ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 134 ಕೋಟಿ ವೆಚ್ಚದಲ್ಲಿ ಹೆಜಮಾಡಿ ಬಂದರು

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 23 ಫೆಬ್ರುವರಿ 2020, 10:42 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ಕಿನಾರೆಯಲ್ಲಿ ನನೆಗುದಿಗೆ ಬಿದ್ದಿರುವ ಜೆಟ್ಟಿಗಳ ನಿರ್ಮಾಣ, ಕಿರು ಬಂದರುಗಳ ನಿರ್ಮಾಣ, ಹೂಳೆತ್ತುವ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೀನುಗಾರರಿಗೆ ಸವಲತ್ತುಗಳ ವಿತರಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಹೆಜಮಾಡಿ ಬಂದರು ನಿರ್ಮಾಣಕ್ಕೆ 34 ಎಕರೆ ಭೂಸ್ವಾಧೀನವಾಗಿದ್ದು, 14 ಎಕರೆ ಖಾಸಗಿ ಜಮೀನು ಖರೀದಿಸಲು ನಿರ್ಧರಿಸಲಾಗಿದೆ. ₹ 134 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಂದರು ನಿರ್ಮಾಣವಾಗಲಿದೆ ಎಂದರು.

ಮಂಗಳೂರು ಮೂರನೇ ಹಂತದ ಬಂದರು ಕಾಮಗಾರಿಗೂ ಶೀಘ್ರವೇ ಅನುಮೋದನೆ ದೊರೆಯಲಿದೆ. ಹಾಗೆಯೇ ಕಾರವಾರ ಬಂದರು ಅಭಿವೃದ್ಧಿಗೂ ಅನುದಾನ ಮೀಸಲಿಡಲಾಗುವುದು ಎಂದು ಕೋಟ ತಿಳಿಸಿದರು.

ಪಂಚರ ಕೃಷಿ ಮೀನುಗಾರಿಕೆಯನ್ನು ಉತ್ತೇಜಿಸಲು ಈ ಬಾರಿಯ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಲಾಗುವುದು. ಮೀನುಗಾರಿಕಾ ಯುವಕರನ್ನು ಸ್ವಾವಲಂಬಿಗಳನ್ನಾಗಿಸಲು ಉದ್ಯಮ ಸ್ಥಾಪನೆಗೆ ಮೂರು ತಿಂಗಳ ತರಬೇತಿ ನೀಡಿ, ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದು ಎಂದರು.

ರಾಜ್ಯದ 11 ಕಡೆಗಳಲ್ಲಿ ಮತ್ಸ್ಯದರ್ಶಿನಿಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ. ಕೆಲವು ಕಡೆ ಜಾಗವನ್ನೂ ಗುರುತಿಸಲಾಗಿದೆ. ಬಂದರಿನಿಂದ ನೇರವಾಗಿ ಮೀನು ಖರೀದಿಸುವುದರಿಂದ ಮೀನುಗಾರರಿಗೆ ಹೆಚ್ಚು ಲಾಭ ಸಿಗಲಿದೆ ಎಂದು ಕೋಟ ಹೇಳಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮೀನುಗಾರಿಕಾ ಕಿಟ್‌, ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸಹಾಯಧನ, ಔಟ್‌ಬೋರ್ಡ್‌ ಎಂಜಿನ್ ಖರೀದಿಗೆ ಸಹಾಯಧನ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಶಾಸಕ ರಘುಪತಿ ಭಟ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಗಣೇಶ್, ತಾಲೂಕು ಪಂಚಾಯಿತಿ ಇಒ ಮೋಹನ್ ರಾಜ್ ಉಪಸ್ಥಿತರಿದ್ದರು.

ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ.ಕಿರಣ್‌ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಹಾಯಕ ನಿರ್ದೇಶಕ ಪಿ.ಪಾರ್ಶ್ವನಾಥ ಸ್ವಾಗತಿಸಿದರು.

‘420 ಕಿಸಾನ್ ಕ್ರೆಡಿಟ್‌ ಕಾರ್ಡ್‌’

ಜಿಲ್ಲೆಯಲ್ಲಿ ಕಿಸಾನ್ ಕ್ರೆಡಿಟ್‌ ಕಾರ್ಡ್ ಪಡೆಯಲು 2699 ಅರ್ಜಿಗಳು ಬಂದಿದ್ದು, 420 ಜನರಿಗೆ ಕಾರ್ಡ್‌ ನೀಡಲಾಗಿದೆ. ಈಗಾಗಲೇ ಬ್ಯಾಂಕ್‌ನಲ್ಲಿ ಸಾಲಪಡೆದು ಸುಸ್ತಿದಾರರಾಗಿರುವ ಮೀನುಗಾರರಿಗೆ ಕ್ರೆಡಿಟ್‌ ಕಾರ್ಡ್‌ಗಳು ಸಿಗುವುದಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್ ಹೇಳಿದರು.

ಬ್ಯಾಂಕ್‌ ಸಿಬಿಲ್‌ ಸ್ಕೋರ್ ಆಧಾರದಲ್ಲಿ ಸಾಲ ನೀಡುವ ಕ್ರಮ ಅನುಸರಿಸುತ್ತಿರುವುದರಿಂದ ಸುಸ್ತಿದಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳು ಸಿಗುವುದಿಲ್ಲ ಎಂದು ಎಂದು ಅವರು ಹೇಳಿದರು.

‘ಸಾಲ ಮನ್ನಾ ಹಣ ಬಿಡುಗಡೆ ವಿಳಂಬ’

ರಾಜ್ಯ ಸರ್ಕಾರ 23 ಸಾವಿರ ಮೀನುಗಾರ ಮಹಿಳೆಯರ ₹ 60.5 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ರೈತರಿಗೆ ಸಾಲಮನ್ನಾ ಯೋಜನೆಯಡಿ ಅನುಸರಿಸಿರುವ ವಿಧಾನಗಳನ್ನೇ ಮೀನುಗಾರರ ಸಾಲ ಮನ್ನಾಗೂ ಅನುಸರಿಸಿರುವ ಕಾರಣ ಹಣ ಬಿಡುಗಡೆ ವಿಳಂಬವಾಗಿದೆ. ಮೀನುಗಾರಿಕಾ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳ ವರ್ಗಾವಣೆಯಿಂದಲೂ ಸಮಸ್ಯೆಯಾಗಿದೆ. ಹಣ ಬಿಡುಗಡೆ ವಿಳಂಬವಾಗುತ್ತಿದ್ದಂತೆ ಬ್ಯಾಂಕ್‌ಗಳು ಸಾಲಗಾರರ ಉಳಿತಾಯ ಖಾತೆಯಲ್ಲಿರುವ ಹಣವನ್ನು ಸಾಲದ ಖಾತೆಗೆ ವಜಾಮಾಡಿಕೊಳ್ಳುತ್ತಿರುವ ದೂರುಗಳು ಕೇಳಿಬಂದಿವೆ. ಈ ವಿಚಾರವಾಗಿ ಬ್ಯಾಂಕ್‌ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗಿದ್ದು, ಮೀನುಗಾರರ ಸಾಲ ಮನ್ಣಾ ಹಣ ಬಿಡುಗಡೆ ಸರ್ಕಾರದ ಜವಾಬ್ದಾರಿ ಎಂದು ಲೀಡ್‌ ಬ್ಯಾಂಕ್‌ಗೆ ಖಾತ್ರಿ ಪತ್ರ ನೀಡಲಾಗಿದೆ. ಶೀಘ್ರ ಎಲ್ಲರ ಸಾಲದ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT