಯಿತು.

ಬರಹಗಾರ ಎಸ್‌.ದಿವಾಕರ್, ಪ್ರೊ.ರಾಜೇಂದ್ರ ಚೆನ್ನಿ, ಜಿ.ರಾಜಶೇಖರ್, ರಾಘವೇಂದ್ರ ಪಾಟೀಲ್ ಹಾಗೂ ಟಿ.ಪಿ.ಅಶೋಕ್ ಅವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಹಾಗೂ ಮರಾಣಿ ರಂಗಭೂಮಿ ಕುರಿತು ಕೆ.ವಿ.ಅಕ್ಷರ ಹಾಗೂ ಪ್ರಸಾದ್ ವಾರಣಾಸಿ ಮಾತನಾಡಿದರು.  

ಕಾರ್ಯಕ್ರಮದ ಸಂಯೋಜಕಿ ನೀತಾ ಇನಾಮ್ದಾರ್ ಸ್ವಾಗತಿಸಿದರು. ಶನಿವಾರದವರೆಗೂ ಮಿಲಾಪ್ ಉತ್ಸವ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !