ಕುಂದಾಪುರ: ‘ಕರಾವಳಿ ಭಾಗದ ಹಿನ್ನೀರು ಪ್ರದೇಶದಲ್ಲಿ ಹಲವು ಸುಂದರ ಪ್ರದೇಶಗಳಿವೆ. ಪ್ರಕೃತಿ ಹಾಗೂ ಜಲಚರಗಳಿಗೆ ಆಶ್ರಯ ನೀಡುವ ಕಾಂಡ್ಲಾ ವನ ಪ್ರದೇಶಗಳನ್ನು ಬಳಸಿ ಇಕೋ ಟೂರಿಸಂ ಅಭಿವೃದ್ಧಿಗೊಳಿಸುವ ಚಿಂತನೆ ಇದೆ. ಈ ಕುರಿತು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಇಲ್ಲಿನ ಚರ್ಚ್ ರಸ್ತೆಯ ಕೋಡಿ ಪಂಚ ಗಂಗಾವಳಿ ನದಿ ತೀರದ ಹಿನ್ನೀರು ಪ್ರದೇಶಗಳಲ್ಲಿ ಬೆಳೆಸಲಾದ ಕಾಂಡ್ಲಾ ವನಗಳನ್ನು ಶನಿವಾರ ಬೋಟ್ ಮೂಲಕ ವೀಕ್ಷಣೆ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೆ ಅವರು ಮಾತನಾಡಿದರು.
ಕಾಂಡ್ಲಾ ಗಿಡಗಳನ್ನು ಬೆಳಸುವುದರಿಂದ ಪ್ರಾಕೃತಿಕ ಅವಘಡಗಳನ್ನು ತಡೆಯಬಹುದು. ಕರಾವಳಿ ಭಾಗದಲ್ಲಿ ಪಶ್ಚಿಮ ಕರಾವಳಿ ಜತೆಯಲ್ಲಿ ಪಶ್ಚಿಮ ಬೆಟ್ಟಗಳು ಇವೆ. ಆಧುನಿಕ ತಂತ್ರಜ್ಞಾನ ಹಾಗೂ 360 ಡಿಗ್ರಿ ಕ್ಯಾಮೆರಾ ಬಳಸಿಕೊಂಡು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಇಲ್ಲಿನ ರಮಣೀಯ ಪ್ರದೇಶಗಳ ದೃಶ್ಯಾವಳಿ ಸೆರೆ ಹಿಡಿದು ಇಕೋ ಟೂರಿಸಂ ಕೇಂದ್ರಗಳನ್ನು ಗುರುತಿಸಲಾಗುತ್ತದೆ. ಕರಾವಳಿ ತೀರದ ಹಿನ್ನೀರು ಪ್ರದೇಶಗಳಲ್ಲಿ ಕಾಂಡ್ಲಾ ವನಗಳನ್ನು ಬೆಳೆಸುವ ಗುರಿ ಇದೆ. ಇಕೋ ಟೂರಿಸಂ ಮೂಲಕ ಬರುವ ಆದಾಯವನ್ನು ಬಳಸಿಕೊಂಡು ಕಾಂಡ್ಲಾ ವನಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳಿವೆ ಎಂದು ಅವರು ಹೇಳಿದರು.
ಬಂಡಿಪುರ ಸೇರಿದಂತೆ ಹಾಗೂ ಇತರ ಅರಣ್ಯ ಇಲಾಖೆ ಪ್ರವಾಸ ಸ್ಥಳಗಳಿಗೆ ಕೋವಿಡ್ ಕಾರಣದಿಂದ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ, ದಟ್ಟ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರಿಗೆ ಅನುಮತಿ ಇಲ್ಲ ಎಂದು ಸಚಿವ ಲಿಂಬಾವಳಿ ಹೇಳಿದರು.
ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟಾಗೋ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಳ್ಕರ್, ಕುಂದಾಪುರ ಉಪ ವಲಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಉಪ ವಿಭಾಗಾಧಿಕಾರಿ ಕೆ.ರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಲೋಹಿತ್, ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಫ್ ಖಾರ್ವಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಮೋಹನ್‌ದಾಸ್ ಶೆಣೈ, ಸಂತೋಷ್ ಶೆಟ್ಟಿ, ಶ್ವೇತಾ, ದಿವಾಕರ ಕಡ್ಗಿಮನೆ, ಸುಧೀರ ಕೆ.ಎಸ್, ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ಅವಿನಾಶ ಉಳ್ತೂರು, ಸುರೇಂದ್ರ ಕಾಂಚನ್, ಕೋಡಿ ಅಶೋಕ ಪೂಜಾರಿ, ಪ್ರಕಾಶ ಖಾರ್ವಿ, ಅರಣ್ಯ ಇಲಾಖೆಯ ಪ್ರಭಾಕರ ಕುಲಾಲ್, ಕಿರಣ್ ಬಾಬು, ಹಸ್ತಾ ಶೆಟ್ಟಿ ಇದ್ದರು.
ಹಸಿರು ಕವಚ ಹೆಚ್ಚಿಸುವ ಗುರಿ
ಯಡಿಯೂರಪ್ಪ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ರೂಪಿಸಲಾದ ಹಸಿರು ಕವಚ ಯೋಜನೆಯಿಂದಾಗಿ ರಾಜ್ಯದಲ್ಲಿ ಶೇ13 ರಷ್ಟು ಇದ್ದ ಹಸಿರು ಕವಚ ಶೇ 23 ಕ್ಕೆ ತಲುಪಿದೆ. ಇದನ್ನು ಶೇ 33 ಕ್ಕೆ ತೆಗೆದುಕೊಂಡು ಹೋಗುವ ಗುರಿ ಇದೆ. 2 ವರ್ಷಗಳಲ್ಲಿ ಮುಗಿಯುವ ಯೋಜನೆ ಇದಲ್ಲ, ಇದಕ್ಕೆ ಕಾಲಾವಕಾಶ ಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಕೋವಿಡ್ ಸೋಂಕಿನ ವೇಳೆ ಅಮ್ಲಜನಕ ಕೊರತೆಯಾಗಿರುವುದು ಕಂಡಿದ್ದೇವೆ. ಕಾಂಡ್ಲಾ ವನ ಹಾಗೂ ಹಸಿರು ಸಮೃದ್ಧಿಯಾಗಿ ಬೆಳೆದರೆ ಈ ಕೊರತೆ ನೀಗುತ್ತದೆ. ಅರಣ್ಯ ಇಲಾಖೆ ಎಲ್ಲ ವಿಭಾಗಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಾರ್ವಜನಿಕ ಸಹಕಾರ ಅಗತ್ಯ. ವಿನಾಶದಂಚಿನಲ್ಲಿ ಇರುವ ಕಡಲಾಮೆಗಳ ಪುರ್ವಸತಿ ಬಗ್ಗೆ ಚರ್ಚಿಸಿ ಈ ಕುರಿತು ನಿರ್ಧರಿಸಲಾಗುವುದು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.