ಹೆಬ್ರಿ: ಸಣ್ಣ ನೀರಾವರಿ ಇಲಾಖೆಗಳಿಂದ ನಡೆಯುತ್ತಿರುವ ಡ್ಯಾಂ ಸಹಿತ ಕಿಂಡಿ ಅಣೆಕಟ್ಟೆಗಳು ಜನತೆಗೆ ನೀರಾವರಿಗೆ ಹೆಚ್ಚು ಪ್ರಯೋಜನವಾಗಬೇಕು. ಡ್ಯಾಂಗಳಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ಆಗಬಾರದು. ನಿರುಪಯುಕ್ತ ಕಡೆಗಳಲ್ಲಿ ಡ್ಯಾಂ ನಿರ್ಮಿಸಿದರೆ ಅಧಿಕಾರಿಗಳನ್ನು ಹುದ್ದೆಯಿಂದ ಅಮಾನತು ಮಾಡುತ್ತೇವೆ. ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ. ಪಾರದರ್ಶಕವಾಗಿ ಗುಣಮಟ್ಟದ ಕಾಮಗಾರಿ ನಡೆಯಬೇಕು’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಅವರು ತಾಲ್ಲೂಕಿನ ಚಾರ ನವೋದಯ ವಿದ್ಯಾಲಯದ ಬಳಿ ಸೀತಾನದಿ ಹೊಳೆಗೆ ನಿರ್ಮಾಣಗೊಳ್ಳುತ್ತಿರುವ ₹70 ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ಶುಕ್ರವಾರ ಪರಿಶೀಲನೆ ನಡೆಸಿ ಮಾತನಾಡಿದರು.
‘ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಡೆಯುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುತ್ತೇವೆ. ಸಮಸ್ಯೆಗಳಿದ್ದಲ್ಲಿ ಸ್ಥಳೀಯ ಮುಖಂಡರು, ಜನರೊಂದಿಗೆ ಚರ್ಚಿಸಿ ನಿವಾರಣೆ ಮಾಡುತ್ತೇವೆ. ಒಟ್ಟಿನಲ್ಲಿ ಇಲಾಖೆಯಿಂದ ಅತ್ಯುತ್ತಮ ಕೆಲಸಗಳು ನಡೆಯಬೇಕು ಎಂಬುದು ಸರ್ಕಾರ, ನನ್ನ ಉದ್ದೇಶ ಆಗಿದೆ’ ಎಂದು ಆಶ್ವಾಸನೆ ನೀಡಿದರು.
‘ರೈತರಿಗೆ ಮತ್ತು ಜನರಿಗೆ ಹೆಚ್ಚಿನ ಅನುಕೂಲವಾಗಲು ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ. ಪ್ರಗತಿ ವರ್ಷದ ಎಲ್ಲಾ ಕಾಮಗಾರಿಗಳನ್ನು ಮುಗಿಸಿಕೊಂಡು ಮುಂದಿನ ವರ್ಷಕ್ಕೆ ₹2 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆ ಬಂದಿದ್ದು, ಹಣದ ಲಭ್ಯತೆ ನೋಡಿಕೊಂಡು ಕೆಲಸ ಮಾಡುತ್ತೇವೆ. ಚೆಕ್ ಡ್ಯಾಂಗಳ ಬಗ್ಗೆ ದೂರುಗಳು ಬರುತ್ತಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಚಿವ ಬೋಸರಾಜು ಹೇಳಿದರು.
‘ಚಾರ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಕಾಮಗಾರಿ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಗುಣಮಟ್ಟಯುತವಾಗಿ ಕಾಮಗಾರಿಯನ್ನು ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ ಹುತ್ತುರ್ಕೆ, ಕಾಂಗ್ರೆಸ್ ಪ್ರಮುಖರಾದ ನವೀನ್ ಕೆ. ಅಡ್ಯಂತಾಯ, ಎಚ್. ಜನಾರ್ಧನ್, ಅಶೋಕ್ ಕುಮಾರ್ ಶೆಟ್ಟಿ ಚೋರಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಆಪರೇಶನ್ ಅತ್ಯಂತ ಕೆಟ್ಟ ಶಬ್ದ ದೇಶದಲ್ಲೇ ಮೊದಲು
ಆಪರೇಶನ್ ಕಮಲ ಶಬ್ದವನ್ನು ಬಳಸಿಕೊಂಡು ಕಾಂಗ್ರೆಸ್ ಶಾಸಕರನ್ನು ಸೆಳೆದು ಕೆಟ್ಟ ಸಂಪ್ರದಾಯ ಶುರು ಮಾಡಿದ್ದು ಬಿಜೆಪಿ. ಈಗ ಬಿಜೆಪಿಯವರಿಗೇ ಅದು ಮುಳುವಾಗಿದೆ. ಆಪರೇಶನ್ ಅತ್ಯಂತ ಕೆಟ್ಟ ಶಬ್ದ. ನಾನು ಆ ಶಬ್ದ ಬಳಕೆ ಮಾಡುವುದಿಲ್ಲ. ಬಿಜೆಪಿಯಲ್ಲಿ ಏನೂ ಇಲ್ಲ ಎಂದು ಈಗ ಬಿಜೆಪಿಯವರಿಗೆ ಮತ್ತು ಬಿಜೆಪಿ ಸೇರಿದವರಿಗೆ ಅರ್ಥವಾಗಿದೆ. ಕಾಂಗ್ರೆಸ್ ಅತ್ಯುತ್ತಮ ಪಕ್ಷ ಎಂದು ಅವರಾಗಿಯೇ ಸೇರಲು ಬರುತ್ತಿರಬಹುದು. 138 ಶಾಸಕರಿಂದ ನಮ್ಮ ಸರ್ಕಾರ ಸುಭದ್ರವಾಗಿದೆ. ನಮಗೆ ಯಾರನ್ನೂ ಸೆಳೆಯುವ ಅಗತ್ಯ ಇಲ್ಲ ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.