ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತನೀಡಿ: ಶೋಭಾ ಕರಂದ್ಲಾಜೆ ಮನವಿ

Last Updated 5 ಏಪ್ರಿಲ್ 2019, 13:25 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಶುಕ್ರವಾರ ಉಡುಪಿಯ ಹಲವೆಡೆ ಬಿರುಸಿನ ಪ್ರಚಾರ ನಡೆಸಿದರು.

ಬೆಳಿಗ್ಗೆ ಕೊಂಡಕೂರು ವಾರ್ಡ್‌ನಲ್ಲಿ ಕಾರ್ಯಕರ್ತರ ಸಭೆ ಹಾಗೂ ಚಾಯ್‌ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ‘ಉಡುಪಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಆರೋಪಿಸಿದರು.

ಉಜ್ವಲ ಯೋಜನೆಯಡಿ ಸಾವಿರಾರು ಬಡವರಿಗೆ ಗ್ಯಾಸ್‌ ಸಿಲಿಂಡರ್ ಸಂಪರ್ಕ ನೀಡಲಾಗಿದೆ. ಆಯುಷ್ಮಾನ್ ಯೋಜನೆಯಡಿ ₹ 5 ಲಕ್ಷದವರೆಗೂ ಆರೋಗ್ಯ ವೆಚ್ಚ ಭರಿಸಲಾಗುವುದು. ಹಿಂದೆಲ್ಲ, ಆರೋಗ್ಯ ಸಮಸ್ಯೆ ಉಂಟಾದಾಗ, ಆರ್ಥಿಕ ನೆರವಿಗಾಗಿ ಜನಪ್ರತಿನಿಧಿಗಳ ಮುಂದೆ ಕೈವೊಡ್ಡಬೇಕಿತ್ತು. ಈಗ ಬಡವರ ₹ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿತಿಂಗಳು ₹ 3000 ಪಿಂಚಣಿ ನೀಡುವ ಯೋಜನೆಯನ್ನು ಕೇಂದ್ರ ಜಾರಿಗೊಳಿಸಿದೆ. ದೇಶದ ರಕ್ಷಣೆಗೆ ಒತ್ತುನೀಡಿದ್ದು, ಭಯೋತ್ಪಾದಕರನ್ನು ಮಟ್ಟಹಾಕಲಾಗುತ್ತಿದೆ. ಹಾಗಾಗಿ, ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಬಿಜೆಪಿಗೆ ಮತಹಾಕಬೇಕು ಎಂದು ಮನವಿ ಮಾಡಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ವಿ.ಎಸ್‌.ಆಚಾರ್ಯ ಅವರ ಆಡಳಿತಾವಧಿಯಲ್ಲಿ ದಿನದ 24 ಗಂಟೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಅದರಂತೆ ಉಡುಪಿ ನಗರದಲ್ಲಿ ನಿರಂತರ ನೀರು ಕೊಡುವ ಜವಾಬ್ದಾರಿ ಬಿಜೆಪಿಯದ್ದು ಎಂದರು.

ಆಸ್ಕರ್ ಫೆರ್ನಾಂಡೀಸ್ ಅವರು ಕೇಂದ್ರ ಹೆದ್ದಾರಿ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಹೆದ್ದಾರಿಗಳ ನಿರ್ಮಾಣಕ್ಕೆ ಕೇವಲ ₹ 16 ಕೋಟಿ ನೀಡಿದ್ದರು. ಶೋಭಾ ಕರಂದ್ಲಾಜೆ ಅವರು ಸಂಸದೆಯಾದ ಬಳಿಕ ನೂರಾರು ಕೋಟಿ ಅನುದಾನ ತಂದು ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದರು ಎಂದರು.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ₹ 2,500 ಕೋಟಿ ಅನುದಾನ ತಂದಿರುವುದಾಗಿ ಪ್ರಮೋದ್ ಮಧ್ವರಾಜ್ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಬೇಕು ಎಂದರು.

ಈ ಸಂದರ್ಭ ಬಿಜೆಪಿ ನಗರ ಅಧ್ಯಕ್ಷ ಪ್ರಭಾಕರ್ ಪೂಜಾರಿ, ವಾರ್ಡ್‌ ಸಮಿತಿ ಕಾರ್ಯದರ್ಶಿ ಮನೋಜ್ ಕೊಡಂಕೂರು, ಪ್ರಶಾಂತ್ ಪೂಜಾರಿ, ಅಂಬರೀಶ್, ನಗರಸಭಾ ಸದಸ್ಯ ಸಂತೋಷ್ ಪೂಜಾರಿ, ಕಕ್ಕುಂಜೆ ಬಾಲಕೃಷ್ಣ ಶೆಟ್ಟಿ, ಸಂಪಾವತಿ ಕೊಡಂಕೂರು, ವಿಜಯ್‌ ಕೊಡವೂರು, ಜಯಂತಿ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT