ಮಾತೃಪೂರ್ಣ ಯೋಜನೆ ಸ್ಥಗಿತ ಇಲ್ಲ: ಜಯಮಾಲಾ

7

ಮಾತೃಪೂರ್ಣ ಯೋಜನೆ ಸ್ಥಗಿತ ಇಲ್ಲ: ಜಯಮಾಲಾ

Published:
Updated:
Deccan Herald

ಉಡುಪಿ: ರಾಜ್ಯದಲ್ಲಿ ಕರಾವಳಿಯ ಎರಡು ಜಿಲ್ಲೆಗಳು, ರಾಮನಗರ, ಕೊಡಗು ಬಿಟ್ಟರೆ ಉಳಿದ 26 ಜಿಲ್ಲೆಗಳಲ್ಲಿ ಮಾತೃಪೂರ್ಣ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ ಈ ಯೋಜನೆ ನಿಲ್ಲಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ತಿಳಿಸಿದರು.

ಭಾನುವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾತೃಪೂರ್ಣ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ ಒಬ್ಬ ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೇಂದ್ರ ಸರ್ಕಾರ ₹ 1,800 ಹಾಗೂ ರಾಜ್ಯ ಸರ್ಕಾರ ₹ 8,000 ವ್ಯಯಿಸುತ್ತಿದೆ ಎಂದರು.

ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇರುವ ಹೆಣ್ಣು ಮಕ್ಕಳು ರಕ್ತ ಹೀನತೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಅನ್ನ, ಸಾಂಬಾರು, ಪಲ್ಯ, ಮೊಟ್ಟೆ, ಹಾಲು ಹಾಗೂ ಒಂದು ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಗರ್ಭಿಣಿ ಹಾಗೂ ಬಾಣಂತಿಗೆ ದಿನಕ್ಕೆ ₹ 21ರ ಮೊತ್ತದಲ್ಲಿ ಊಟ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಕೆಲವೊಂದು ಜಿಲ್ಲೆಯಲ್ಲಿ ಇನ್ನೂ ಕಿತ್ತು ತಿನ್ನುವ ಬಡತನ ಜನರನ್ನು ಕಾಡುತ್ತಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಸಾಧ್ಯವಾಗದ ಸ್ಥಿತಿ ಇದೆ. ಈ ಹಿಂದೆ ನೀಡುತ್ತಿರುವ ಕಿಟ್‌ ಮನೆಯವರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಅಂಗನವಾಡಿಯಲ್ಲಿ ಅಡುಗೆ ತಯಾರಿಸಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡುತ್ತಿದೆ ಎಂದರು.

‘ಕರಾವಳಿ ನನ್ನೂರು, ಸಚಿವ ಸ್ಥಾನ ನಾನು ಕೇಳಿ ಪಡೆದುದಲ್ಲ. ಉಸ್ತುವಾರಿ ಸಚಿವೆಯಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿನ ನಾಯಕರೊಂದಿಗೆ ಈ ಭಾಗದ ಬೇಡಿಕೆ ಹಾಗೂ ಸಮಸ್ಯೆಗಳನ್ನು ಚರ್ಚಿಸಿ ಅಗತ್ಯವಿರುವ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ’ ಎಂದರು.

ಜಿಲ್ಲೆಯಲ್ಲಿ ಎಲ್ಲ ಐವರು ಶಾಸಕರಿಗೂ ಜವಾಬ್ದಾರಿ ಇದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಿದಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದರು.

ಕಳೆದ ಮೂರು ತಿಂಗಳಿನಿಂದ ಉಡುಪಿಯಲ್ಲಿ ನಡೆದಿರುವ 2 ಕೊಲೆ ಹಾಗೂ ಅನುಮಾನಸ್ಪದ ಸಾವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಪ್ರಕರಣಗಳು ತನಿಖೆಯ ಹಂತದಲ್ಲಿ ಇದೆ. ಈ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !