ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆಗೆ ಒಟಿಪಿ ಅಗತ್ಯವಿಲ್ಲ

ಇಂದಿನಿಂದ ಜಿಲ್ಲೆಯಲ್ಲಿ ವಿತರಣೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 31 ಮಾರ್ಚ್ 2020, 15:29 IST
ಅಕ್ಷರ ಗಾತ್ರ

ಉಡುಪಿ: ಏ.1ರಿಂದ ಜಿಲ್ಲೆಯಲ್ಲಿ ಪಡಿತರ ವಿತರಣೆ ಆರಂಭವಾಗಲಿದ್ದು, ಎರಡು ತಿಂಗಳ ಪಡಿತರವನ್ನು ಏಕಕಾಲದಲ್ಲಿ ವಿತರಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು,ಅಂತ್ಯೋದಯ, ಬಿಪಿಎಲ್ ಮತ್ತು ಎಪಿಲ್ ಕಾರ್ಡ್‍ದಾರರಿಗೆ ಸರ್ಕಾರದ ಸೂಚನೆಯಂತೆ 2 ತಿಂಗಳ ಪಡಿತರ ಸಿಗಲಿದೆ. ಪಡಿತರ ಪಡೆಯಲು ಒಟಿಪಿ ಕಡ್ಡಾಯವಿಲ್ಲ. ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿಕೊಂಡು ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಡಿತರ ವಿತರಣೆ ವೇಳೆ ಜನಸಂದಣಿ ತಪ್ಪಿಸಲು ಪ್ರತಿ ಅಂಗಡಿಯಲ್ಲಿ ನಿಗಧಿತ ಸಂಖ್ಯೆಯ ಪಡಿತರದಾರರಿಗೆ ಸರದಿಯಂತೆ ಅಂಗಡಿಗೆ ಬರುವಂತೆ ಮಾಹಿತಿ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಹಶೀಲ್ದಾರ್‌ಗಳು ಲೋಪವಾಗದಂತೆ ಉಸ್ತುವಾರಿ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಶಾಲೆಗಳಲ್ಲಿ ಉಳಿದಿರುವ ಬಿಸಿಯೂಟದ ಅಕ್ಕಿಯನ್ನು ಪೋಷಕರಿಗೆ ತಲುಪಿಸಬೇಕು. ಗರ್ಭಿಣಿ ಮತ್ತು ಬಾಣಂತಿಯರ ಕಿಟ್‌ಗಳನ್ನು ಅವರ ಮನೆಗಳಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಯೋಗಾಲಯ ಸ್ಥಾಪನೆಗೆ ಮನವಿ:

ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ತೆರೆಯಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಚರ್ಚಿಸುವುದಾಗಿ ಕೋಟ ಭರವಸೆ ನೀಡಿದರು.

ಸಾಮಾಜಿಕ ಅಂತರಕ್ಕೆ ಒತ್ತು: ಜಿಲ್ಲೆಯಲ್ಲಿ ದಿನಸಿ ಖರೀದಿಗೆ ಬೆಳಗ್ಗೆ 7 ರಿಂದ 11ರವರೆಗ ಸಮಯ ನಿಗಧಿಪಡಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ಸೂಚನೆ ನೀಡಲಾಗಿದೆ. ಇದುವರೆಗೂ ಯಾವುದೇ ಸಮಸ್ಯೆಗಳು ಉಂಟಾಗಿಲ್ಲ. ನಿರಾಶ್ರಿತರಿಗೆ ಅಗತ್ಯ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮೂರು ತಾಲ್ಲೂಕುಗಳಲ್ಲಿ ಶಂಕಿತ ಕೊರೊನಾ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್–19 ಆಸ್ಪತ್ರೆಯಾಗಿ ಬದಲಿಸಲಾಗಿದೆ. ಇನ್ಪೋಸಿಸ್‌ನಿಂದ ₹ 80 ಲಕ್ಷ ವೆಚ್ಚದಲ್ಲಿ ಸುರಕ್ಷಾ ಉಪಕರಣಗಳ ಸರಬರಾಜಾಗುತ್ತಿದೆ. ದಾನಿಗಳ ನೆರವಿನಿಂದ ಆಹಾರ ಕಿಟ್‌ಗಳು ಮತ್ತು ಅಗತ್ಯ ವಸ್ತುಗಳ ನೆರವು ಪಡೆಯಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

ಸಭೆಯಲ್ಲಿ ರಾಜ್ಯ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಡುಪಿ ಶಾಸಕ ರಘುಪತಿ ಭಟ್ , ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್, ತಹಸೀಲ್ದಾರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT