ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪ್ರವೇಶ: ನಾಗರಿಕರಲ್ಲಿ ಸಂತಸ

ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ: ಕುಡಿಯವ ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸ
Last Updated 10 ಜೂನ್ 2019, 15:34 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಗೆ ಸೋಮವಾರ ಮುಂಗಾರು ಪ್ರವೇಶವಾಗಿದ್ದು, ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಮೋಡ ಕವಿದ ವಾತಾವರಣ ನಿರ್ಮಾಣವಾಗಿ ತಂಪಾದ ಗಾಳಿ ಬೀಸುತ್ತಾ ಮಳೆಗಾಲದ ಅನುಭವ ನೀಡಿತು.

ಬೆಳಿಗ್ಗೆ ಸ್ವಲ್ಪ ಬಿರುಸಾಗಿ ಸುರಿದ ಮಳೆ ನಂತರ ಬಿಟ್ಟು ಬಿಟ್ಟು ಸುರಿಯುತ್ತಲೇ ಇತ್ತು. ಮಳೆಯಿಂದ ಎಲ್ಲಿಯೂ ಹಾನಿ ಸಂಭವಿಸಿಲ್ಲ. ಬಿಸಿಲಿನ ದಗೆಯಿಂದ ಸುಡುತ್ತಿದ್ದ ವಾತಾವರಣ ವರುಣನ ಆಗಮನದಿಂದ ಕೊಂಚ ತಂಪಾಯಿತು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಹೊತ್ತಿನಲ್ಲಿ ಮಳೆ ಸುರಿದಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಬರಿದಾಗಿರುವ ಬಜೆ ಜಲಾಶಯಕ್ಕೆ ನೀರು ಹರಿಯುವ ಹಾಗೂ ಬರಿದಾಗಿರುವ ಬಾವಿಗಳಲ್ಲಿ ಮತ್ತೆ ಜೀವಸೆಲೆ ಕಾಣುವ ಹಂಬಲದಲ್ಲಿದ್ದಾರೆ ನಾಗರಿಕರು.

ಹೆಬ್ರಿ, ಕಾಪು, ಪಡುಬಿದ್ರಿ, ಹಿರಿಯಡ್ಕ, ಬೈಂದೂರು, ಕುಂದಾಪುರ ತಾಲ್ಲೂಕುಗಳಲ್ಲೂ ಮಳೆ ಬಿದ್ದಿರುವ ವರದಿಯಾಗಿದೆ. ಮುಂದೆ ಮಳೆ ಬಿರುಸಾದರೆ ಕೃಷಿ ಚಟುವಟಿಕೆಗಳು ಬಿರುಸು ಪಡೆಯಲಿವೆ.

ವಾಯುಭಾರ ಕುಸಿತ: ಸುರಕ್ಷತೆಗೆ ಸೂಚನೆ

ಮುಂಗಾರು ಮಳೆ ಕೇರಳ ರಾಜ್ಯ ಪ್ರವೇಶಿಸಿದ್ದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವುಂಟಾಗುವ ಸಾಧ್ಯತೆ ಇರುವುದರಿಂದ ಮುಂದಿನ 2-3 ದಿನಗಳಲ್ಲಿ ರಾಜ್ಯದ ಕರಾವಳಿ ಒಳನಾಡು ಪ್ರದೇಶದ ಹಲವು ಭಾಗಗಳಲ್ಲಿ ಗಂಟೆಗೆ 35-45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಸಾರ್ವಜನಿಕರು ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ:1077, ದೂರವಾಣಿ ಸಂಖ್ಯೆ: 0820-2574802 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT