ಸೋಮವಾರ, ಜೂನ್ 14, 2021
26 °C
ಮತಗಳಾಗಿ ಬದಲಾದ ಭಾವನಾತ್ಮಕ ವಿಚಾರಗಳು

ಉಡುಪಿ–ಚಿಕ್ಕಮಗಳೂರು: ಮೋದಿ ಅಲೆಯಲ್ಲಿ ಅರಳಿದ ಕಮಲ; ಮೈತ್ರಿ ತಿರಸ್ಕರಿಸಿದ ಮತದಾರ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಅರಳಿತು ಕಮಲ..ಬಿಜೆಪಿಯ ಅಬ್ಬರಕ್ಕೆ ದೂಳೀಪಟವಾಯ್ತು ಕಾಂಗ್ರೆಸ್‌–ಜೆಡಿಎಸ್‌. ಶೋಭಾ ಕರಂದ್ಲಾಜೆಗೆ ಸಿಕ್ತು ಸತತ 2ನೇ ಗೆಲುವಿನ ಸಿಹಿ..ಮೊದಲ ಯತ್ನದಲ್ಲೇ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ಗೆ ಸೋಲಿನ ಕಹಿ..

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಬಿಜೆಪಿ ಪ್ರಚಂಡ ಜಯ ಸಾಧಿಸಿದೆ. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ ಪರಾಭವಗೊಂಡಿದ್ದಾರೆ. ಮತದಾರರು ಮತ್ತೊಮ್ಮೆ ಬಿಜೆಪಿಯನ್ನು ಹರಸಿದ್ದಾರೆ.

ಭದ್ರವಾಯ್ತು ಕೇಸರಿ ಕೋಟೆ:

2014ರ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ 1,81,643 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಮಣಿಸಿದ್ದರು. ಈಗ ಮತ್ತೊಮ್ಮೆ ಜಯ ಸಾಧಿಸಿ ಕೇಸರಿ ಕೋಟೆಯನ್ನು ಮತ್ತಷ್ಟು ಭದ್ರಗೊಳಿಸಿದ್ದಾರೆ.

ಮೈತ್ರಿ ಒಪ್ಪದ ಮತದಾರ:

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯನ್ನು ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಮೈತ್ರಿ ಧರ್ಮ ಪಾಲನೆಗೆ ಉಭಯ ಪಕ್ಷಗಳು ಮಾಡಿಕೊಂಡ ಸೀಟು ಹೊಂದಾಣಿಕೆ ಒಪ್ಪಂದವನ್ನು ಮತದಾರರು ಒಪ್ಪಿಕೊಳ್ಳದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಮೈತ್ರಿಯ ವೈಫಲ್ಯಕ್ಕೆ ಹಲವು ಕಾರಣಗಳು ಸಿಗುತ್ತವೆ. 

ಬಂಡಾಯದ ಬಿಸಿ:

ಉಡುಪಿ–ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಾಗಲೇ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿತ್ತು. ಕರಾವಳಿಯಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟ ಹೈಕಮಾಂಡ್ ನಡೆಗೆ ಬಹಿರಂಗ ಟೀಕೆಗಳು ಕೇಳಿಬಂದಿದ್ದವು.

ಪಕ್ಷದ ವಿರುದ್ಧವೇ ಬಂಡಾಯದ ಕಹಳೆ ಮೊಳಗಿಸಿದ ಅಮೃತ್ ಶೆಣೈ ಪಕ್ಷೇತ್ತರ ಅಭ್ಯರ್ಥಿಯಾಗ ಸ್ಪರ್ಧಿಸಿದ್ದರು. ಅವರನ್ನು ಪಕ್ಷದಿಂದ ಅಮಾನತು ಮಾಡಿ ಬಂಡಾಯ ಶಮನಕ್ಕೆ ಯತ್ನಿಸಲಾಯಿತಾದರೂ ಬೂದಿಯೊಳಗಿನ ಕೆಂಡದಂತೆ ಬಂಡಾಯ ಹೊಗೆಯಾಡುತ್ತಿದ್ದುದ್ದು ಮಾತ್ರ ಸತ್ಯ ಎನ್ನಲಾಗುತ್ತಿದೆ.

ಹಸ್ತ ಚಿಹ್ನೆ ನಾಪತ್ತೆ:

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಸ್ಪರ್ಧಿಸಿರಲಿಲ್ಲ. ಈ ಬಾರಿ ಹಸ್ತದ ಗುರುತು ಇಲ್ಲದಿರುವುದು ಸೋಲಿಗೆ ಪ್ರಮುಖ ಕಾರಣ ಎನ್ನಲಾಗ್ತಿದೆ.

ಇಂದಿಗೂ ಕರಾವಳಿ, ಮಲೆನಾಡಿನಲ್ಲಿ ‘ಕೈ’ ಚಿಹ್ನೆಗೆ ಮತಹಾಕುವ ಕಟ್ಟಾ ಕಾಂಗ್ರೆಸ್‌ ಬೆಂಬಲಿಗರಿದ್ದಾರೆ. ಈ ಬಾರಿ ಹಸ್ತದ ಗುರುತು ಇರದ ಕಾರಣ ಬೆಂಬಲಿಗರು ಕೈ ಕೊಟ್ಟಿರಬಹುದು. ಪಕ್ಷದೊಳಗಿನ ‘ಒಳ ಹೊಡೆತವೂ’ ಸೋಲಿಗೆ ಕಾರಣವಾಗಿರಬಹುದು.

ತಲೆ ಕೆಳಗಾದ ಲೆಕ್ಕಾಚಾರ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಬಲವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಕ್ತಿ ಹೆಚ್ಚಾಗಿದೆ. ಎರಡೂ ಕ್ಷೇತ್ರಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಸುಲಭ ಎಂಬ ಉಭಯ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

ಕಮಲ ಅರಳಲು ಕಾರಣ:

ಬಿಜೆಪಿ ಗೆಲುವಿನ ಹಿಂದೆಯೂ ಹಲವು ಕಾರಣಗಳು ಸಿಗುತ್ತವೆ. ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ಧಂತೆ ಪಕ್ಷದ ಕಾರ್ಯಕರ್ತರು ತಳಮಟ್ಟದಲ್ಲಿ ಪ್ರಚಾರ ಆರಂಭಿಸಿ ಗೆಲುವಿಗೆ ಗಟ್ಟಿ ಅಡಿಪಾಯ ಹಾಕಿದರು. ರಾಜ್ಯ ನಾಯಕರು ಟಿಕೆಟ್‌ ಆಕಾಂಕ್ಷಿಗಳ ಭಿನ್ನಮತವನ್ನು ಆರಂಭದಲ್ಲೇ ಶಮನಗೊಳಿಸಿದ್ದು ನೆರವಾಯಿತು.

ಮೋದಿ ಮೇನಿಯಾ:

ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ವೈಯಕ್ತಿಕ ಮತಯಾಚನೆ ಮಾಡಿದ್ದು ತೀರಾ ಕಡಿಮೆ ಎಂದೇ ಹೇಳಬಹುದು. ಬದಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಿ ಎಂದು ಎಲ್ಲೆಡೆ ಪ್ರಚಾರ ಮಾಡಿದ್ದರು. ಮೋದಿ ಮೇಲಿನ ಪ್ರೀತಿ ಮತಗಳಾಗಿ ಬದಲಾಗಿದ್ದು ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಬಿಜೆಪಿಯ ಭದ್ರಕೋಟೆ:

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾಪು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದಾರೆ. ಆಯಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಶಾಸಕರು ಬಿಜೆಪಿಯನ್ನು ಗೆಲುವಿನ ದಡ ಸೇರಿಸಿದ್ದಾರೆ.

ಶೋಭಾ ನಾಯಕತ್ವಕ್ಕೆ ಜಯ:

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಖಾಡಕ್ಕಿಳಿದ ಶೋಭಾ ಕರಂದ್ಲಾಜೆ ಕಾರ್ಯಕರ್ತರನ್ನು ಒಗ್ಗೂಡಿಸಿದರು. ವೈಮನಸ್ಸು ಬಿಟ್ಟು ಪಕ್ಷಕ್ಕಾಗಿ ಕೆಲಸ ಮಾಡುವಂತೆ ಸ್ಥಳೀಯರ ನಾಯಕರ ಮನವೊಲಿಸುವಲ್ಲಿ ಸಫಲರಾದರು. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಬೂತ್ ಮಟ್ಟದಲ್ಲಿ, ಬ್ಲಾಕ್ ಮಟ್ಟದಲ್ಲಿ ನಿರಂತರ ಕಾರ್ಯಕರ್ತರ ಸಭೆ ನಡೆಸಿದರು. ಟಿಕೆಟ್‌ ಆಕಾಂಕ್ಷಿಗಳ ಬಾಯಿ ಮುಚ್ಚಿಸಿದ್ದು ಅವರ ಗೆಲುವಿಗೆ ನೆರವಾಯಿತು ಎನ್ನುತ್ತಾರೆ ರಾಜಕೀಯ ಪಂಡಿತರು.

‘ಮುನ್ನಲೆಗೆ ಬಂದ ದೇಶಪ್ರೇಮ, ಯುದ್ಧ’ 

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಅಭಿವೃದ್ಧಿ ವಿಚಾರಗಳು ಹಿನ್ನೆಲೆಗೆ ಸರಿದು, ದೇಶಪ್ರೇಮ, ಯುದ್ಧೋನ್ಮಾದ, ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ನಂತಹ ವಿಚಾರಗಳು ಮುನ್ನೆಲೆಗೆ ಬಂದು ವಿಜೃಂಭಿಸಿದವು. ‘ಪ್ರಜಾವಾಣಿ’ ಕ್ಷೇತ್ರ ಸಮೀಕ್ಷೆಯಲ್ಲೂ ಹೆಚ್ಚಿನ ಕಡೆಗಳಲ್ಲಿ ಮತದಾರರು ರಣೋತ್ಸಾಹ ತೋರುತ್ತಿದ್ದುದು ಕಂಡುಬಂತು. ಯುವ ಮತದಾರರ ಜತೆ ಹಿರಿಯ ಮತದಾರರೂ ದೇಶದ ಭದ್ರತೆ, ಪಾಕಿಸ್ತಾನದ ಮೇಲಿನ ದಾಳಿ ಕುರಿತು ಮಾತನಾಡುತ್ತ, ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಖರಿಯನ್ನು ಶ್ಲಾಘಿಸಿದ್ದು ಕಂಡುಬಂತು. ಸಾಮಾಜಿಕ ಜಾಲತಾಣದಲ್ಲಿ ಎದ್ದ ಮೋದಿ ಪರ ದೊಡ್ಡ ಅಲೆ ಬಿಜೆಪಿಗೆ ಭರ್ಜರಿ ಮತ ಫಸಲು ತಂದುಕೊಟ್ಟಿದ್ದು ಸುಳ್ಳಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು