ಸೋಮವಾರ, ಜೂನ್ 21, 2021
21 °C

ಬೆಳೆ ಮಳೆ ಹಾನಿ ಸಮೀಕ್ಷೆ ನಿಖರವಾಗಿರಲಿ: ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪ್ರಕೃತಿ ವಿಕೋಪದಿಂದಾಗಿರುವ ಮನೆ ಹಾನಿ ಹಾಗೂ ಬೆಳೆ ಹಾನಿಯನ್ನು ಸ್ಥಳಕ್ಕೆ ತೆರಳಿ ನಿಖರವಾಗಿ ಅಂದಾಜಿಸಿ ಪರಿಹಾರ ನೀಡಬೇಕು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು ಪ್ರಾಥಮಿಕ ಹಂತದಲ್ಲೇ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ರೈತರಿಗೆ ನಷ್ಟವಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ 68 ಗ್ರಾಮಗಳಲ್ಲಿ ಹೆಚ್ಚಿನ ಮಳೆ ಹಾನಿಯಾಗಿದ್ದು, ಗ್ರಾಮ ಲೆಕ್ಕಿಗರು, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸಮೀಕ್ಷೆ ಮಾಡಬೇಕು. ಪಶ್ಚಿಮಘಟ್ಟದಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿಗಳು ಉಕ್ಕಿ, ಕೃಷಿ ಭೂಮಿಗೆ ಹಾನಿಯಾಗಿದೆ. ಜತೆಗೆ ಕಡಲ್ಕೊರೆತ ಉಂಟಾಗಿದೆ. ನಷ್ಟದ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಸಚಿವರು ತಿಳಿಸಿದರು.

ಮನೆ ಹಾನಿ ಸಮೀಕ್ಷೆ ಮಾಡುವಾಗ ನಿಖರತೆ ಆಧರಿಸಿ ಮಾನವೀಯ ಆಧಾರದಲ್ಲಿ ನಷ್ಟದ ಅಂದಾಜು ವರದಿ ನೀಡಿ ಎಂದು ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು. ಇದರ ಉಸ್ತುವಾರಿಯನ್ನು ತಹಶೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹಾಗೂ ಮರಣ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಗಮನಹರಿಸಿ, ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಬೆಡ್‌ಗಳ ಕೊರತೆಯಾಗಬಾರದು, ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ದಾಸ್ತಾನು ಇರಬೇಕು. 

ಕೋವಿಡ್ ಚಿಕಿತ್ಸೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಅಗತ್ಯ ವೇತನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ರೈತರಿಗೆ ಅಗತ್ಯ ಯೂರಿಯಾ ಗೊಬ್ಬರ ಸಿಗಬೇಕು. ಪೃಕೃತಿ ವಿಕೋಪ ನೆರೆ ಪರಿಹಾರ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಕೋಸ್ಟಲ್‌ ಗಾರ್ಡ್‌, ಪೊಲೀಸ್‍ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಹಕರಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್‌ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್ ,ಉಪವಿಭಾಗಾಧಿಕಾರಿ ರಾಜು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು